ADVERTISEMENT

ಹನೂರು: ಕೊರೊನಾ ಭೀತಿ, ‘ಬಾಳು’ ಬೆಳಗದ ಬಾಳೆ

ಗಿಡದಲ್ಲೇ ಹಣ್ಣಾಗುತ್ತಿದೆ ಬಾಳೆ, ಖರೀದಿಗೆ ಬಾರದ ವ್ಯಾಪಾರಿಗಳು, ನಷ್ಟದ ಭೀತಿಯಲ್ಲಿ ರೈತರು

ಬಿ.ಬಸವರಾಜು
Published 8 ಏಪ್ರಿಲ್ 2020, 20:00 IST
Last Updated 8 ಏಪ್ರಿಲ್ 2020, 20:00 IST
ಕಟಾವಿಗೆ ಬಂದಿರುವ ಬಾಳೆ ತೋಟದಲ್ಲಿ ಅಂಗವಿಕಲ ರೈತ ಮುನಿಸ್ವಾಮಿ
ಕಟಾವಿಗೆ ಬಂದಿರುವ ಬಾಳೆ ತೋಟದಲ್ಲಿ ಅಂಗವಿಕಲ ರೈತ ಮುನಿಸ್ವಾಮಿ   

ಹನೂರು: ‘ಸಾಲ ಮಾಡಿ ಬೆಳೆದಿದ್ದ ಬಾಳೆ ಕಟಾವಿಗೆ ಬಂದಿದೆ. ಕೊಳ್ಳುವವರೇ ಇಲ್ಲದೇ ಗೊನೆಗಳು ನೆಲಕ್ಕೆ ಬಾಗಿವೆ. ಮೊದಲೇ ಸಾಲದ ಶೂಲದಿಂದ ನೊಂದಿರುವ ಕುಟುಂಬಕ್ಕೆ ಈ ಬೆಳೆಯೂ ಕೈ ಕೊಟ್ಟರೇ, ನಮಗೆ ಆತ್ಮಹತ್ಯೆಯೊಂದೇ ದಾರಿ’ ಎನ್ನುವಾಗ ರೈತ ಮುನಿಸ್ವಾಮಿ ಕಣ್ಣಾಲಿಗಳು ತುಂಬಿದ್ದವು.

ಇಲ್ಲಿಗೆ ಸಮೀಪದ ಹೊಸದೊಡ್ಡಿ ಗ್ರಾಮದ ರೈತ ಮುನಿಸ್ವಾಮಿ ಅಂಗವಿಕಲ. ತಂದೆಯಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಸಹೋದರನ ಸಹಾಯದಿಂದ ಕೃಷಿ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ ಸೋಂಕು ತಡೆಯುವ ಪ್ರಯತ್ನವಾಗಿ ದಿಗ್ಬಂಧನ ಹೇರಿರುವುದರಿಂದ ಜಮೀನಿನಲ್ಲಿ ಬೆಳೆದಿರುವ ಫಸಲನ್ನು ಕಟಾವು ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಐದು ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದಾರೆ. ದಿಗ್ಬಂಧನಕ್ಕೂ ಮುನ್ನಸ್ವಲ್ಪ ಬಾಳೆಯನ್ನು ಕಟಾವು ಮಾಡಿ ಮಾರಾಟ ಮಾಡಿದ್ದರು. ಉಳಿದಿರುವುದನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ನಿರ್ಬಂಧ ಹೇರಲಾಯಿತು.

ADVERTISEMENT

‘10 ಎಕರೆ ಜಮೀನಿನ ಪೈಕಿ ಕೃಷಿಯಲ್ಲಿ ಕೈ ಸುಟ್ಟುಕೊಂಡು ಈಗಾಗಲೇ ಐದು ಎಕರೆ ಮಾರಿದ್ದೇನೆ. ಈಗ ಕೈಗೆ ಬಂದಿರುವ ತುತ್ತು ಬಾಯಿಗೆ ಬರದಂತಾಗಿದೆ. ಈ ಸಲ ಉತ್ತಮ ಫಸಲು ಇದ್ದರೂ ಬೆಲೆ ಸಿಗದಿದ್ದರೆ ಇರುವ ಜಮೀನನ್ನು ಮಾರಿ ಗುಳೆ ಹೋಗಬೇಕು ಅಥವಾ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ’ ಎಂದು ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘₹ 4 ಲಕ್ಷ ಸಾಲ ಮಾಡಿ ಎರಡು ಎಕರೆಯಲ್ಲಿ ಮುಸುಕಿನ ಜೋಳ ಹಾಗೂ ಇನ್ನೆರಡು ಎಕರೆಯಲ್ಲಿ ಬಾಳೆ ಬೆಳೆದಿದ್ದೆ. ಜೋಳಕ್ಕೂ ಬೆಂಬಲ ಬೆಲೆ ಇಲ್ಲ. ಇತ್ತ ಬಾಳೆಗೂ ಬೆಲೆಯಿಲ್ಲದೇ ಕಂಗಲಾಗಿದ್ದೇನೆ. ಮೊದಲ ಬಾರಿ ಕೆಜಿಗೆ ₹ 40 ಇತ್ತು. ಈಗ ₹ 12ಕ್ಕೆ ಕೇಳುತ್ತಿದ್ದಾರೆ. ಈ ಬೆಲೆಗೆ ಮಾರಿದರೆ ನಾವು ಮಾಡಿರುವ ಖರ್ಚು ಸಹ ವಾಪಸ್‌ ಬರುವುದಿಲ್ಲ’ ಎಂದು ಮುನಿಸ್ವಾಮಿ ಸಹೋದರ ನಾಗರಾಜು ಹೇಳಿದರು.

ಮುನಿಸ್ವಾಮಿ ಒಬ್ಬರೇ ಅಲ್ಲ, ಇಂತಹ ಕಷ್ಟವನ್ನು ತಾಲ್ಲೂಕಿನ ಹಲವು ರೈತರು ಎದುರಿಸುತ್ತಿದ್ದಾರೆ. ಅದೇ ಗ್ರಾಮದ ಮತ್ತೊಬ್ಬ ರೈತ ಮುತ್ತುರಾಜು ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇವರು ಕೂಡ ಎರಡೂವರೆ ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ‌. ಸಂಪೂರ್ಣವಾಗಿ ಕಟಾವಿಗೆ ಬಂದಿದ್ದರೂ ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಳ್ಳುವವರೇ ಇಲ್ಲ: ರೈತನ ಅಳಲು
‘ಮಳೆಯಿಲ್ಲದೇ ಬೇಸತ್ತಿರುವ ನಾವು, ಕೊಳವೆ ಬಾವಿಗಳಲ್ಲಿ ಬರುವ ಅಲ್ಪ ನೀರನ್ನೇ ಬಳಸಿ ಸಾಲ ಮಾಡಿ ಕೃಷಿ ಮಾಡಿದ್ದೇವೆ. ಚೆನ್ನಾಗಿ ಫಸಲು ಬಂದ ಸಮಯದಲ್ಲೇ ಅದನ್ನು ಕೊಳ್ಳುವವರೇ ಇಲ್ಲದಂತಾಗಿದೆ’ ಎಂದು ಮುತ್ತುರಾಜು ತಿಳಿಸಿದರು.

‘ಬಾಳೆ ಕಟಾವು ಮಾಡಿ ಬೆಂಗಳೂರಿಗೆ ಕಳುಹಿಸಬೇಕು. ಅಲ್ಲಿ ಅವರು ಕೇಳಿದ ಬೆಲೆಗೆ ನೀಡಬೇಕು. ಅಲ್ಲದೇ ಇಲ್ಲಿಂದಲೇ ವಾಹನವನ್ನು ಬಾಡಿಗೆಗೆ ನಾವೇ ಕಳುಹಿಸಿಕೊಡಬೇಕು. ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ನಮಗೆ, ಈಗ ಬೆಳೆದ ಫಸಲು ಮಾರಾಟವಾಗದೇ ಇರುವುದು ಆತಂಕ ತಂದಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಉತ್ಪನ್ನಗಳನ್ನು ಖರೀದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.