ADVERTISEMENT

ಯಳಂದೂರು | ಇಳುವರಿ ಕುಸಿತ; ಕಾಫಿ ಬೀಜಕ್ಕೆ ಬಂಪರ್ ಬೆಲೆ ಇದ್ದರೂ ಲಾಭ ಇಲ್ಲ

ಶೀತ ವಾತಾವರಣದಿಂದ ತೇವಾಂಶ ಹೆಚ್ಚಳ; ಕಾಫಿ ಬೀಜ ಒಣಗಿಸಲು ಹರಸಾಹಸ

ನಾ.ಮಂಜುನಾಥ ಸ್ವಾಮಿ
Published 24 ಡಿಸೆಂಬರ್ 2021, 19:31 IST
Last Updated 24 ಡಿಸೆಂಬರ್ 2021, 19:31 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಮುತ್ತುಗದಗದ್ದೆ ಪೋಡಿನಲ್ಲಿ ಸೀರೆ ಹಾಸಿ ಕಾಫಿ ಬೀಜವನ್ನು ಒಣಗಿಸುವುದು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಮುತ್ತುಗದಗದ್ದೆ ಪೋಡಿನಲ್ಲಿ ಸೀರೆ ಹಾಸಿ ಕಾಫಿ ಬೀಜವನ್ನು ಒಣಗಿಸುವುದು   

ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟದ ಪೋಡುಗಳ ಸುತ್ತಮುತ್ತ ಕಾಫಿ ಕೊಯ್ಲು ಆರಂಭವಾಗಿದೆ. ಮಳೆ ತೇವಾಂಶದ ಕಾರಣಕ್ಕೆ ಈ ಬಾರಿನಿರೀಕ್ಷಿಸಿದ ಫಸಲು ಬೆಳೆಗಾರರ ಕೈಸೇರಿಲ್ಲ. ಇದರಿಂದಾಗಿ ಕಾಫಿ ಬೀಜಕ್ಕೆ ಬಂಪರ್ ಬೆಲೆ ಇದ್ದರೂ, ಕೃಷಿಕರಿಗೆ ಅದರ ಲಾಭ ಸಿಗುತ್ತಿಲ್ಲ.

ಈ ವರ್ಷ ಮುಂಗಾರು ಅವಧಿಯಲ್ಲಿ ನಿರೀಕ್ಷಿಸಿದಷ್ಟು ಮಳೆಯಾಗಲಿಲ್ಲ. ಹೂಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟಿತು. ಕಾಯಿ ಹಣ್ಣಾಗುವ ಸಮಯದಲ್ಲಿ ಹಿಂಗಾರು ಮಳೆ ಕಾಡಿತು. ಇದರಿಂದ ಕಾಫಿ ತೋಟದ ನಿರ್ವಹಣೆ ಸಮರ್ಪಕವಾಗಿ ಮಾಡಲಾಗದೆ ಬೆಳೆಗಾರರು ಪರಿತಪಿಸಬೇಕಾಯಿತು.

ಈಗ ಕಾಫಿ ಕೊಯ್ಲು ಆರಂಭವಾಗಿದ್ದು, ಸಂಸ್ಕರಿಸಿದ ಬೀಜಗಳನ್ನು ಒಣಗಿಸಲು ಡ್ರೈಯರ್‌ಗಳ ಕೊರತೆ ಕಾಡುತ್ತಿದೆ‌. ಹಾಗಾಗಿ, ಮಹಿಳೆಯರು ನೆಲಕ್ಕೆ ಸೀರೆ ಹರಡಿ ಬೀಜವನ್ನು ಒಣಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

'ಅರೇಬಿಕಾ ಪಾರ್ಚ್ಮೆಂಟ್ ಕಾಫಿಯ ಕಳೆದ ವರ್ಷದ ಧಾರಣೆ ಕೆಜಿಗೆ ₹ 175ರಿಂದ ₹ 200ರ ಆಸುಪಾಸಿನಲ್ಲಿತ್ತು. ಈ ವರ್ಷ 1 ಕೆ.ಜಿ.ಗೆ ₹ 270ರಿಂದ ₹ 300 ಇದೆ. ಇಳುವರಿ ಅರ್ಧದಷ್ಟು ಕುಸಿದಿದೆ. ಈ ನಡುವೆ ಚಳಿಗಾಲದಲ್ಲಿ ನೆಲದ ತೇವಾಂಶ ಹೆಚ್ಚಿದ್ದು, ನೆಲದಲ್ಲಿ ಸೀರೆ ಹಾಸಿ ಬೀಜ ಒಣಗಿಸಬೇಕು. ಇದು ಕಾಫಿ ಮೌಲ್ಯ ಕಡಿಮೆ ಮಾಡುತ್ತಿದೆ. ಪಲ್ಪರ್ ಯಂತ್ರ, ಸಸಿ ವಿತರಿಸಿ ವಾಲ್ಮೀಕಿ ನಿಗಮ ಕೈತೊಳೆದುಕೊಂಡಿದೆ' ಎಂದು ಹೊಸಪೋಡು ರಂಗಮ್ಮ ದೂರಿದರು.

'ನರ್ಸರಿಯಲ್ಲಿ ಸುಮಾರು 60 ಸಾವಿರ ಕಾಫಿ ಸಸಿ ಬೆಳೆಯಲಾಗಿದ್ದು, 40 ಸಾವಿರ ಸಸಿವಿತರಿಸಲಾಗಿದೆ. ಇದನ್ನು ಮುಂಗಾರು ಸಮಯ ನೀಡಿದರೆ, ಸಸಿ ನೆಟ್ಟು ಅಭಿವೃದ್ಧಿ ಪಡಿಸಲುಸಾಧ್ಯವಾಗುತ್ತಿತ್ತು. 20ಕ್ಕೂ ಹೆಚ್ಚು ಪೋಡುಗಳ 600ಕ್ಕೂ ಹೆಚ್ಚು ಕೃಷಿಕರು ಪ್ರತಿವರ್ಷ ಇಂತಹ ತಾಂತ್ರಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕಾಫಿ ಬೆಳೆಗಾರರಿಗೆ ನೀಡಿರುವ ಸೌಲಭ್ಯವನ್ನು ಬುಡಕಟ್ಟು ಜನರಿಗೂ ವಿಸ್ತರಿಸಲು ನಿಗಮ ಮುಂದಾಗಬೇಕು' ಎಂದು ಮುತ್ತುಗದ್ದೆಪೋಡಿನ ಎಂ.ಆರ್.ಮಾದೇಗೌಡ ಮನವಿ ಮಾಡಿದರು.

ಯೋಜನೆ ಅನುಷ್ಠಾನಕ್ಕೆ ಕ್ರಮ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಸಂಪರ್ಕ ಅಧಿಕಾರಿ ಕೆ.ಪ್ರಭುಗೌಡ, ‘ಈಗಾಗಲೇ 80ಕ್ಕೂ ಹೆಚ್ಚು ಪಲ್ಪರ್ ಯಂತ್ರ ನೀಡಲಾಗಿದೆ. ಡ್ರೈಯಿಂಗ್ ಯಾರ್ಡ್ ಅಳವಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಜಾಗದ ಲಭ್ಯತೆ ಗುರುತಿಸಿಕೊಂಡು, ಕಾಫಿ ಉತ್ಪಾದನೆ ಆಧಾರದ ಮೇಲೆ ಯೂನಿಟ್ ಅಳವಡಿಸಲು ಸಿದ್ಧತೆ ನಡೆದಿದೆ. ಮಳೆಗಾಲದ ಅವಧಿ ಮುಂದುವರಿದಕಾರಣ ಕಾಫಿ ಸಸಿಗಳ ನೀಡಿಕೆಯಲ್ಲಿ ವ್ಯತ್ಯಯವಾಗಿದೆ. ಆದರೆ, ಸಸಿ ನೀಡುವುದನ್ನು ಈಗಸ್ಥಗಿತಗೊಳಿಸಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಸಮರ್ಪಕಅನುಷ್ಠಾನ ಮಾಡಲು ಕ್ರಮ ವಹಿಸಲಾಗುತ್ತಿದೆ’ ಎಂದು ಹೇಳಿದರು.

‘ಸಕಾಲದಲ್ಲಿ ಸಸಿ ಒದಗಿಸುತ್ತಿಲ್ಲ’
‘ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಕಾಫಿ ಬೆಳೆಯಲು, ಗುಣಮಟ್ಟದ ಉತ್ಪಾದನೆ ಮತ್ತು ಮಾರಾಟದ ಬಗ್ಗೆ ಹತ್ತಾರು ಯೋಜನೆ ರೂಪಿಸಲಾಗಿದೆ. ಬೆಳೆಗಾರರಿಗೆ ಡ್ರೈಯಾರ್ಡ್ ಯಂತ್ರ ಮತ್ತು ಬೀಜ ಒಣಗಿಸಲು ಟಾರ್ಪಲೀನ್‌ ನೀಡಿಲ್ಲ. ಜೂನ್–ಆಗಸ್ಟ್ ತಿಂಗಳಲ್ಲಿವಿತರಿಸಬೇಕಾದ ಕಾಫಿ ಗಿಡಗಳನ್ನು ನವೆಂಬರ್-ಡಿಸೆಂಬರ್‌ನಲ್ಲಿ ವಿತರಿಸುತ್ತಿದ್ದಾರೆ.ಕೃಷಿಕರು ಈ ಸಸಿಗಳನ್ನು ಮುಂದಿನ ಮಳೆಗಾಲದ ತನಕ ಕಾಪಿಟ್ಟು ನಂತರ ನೆಡಬೇಕಿದೆ. ಹಾಗಾಗಿ, ಕಾಫಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ನಿಗಮದ ಅಧಿಕಾರಿಗಳು ಹೆಚ್ಚು ಆಸಕ್ತಿವಹಿಸಬೇಕು’ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದಕಾರ್ಯದರ್ಶಿ ಸಿ.ಮಾದೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.