ಹನೂರು (ಚಾಮರಾಜನಗರ ಜಿಲ್ಲೆ): ಮಲೆ ಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯ ವ್ಯಾಪ್ತಿಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹೆಣ್ಣು ಹುಲಿಯನ್ನು ಮೂರು ಭಾಗಗಳಾಗಿ ತುಂಡರಿಸಿ ಹತ್ಯೆ ಮಾಡಲಾಗಿದೆ.
ಗುರುವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ವೇಳೆ ಹುಲಿಯ ತಲೆ, ಮುಂಗಾಲಿನ ಭಾಗ ಮಣ್ಣಿನಲ್ಲಿ ಹುದುಗಿಸಿದ್ದು ಪತ್ತೆಯಾಗಿತ್ತು. ಶೋಧ ನಡೆಸಿದಾಗ ಉಳಿದ ಕಳೇಬರ ಸಿಕ್ಕಿದೆ.
ಹುಲಿಯ ಉಗುರು, ಹಲ್ಲು, ಚರ್ಮವನ್ನು ಹಾಗೆಯೇ ಬಿಡಲಾಗಿದ್ದು, ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ದ್ವೇಷದಿಂದ ಹುಲಿಯ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕಳ್ಳ ಬೇಟೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ತನಿಖೆಗೆ ಶ್ವಾನದಳದ ನೆರವು ಪಡೆಯಲಾಗಿದೆ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.
ತನಿಖೆಗೆ ಪಿಸಿಸಿಎಫ್ ನೇತೃತ್ವದ ತಂಡ: ಹುಲಿ ಹತ್ಯೆಯ ಪ್ರಕರಣದ ತನಿಖೆಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದ ತಂಡ ರಚಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು. 3 ವರ್ಷಗಳಲ್ಲಿ ದಾಖಲಾದ ಬೇಟೆ ಪ್ರಕರಣಗಳ ಬಗ್ಗೆ ಗಮನ ಹರಿಸಿ ತನಿಖಾ ವರದಿಗಳ ಪರಾಮರ್ಶಿಸಬೇಕು. ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸು ವರದಿಯನ್ನು 8 ದಿನಗಳೊಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
‘ಘಟನೆ ಈ ವನ್ಯಜೀವಿ ಧಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಬೇಟೆ ಆಗುತ್ತಿರುವುದನ್ನು ದೃಢಪಡಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.
ಇತ್ತೀಚೆಗೆ, ಇದೇ ವನ್ಯಧಾಮದಲ್ಲಿ ಐದು ಹುಲಿಗಳನ್ನು ವಿಷವಿಕ್ಕಿ ಹತ್ಯೆ ಮಾಡಲಾಗಿತ್ತು.
ವಿಷಪ್ರಾಶನ ಶಂಕೆ: ಆರೋಪಿ ಸುಳಿವು ಹುಲಿ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಯ ಬಂಧನದ ನಂತರ ಹತ್ಯೆಗೆ ನಿಖರ ಕಾರಣ ತಿಳಿದುಬರಲಿದೆ. ಅಂದಾಜು 12 ವರ್ಷದ ಹುಲಿಯ ಕೋರೆಹಲ್ಲುಗಳು ದುರ್ಬಲವಾಗಿದ್ದರಿಂದ ಜಾನುವಾರುಗಳನ್ನು ಬೇಟೆಯಾಡುತ್ತಿತ್ತು. ಮೇಲ್ನೋಟಕ್ಕೆ ವಿಷಪ್ರಾಶನದಿಂದ ಹುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು ವಿಧಿವಿಜ್ಞಾನ ಪ್ರಯೋಗಾಲದಿಂದ ವರದಿ ಬಂದ ಬಳಿಕ ದೃಢವಾಗಲಿದೆ. ಹುಲಿಯ ಮೇಲೆ ಗುಂಡು ಹಾರಿಸಲಾಗಿಲ್ಲ ಅಂಗಾಂಗಗಳೂ ಕಾಣೆಯಾಗಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.