ಚಾಮರಾಜನಗರ: ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ಬೆಂಗಳೂರು ವ್ಯಾಪ್ತಿಯಲ್ಲಿ ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ದೇಸಿ ಹಾಲು ಮಾರಾಟ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ, ಜಿಲ್ಲೆಯಲ್ಲೂ ದೇಸಿ ಹಾಲು ಲಭ್ಯವಾಗಲಿದೆಯೇ ಎಂಬ ಕುತೂಹಲ ಗ್ರಾಹಕರಲ್ಲಿ ಉಂಟಾಗಿದೆ.
ಆದರೆ, ಸದ್ಯ ಕೆಎಂಎಫ್ ಮಾರಾಟ ಮಾಡಲು ಆರಂಭಿಸಿರುವ ದೇಸಿ ಹಾಲು ಬೆಂಗಳೂರಿಗೆ ಮಾತ್ರ ಸೀಮಿತ. ಸದ್ಯಕ್ಕಂತು ಜಿಲ್ಲೆಯಲ್ಲಿ ಲಭ್ಯವಾಗುವುದಿಲ್ಲ ಎಂದು ಜಿಲ್ಲಾ ಹಾಲು ಒಕ್ಕೂಟ (ಚಾಮುಲ್) ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಂಗಳೂರಿನಲ್ಲಿ ನಂದಿನಿಯ ವಿವಿಧ ಹೊಸ ಉತ್ಪನ್ನಗಳ ಜೊತೆಗೆ ದೇಸಿ ಹಾಲನ್ನೂ ಬಿಡುಗಡೆ ಮಾಡಿದ್ದರು.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ದೇಸಿ ಹಾಲನ್ನು ಬೆಂಗಳೂರಿನ ನಂದಿನಿ ಬೂತ್‌ಗಳಲ್ಲಿ ಪ್ರತಿ ಲೀಟರ್‌ಗೆ ₹80ರಂತೆ ಮಾರಾಟ ಮಾಡಲಿದೆ.
ಬಮೂಲ್, ದೇಸಿ ಹಾಲಿಗಾಗಿ ಈ ಭಾಗದ ಹಾಲು ಉತ್ಪಾದಕರಿಗೆ ದೇಸಿ ಹಸುಗಳನ್ನು ಸಬ್ಸಿಡಿಯಲ್ಲಿ ವಿತರಿಸುತ್ತಿದೆ. ಈಗಾಗಲೇ 500 ‘ಸಾಹಿವಾಲ್’ ತಳಿಯ 500 ಹಸುಗಳನ್ನು ತರಿಸಿದೆ.ಪ್ರತಿ ದಿನ 1,500– 2,000 ಲೀಟರ್ ದೇಸಿ ಹಾಲನ್ನು ಸಂಗ್ರಹಿಸಿ, ಸಂಸ್ಕರಿಸಿ ಮಾರಾಟ ಮಾಡಲು ಯೋಜನೆ ರೂಪಿಸಿದೆ. ನಂತರ ಇತರ ಭಾಗಗಳಿಗೂ ಮಾರಾಟ ವಿಸ್ತರಿಸುವುದು ಅದರ ಯೋಚನೆ.
ಜಿಲ್ಲೆಯಲ್ಲಿ ಕಷ್ಟ: ಮೊದಲನೆಯದಾಗಿ, ದೇಸಿ ಹಾಲು ಉತ್ಪಾದನೆ ಕಡಿಮೆ ಪ್ರಮಾಣದಲ್ಲಿದೆ. ಅದನ್ನು ಸಂಗ್ರಹಿಸಿ, ಮಾರಾಟ ಮಾಡುವುದು ಸುಲಭವಲ್ಲ.ಈಗ ಇರುವ ಹಾಲಿನ ಘಟಕಗಳಲ್ಲಿ ದೇಸಿ ಹಾಲನ್ನು ಸಂಸ್ಕರಿಸಿ, ಪ್ಯಾಕ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತ್ಯೇಕ ಘಟಕಗಳೇ ಬೇಕು ಎಂದು ಹೇಳುತ್ತಾರೆ ಚಾಮುಲ್ ಅಧಿಕಾರಿಗಳು.
‘ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ದೇಸಿ ಹಾಲು ಮಾರಾಟ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ. ಸಾಮಾನ್ಯ ಹಾಲಿಗೆ ಜಿಲ್ಲೆಯಲ್ಲಿ ಪ್ರತಿ ದಿನ 27 ಸಾವಿರದಿಂದ 28 ಸಾವಿರ ಲೀಟರ್‌ಗಳಷ್ಟು ಮಾತ್ರ ಬೇಡಿಕೆ ಇದೆ’ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ದೇಸಿ ಹಾಲಿಗೆ ಬೇಡಿಕೆ ಇರಬಹುದು. ನಮ್ಮ ಜಿಲ್ಲೆಯಲ್ಲಿ ಸ್ವಲ್ಪ ಕಷ್ಟ. ಬೇಡಿಕೆ ಇದ್ದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸಬಹುದು’ ಎಂದು ಅವರು ಹೇಳಿದರು.
ಬೆಂಗಳೂರಿನಿಂದ ಜಿಲ್ಲೆಗೆ ಪೂರೈಕೆ ಮಾಡುವುದಕ್ಕೆ ಅವಕಾಶ ಇದೆಯೇ ಎಂದು ಕೇಳಿದ್ದಕ್ಕೆ, ‘ಅಲ್ಲಿಂದ ಇಲ್ಲಿಗೆ ಸಾಗಣೆ ಮಾಡುವುದಕ್ಕೆ ಹೆಚ್ಚು ವೆಚ್ಚವಾಗುತ್ತದೆ’ ಎಂದರು.
ದೇಸಿ ಹಾಲು ಸಂಗ್ರಹ, ಸಂಸ್ಕರಣೆ, ಪ್ಯಾಕಿಂಗ್, ವಿತರಣೆಗೆ ಪ್ರತ್ಯೇಕ ಮೂಲಸೌಕರ್ಯವೇ ಬೇಕು. ಹಾಲಿನ ಲಭ್ಯತೆ, ಬೇಡಿಕೆ ನೋಡಿಕೊಂಡು ಮುಂದೆ ಈ ಬಗ್ಗೆ ನಿರ್ಧರಿಸಲಾಗುವುದು ಎನ್ನುತ್ತಾರೆಚಾಮುಲ್ ವ್ಯವಸ್ಥಾಪಕ ನಿರ್ದೇಶಕಮಲ್ಲಿಕಾರ್ಜುನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.