ADVERTISEMENT

ಬೆತ್ತಲೆ ಮೆರವಣಿಗೆ: ವಿಚಾರಣೆ ಮತ್ತೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 14:20 IST
Last Updated 3 ಜುಲೈ 2019, 14:20 IST
   

ಚಾಮರಾಜನಗರ: ಗುಂಡ್ಲುಪೇಟೆಯ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ನಡೆದ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಗುರುವಾರಕ್ಕೆ (ಜುಲೈ 4) ಮುಂದೂಡಿದೆ.

ಆರೋಪಿಗಳಾದ ಶಿವಪ್ಪ, ಬಸವರಾಜು, ಮಾಣಿಕ್ಯ, ಸತೀಶ್, ಪುಟ್ಟಸ್ವಾಮಿ, ಚನ್ನಕೇಶವಮೂರ್ತಿ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು ಬುಧವಾರ ಕೈಗೆತ್ತಿಕೊಂಡರು.

ಜಾಮೀನು ಕೋರಿ ಹಿಂದಿನ ವಕೀಲರಾದ ಅರಳೀಕಟ್ಟೆ ಸಿದ್ದರಾಜು ಅವರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲು ಕಾಲಾವಕಾಶ ಬೇಕು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಮನವಿ ಮಾಡಿದರು. ಹಾಗಾಗಿ,ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ADVERTISEMENT

ಹಿಂದೆ ಸರಿದ ವಕೀಲ: ಈ ಮಧ್ಯೆ, ಆರೋಪಿಗಳ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಅರಳೀಕಟ್ಟೆ ಸಿದ್ದರಾಜು ಅವರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ನಂಜನಗೂಡಿನ ವಕೀಲರಾದ ಶೃತಿ ಅವರು ಆರೋಪಿಗಳ ಪರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಗೊತ್ತಾಗಿದೆ.

ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರಕರಣದ ಆರೋಪಿಗಳ ಪರ ಜಿಲ್ಲೆಯ ವಕೀಲರು ವಕಾಲತ್ತು ವಹಿಸಬಾರದೆಂದು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಸಂಘವು ನಿರ್ಣಯವನ್ನೂ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.