ADVERTISEMENT

ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಪಂಚಾಯಿತಿಗಳಲ್ಲಿ ವಿದ್ಯಾವಂತರ ದರ್ಬಾರ್‌

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗೆಲುವು

ಮಲ್ಲೇಶ ಎಂ.
Published 3 ಜನವರಿ 2021, 19:30 IST
Last Updated 3 ಜನವರಿ 2021, 19:30 IST
ನಂದೀಶ್‌, ಪ್ರಿಯಾ
ನಂದೀಶ್‌, ಪ್ರಿಯಾ   

ಗುಂಡ್ಲುಪೇಟೆ: ಇತ್ತೀಚಿನವರೆಗೂ ಚುನಾವಣೆಯಲ್ಲಿ ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದ ವಿದ್ಯಾವಂತ ಯುವಕರು ಈಗೀಗ ರಾಜಕೀಯದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ವಿವಿಧ ಪಕ್ಷಗಳ ಬೆಂಬಲಿತರಾಗಿ ಸ್ಪರ್ಧಿಸಿ ವಿಜೇತರಾಗಿದ್ದಾರೆ.

ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಬೇಸತ್ತು ಕೆಲ ಯುವಕರು ರಾಜಕೀಯ ಪ್ರವೇಶ ಮಾಡಿದರೆ, ಕೆಲವರು ವಂಶ ಪಾರಂಪರ್ಯವಾಗಿ ಉಳಿಸಿಕೊಳ್ಳಲು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.

ಕೆಲ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೇ ಇದ್ದುದರಿಂದ ಗ್ರಾಮದವರೇ, ವಿದ್ಯಾವಂತರಾದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ, ಅವಿದ್ಯಾವಂತರಾದರೆ ಅಧಿಕಾರಿಗಳು ಮತ್ತು ಪಂಚಾಯತಿ ಹಿಡಿತ ಹೊಂದಿರುವವರು ಹೇಳುವುದಕ್ಕೆ ತಲೆ ಆಡಿಸುತ್ತಾರೆ ಎಂದು ವಿದ್ಯಾವಂತರನ್ನು ಚುನಾವಣೆಗೆ ನಿಲ್ಲಿಸಿರುವ ಸನ್ನಿವೇಶಗಳೂ ಇವೆ.

ADVERTISEMENT

‘ಕೆಲವೊಂದು ಗ್ರಾಮ ಪಂಚಾಯತಿಗಳು ಪಟ್ಟಭದ್ರರ ಹಿಡಿತದಲ್ಲಿವೆ. ಅವರು ತೀರ್ಮಾನ ಮಾಡಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಅವರೇ ತಿರ್ಮಾನಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಂಚಾಯತಿ ಸೌಲಭ್ಯಗಳು ಕಟ್ಟ ಕಡೆಯ ವ್ಯಕ್ತಿಗೆ ಸಿಗದಂತೆ ಎಚ್ಚರ ವಹಿಸುತ್ತಾರೆ. ಧ್ವನಿ ಇಲ್ಲದವರಂತೂ ಕೇಳಲು ಅಸಾಧ್ಯ. ಶಿಕ್ಷಿತರು ಸದಸ್ಯರಾದರೆ ಪ್ರಶ್ನೆ ಮಾಡುತ್ತಾರೆ’ ಎಂಬುದು ಗ್ರಾಮದ ಹಿರಿಯರ ಮಾತು.

‘ಯುವ ವಿದ್ಯಾವಂತರು ರಾಜಕೀಯ ಬಂದಾಗ ಮಾತ್ರವೇ ಪಂಚಾಯತಿಯಲ್ಲಿ ಏನೆಲ್ಲ ಸೌಲಭ್ಯಗಳಿವೆ ಎಂದು ತಿಳಿಯುತ್ತದೆ. ಹಿಂದಿನವರು ಸೌಲಭ್ಯಗಳ ಬಗ್ಗೆಯೇ ತಿಳಿಸುತ್ತಿರಲಿಲ್ಲ, ಕೆಲ ವಿದ್ಯಾವಂತರು ಪಂಚಾಯತಿಯಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ತಿಳಿಸಿದ್ದರು. ಆದ್ದರಿಂದ ಹೆಚ್ಚಿನ ಯುವಕರು, ಉತ್ಸಾಹಿಗಳು, ಕೆಲಸ ಮಾಡುವ ಮನಸ್ಸುಳ್ಳವರು ರಾಜಕೀಯಕ್ಕೆ ಬರಬೇಕು’ ಎಂದು ವಕೀಲ ಸಂಪತ್ತು ತಿಳಿಸಿದರು.

ವಿಜೇತರಾದ ವಿದ್ಯಾವಂತರು

ಚೆನ್ನಂಜಯ್ಯನಹುಂಡಿ ಗ್ರಾಮದ ಪ್ರಭು ಸ್ವಾಮಿ (ಎಂ.ಎ), ಪಡಗೂರು ಗ್ರಾಮದ ಪ್ರಿಯ ( ಎಲ್‌ಎಲ್‌ಬಿ, ಎಂ.ಲ್ಯಾಬ್), ಕೋಟೆಕೆರೆ ರಂಗನಾಥ (ವಕೀಲ), ಶ್ಯಾನಡ್ರಹಳ್ಳಿ ರಾಜೇಂದ್ರ (ಎಂ.ಎ ಬಿಇಡಿ), ಶಿಂಡನಪುರ ಗ್ರಾಮದ ಎಸ್.ಮಹದೇವ ಸ್ವಾಮಿ (ಬಿ.ಎಸ್ಸಿ ಬಿ.ಇಡಿ), ಹಂಗಳ ಗ್ರಾಮದ ನಂದೀಶ್ (ಎಂಬಿಎ), ಕುಲಗಾಣ ಗ್ರಾಮದ ನಂಜುಂಡಸ್ವಾಮಿ ( ಎಂ.ಎ ಇತಿಹಾಸ ), ಬೀಮನಬೀಡು ಗ್ರಾಮದ ಶಿವಕುಮಾರ್, (ಮೈಸೂರು ವಿವಿಯಲ್ಲಿ ಪಿಎಚ್‌ಡಿ), ಲಕ್ಕೂರು ಮಂಜುನಾಥ್ ಲಕ್ಕೂರು ( ಎಂ.ಎ), ಹೊರೆಯಾಲ ಗ್ರಾಮದ ಮಹೇಶ (ಎಂ.ಎ), ಮದ್ದೂರು ಗ್ರಾಮದ ಭಾಗ್ಯಶ್ರಿ (ಎಂ.ಎ, ಬಿ.ಇಡಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.