ADVERTISEMENT

ಚಾಮರಾಜನಗರ: ಅಕ್ರಮ ಮದ್ಯ ಮಾರಾಟದ ದರ್ಬಾರು!

ಪೊಲೀಸರಿಂದ ₹11.59 ಲಕ್ಷ ಮೌಲ್ಯದ 4,605 ಲೀಟರ್‌ ಮದ್ಯ ವಶ, ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚು

ಸೂರ್ಯನಾರಾಯಣ ವಿ
Published 18 ಜೂನ್ 2021, 19:30 IST
Last Updated 18 ಜೂನ್ 2021, 19:30 IST
ಇತ್ತೀಚೆಗೆ ಪ್ರಕರಣವೊಂದರಲ್ಲಿ ಪೊಲೀಸರು ವಶಪಡಿಸಿಕೊಂಡ ಮದ್ಯದ ಬಾಟಲಿಗಳು
ಇತ್ತೀಚೆಗೆ ಪ್ರಕರಣವೊಂದರಲ್ಲಿ ಪೊಲೀಸರು ವಶಪಡಿಸಿಕೊಂಡ ಮದ್ಯದ ಬಾಟಲಿಗಳು   

ಚಾಮರಾಜನಗರ: ಕೋವಿಡ್‌ 2ನೇ ಅಲೆ ನಿಯಂತ್ರ‌ಣಕ್ಕಾಗಿ ಜಿಲ್ಲೆಯಲ್ಲಿ ಏಪ್ರಿಲ್‌ 27ರಿಂದ ಲಾಕ್‌ಡೌನ್‌ ನಿರ್ಬಂಧಗಳನ್ನು ಜಾರಿಗೊಳಿಸಿದ ನಂತರ ಅಕ್ರಮ ಮದ್ಯ ಸಾಗಣೆಯ ಹಾವಳಿ ಮಿತಿ ಮೀರಿದೆ.

ಜಿಲ್ಲೆಯಲ್ಲಿ ಒಂದಿಲ್ಲೊಂದು ಭಾಗದಲ್ಲಿ ಪೊಲೀಸರು ಪ್ರತಿ ದಿನ ಅಕ್ರಮ ಮದ್ಯ ಸಾಗಣೆ ಮಾಡುವವರನ್ನು ಪತ್ತೆ ಹೆಚ್ಚಿ, ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ.

ಪೊಲೀಸ್‌ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಜನವರಿ 1ರಿಂದ ಮೇ 31ರವರೆಗೆ ಅಕ್ರಮ ಮದ್ಯ ಸಾಗಾಟ, ಮಾರಾಕ್ಕೆ ಸಂಬಂಧಿಸಿದಂತೆ 479 ಪ‍್ರಕರಣಗಳನ್ನು ದಾಖಲಿಸಲಾಗಿದೆ. 534 ಆರೋಪಿಗಳನ್ನು ಬಂಧಿಸಲಾಗಿದೆ. 4,605 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ₹11,59,444.

ADVERTISEMENT

479 ಪ್ರಕರಣಗಳ ಪೈಕಿ ಶೇ 80ಕ್ಕೂ ಹೆಚ್ಚು ಪ್ರಕರಣಗಳು ಲಾಕ್‌ಡೌನ್‌ ಅವಧಿಯವು. ಜೂನ್‌ ತಿಂಗಳ ಪ್ರಕರಣಗಳು ಇದರಲ್ಲಿ ಉಲ್ಲೇಖವಾಗಿಲ್ಲ. ಈ ತಿಂಗಳ 7ರಂದು ಒಂದೇ ದಿನ ಜಿಲ್ಲೆಯಾದ್ಯಂತ 18 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. 9ರಂದು ಒಂದೇ ದಿನ ಏಳು ಪ್ರಕರಣಗಳನ್ನು ದಾಖಲಿಸಿದ್ದರು. ಈ ತಿಂಗಳ ಮೊದಲ 16 ದಿನಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಹೇಳುತ್ತಾರೆ ಪೊಲೀಸರು.

ಹೆಚ್ಚಿನ ಬೆಲೆಗೆ ಮಾರಾಟ ಯತ್ನ: ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ಮಾರಾಟಕ್ಕೂ ವಾರದ ಮೂರು ದಿನ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮದ್ಯಪ್ರಿಯರಿಗೆ ಸಾಕಷ್ಟು ಮದ್ಯ ಲಭ್ಯವಾಗುತ್ತಿಲ್ಲ. ಇದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಕೆಲವರು, ನಗರ, ಪಟ್ಟಣ ಪ್ರದೇಶಗಳ ಮದ್ಯದ ಅಂಗಡಿಗಳಿಂದ ಹೆಚ್ಚು ಮದ್ಯ ಖರೀದಿಸಿ, ದ್ವಿಚಕ್ರ ವಾಹನಗಳು, ಕಾರು, ಸರಕು ಸಾಗಣೆ ವಾಹನಗಳಲ್ಲಿ ಬಚ್ಚಿಟ್ಟು ಗ್ರಾಮೀಣ ಭಾಗಗಳಿಗೆ ಕೊಂಡೊಯ್ದು ಹೆಚ್ಚು ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ.

3 ಅಂತರರಾಜ್ಯ ಪ್ರಕರಣ: ನೆರೆಯ ತಮಿಳುನಾಡು ಹಾಗೂ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡಲು ಯತ್ನಿಸಿದ್ದ ಮೂರು ಪ್ರಕರಣಗಳನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

‘ಆರೋಪಿಗಳು ಸರಕು ಸಾಗಣೆ ವಾಹನಗಳಲ್ಲಿತರಕಾರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ನಡುವೆ ಮದ್ಯದ ಬಾಟಲಿಗಳನ್ನು ಬಚ್ಚಿಟ್ಟು ಸಾಗಣೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಎರಡು ಪ್ರಕರಣಗಳು ಗುಂಡ್ಲುಪೇಟೆ ಠಾಣೆಯಲ್ಲಿ ದಾಖಲಾಗಿದ್ದರೆ, ಇನ್ನೊಂದು ಪ್ರಕರಣ ಚಾಮರಾಜನಗರ ಪೂರ್ವ ಠಾಣೆಯಲ್ಲಿ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವರ್ಷದ ಪ್ರಕರಣ ಆರು ತಿಂಗಳಲ್ಲಿ!

2020ದಲ್ಲಿ ಇಡೀ ವರ್ಷ 219 ಪ್ರಕರಣಗಳು ದಾಖಲಾಗಿತ್ತು. 236 ಆರೋಪಿಗಳು ಬಂಧನಕ್ಕೆ ಒಳಗಾಗಿದ್ದರು. ₹3.67 ಲಕ್ಷ ಮೌಲ್ಯದ 1,789 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿತ್ತು.

‘ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸಿದರೆ, ಈ ವರ್ಷ ಮೊದಲ ಆರು ತಿಂಗಳಲ್ಲೇ ಅದಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನವರಿ, ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಶೇ 85ಕ್ಕೂ ಹೆಚ್ಚು ಪ್ರಕರಣಗಳು ಲಾಕ್‌ಡೌನ್‌ ಜಾರಿಯಲ್ಲಿದ್ದ ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳಲ್ಲೇ ದಾಖಲಾಗಿವೆ’ ಎಂದು ದಿವ್ಯಾ ಸಾರಾ ಥಾಮಸ್‌ ಅವರು ಮಾಹಿತಿ ನೀಡಿದರು.

‘ಅಕ್ರಮ ಮದ್ಯದ ವಹಿವಾಟಿನ ಮೇಲೆ ನಿಗಾ ಇಡುವುದಕ್ಕೆ ಪ್ರತ್ಯೇಕ ತಂಡಗಳನ್ನು ರಚನೆ ಮಾಡಿಲ್ಲ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಹಾಗೂ ಅನುಮಾನ ಬಂದು ವಾಹನಗಳ ತಪಾಸಣೆ ನಡೆಸಿ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.