
ಕೊಳ್ಳೇಗಾಲ: ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿದ್ದು ನಿಗದಿಗಿಂತ ಹೆಚ್ಚು ಭಾರ ಹೊತ್ತು ಹಗಲು–ರಾತ್ರಿಯೆನ್ನದೆ ಸಂಚರಿಸುತ್ತಿವೆ.
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಗೆ ಬೇಕಾದ ಜಲ್ಲಿಕಲ್ಲು, ಮರಳು , ಎಂ–ಸ್ಯಾಂಡ್, ಕರಿಕಲ್ಲುಗಳನ್ನು ಸಾಗಿಸುವ ಹಾಗೂ ಕಬ್ಬು, ಮರದ ದಿಮ್ಮಿಗಳನ್ನು ಸಾಗಿಸುವ ವಾಹನಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.
ಮಿತಿಮೀರಿದ ಭಾರಹೊತ್ತು ಸಾಗುವ ಸರಕು ಸಾಗಣೆ ವಾಹನಗಳು ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಕಠಿಣ ಕ್ರಮ ಜರುಗಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಮುಖ್ಯ ರಸ್ತೆಗಳಲ್ಲಿಯೇ ನಿತ್ಯ ಅತಿಯಾದ ಭಾರಹೊತ್ತು ಸರಕು ಸಾಗಣೆ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ನಾಲ್ಕು ಚಕ್ರದ ವಾಹನದಲ್ಲಿ 12 ಟನ್, ಆರು ಚಕ್ರದ ವಾಹನಗಳಲ್ಲಿ 16 ಟನ್ ಹಾಗೂ 10 ಚಕ್ರದ ವಾಹನದಲ್ಲಿ ಗರಿಷ್ಠ 25 ಟನ್ ಭಾರ ಹಾಕಲು ಅನುಮತಿ ಇದೆ. ಆದರೆ, ತಾಲ್ಲೂಕಿನಲ್ಲಿ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. 10 ಹಾಗೂ 12 ಚಕ್ರದ ವಾಹನಗಳಲ್ಲಿ 35 ರಿಂದ 40 ಟನ್‌ಗಳಷ್ಟು ಮರಳು ಹಾಗೂ ಕರಿಕಲ್ಲುಗಳನ್ನು ಸಾಗಿಸಲಾಗುತ್ದಿದೆ.
ನಿಗದಿಗಿಂತ ಹೆಚ್ಚು ಭಾರದ ಸಾಮಾಗ್ರಿ ಸಾಗಿಸುವ ವಾಹನಗಳಿಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ . ಬಹುತೇಕ ಟಿಪ್ಪರ್‌ಗಳು ಸಾಮರ್ಥ್ಯಕ್ಕಿಂತ ಹೆಚ್ಚು ಭಾರವಾದ ಸರಕುಗಳನ್ನು ತುಂಬಿಸಿಕೊಂಡು ಸಚಂರಿಸುತ್ತಿವೆ ಎಂದು ದೂರುತ್ತಾರೆ ನಾಗರಿಕರು.
ವಾಹನಗಳ ಬಾಡಿ ಮಟ್ಟವನ್ನು ಮೀರಿ ಕಲ್ಲು, ಮಣ್ಣು, ಇತರೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ತುಂಬಿಕೊಂಡು ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ದೂಳನ್ನು ಎಬ್ಬಿಸಿಕೊಂಡು ಅತಿವೇಗವಾಗಿ ನುಗ್ಗುವ ಟಿಪ್ಪರ್‌ಗಳು ಪಾದಚಾರಿಗಳಿಗೆ ಹಾಗೂ ಇತರೆ ವಾಹನಗಳ ಸವಾರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.
ಟಿಪ್ಪರ್‌ಗಳ ವೇಗ ಹಾಗೂ ಆರ್ಭಟಕ್ಕೆ ಸಣ್ಣ ಪುಟ್ಟ ವಾಹನ ಸವಾರರು ಬೆದರುತ್ತಿದ್ದು ರಸ್ತೆಯಲ್ಲಿ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜು ಹಾಗೂ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕರ್ಕಶ ಹಾರ್ನ್ ಮಾಡುವ ಟಿಪ್ಪರ್‌ಗಳು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುತ್ತಿವೆ. ವಾಹನಗಳ ಅಬ್ಬರಕ್ಕೆ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.
ಆಸ್ಪತ್ರೆ, ಶಿಕ್ಷಣ ಸಂಸ್ಥೆ, ನ್ಯಾಯಾಲಯ, ಸೇರಿದಂತೆ ಕೆಲವು ನಿರ್ಬಂಧಿತ ಪ್ರದೇಶಗಳಲ್ಲಿ ಹಾರ್ನ್ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಸರಕು ಸಾಗಣೆ ವಾಹನಗಳು ಪಾಲಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸಿದ್ದಪ್ಪಾಜಿ ಒತ್ತಾಯಿಸಿದರು.
ಟಾರ್ಪಲ್ ಮುಚ್ಚದೆ ಸಾಗಾಟ: ಟಿಪ್ಪರ್‌ಗಳಲ್ಲಿ ಕಲ್ಲು, ಮಣ್ಣು, ಮರಳು ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ವಸ್ತುಗಳನ್ನು ಸಾಗಿಸಬೇಕಾದರೆ ಟಾರ್ಪಲ್ ಹೊದಿಕೆ ಹಾಕಬೇಕು, ಆದರೆ, ಬಹುತೇಕ ವಾಹನಗಳು ಹೊದಿಕೆ ಬಳಸದೆ ಸಂಚರಿಸುತ್ತಿದ್ದು ಮಣ್ಣು, ಮರಳು ರಸ್ತೆಗೆ ಸುರಿಯುತ್ತಿದೆ. ಮಣ್ಣು ಹಾಗೂ ಮರಳಿನ ಕಣಗಳು ಹಿಂದೆ ಬರುವ ವಾಹನ ಸವಾರರಿಗೆ ತಾಗಿ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಟಿಪ್ಪರ್‌ಗಳ ಬಾಡಿ ಮಟ್ಟ ಮೀರಿ ಎಂಸ್ಯಾಂಡ್, ಜಲ್ಲಿ ಸಾಗಿಸುತ್ತಿರುವುದರಿಂದ ರಸ್ತೆಯ ಮೇಲೆಲ್ಲ ಹರಡುತ್ತಿದ್ದು ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳಿಗೆ ತುತ್ತಾಗುತ್ತಿವೆ. ಬೆಳಿಗ್ಗೆ ವಾಯುವಿಹಾರಿಗಳು ದೂಳು ಸೇವಿಸುತ್ತಾ ರಸ್ತೆಯಲ್ಲಿ ಸಾಗಬೇಕಾಗಿದೆ. ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳು ಮಿತಿಮೀರಿ ಬಾರ ಸಾಗಿಸುತ್ತಿರುವ ವಾಹನಗಳಿಗೆ ದಂಡ ವಿಧಿಸಿ ಜಪ್ತಿ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ ‘ಪ್ರಜಾವಾಣಿ’ಗೆ ತಿಳಿಸಿದರು.
ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್
ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರಕು ಸಾಗಣೆ ವಾಹನಗಳನ್ನು ಅಪಾಯಕಾರಿಯಾಗಿ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬರುವ ವಾಹನಗಳು ಏಕಾಏಕಿ ರಸ್ತೆಯ ಬದಿ ಎದುರಾಗುವ ವಾಹನಗಳನ್ನು ಕಂಡು ಗೊಂದಲಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಅಪಘಾತವಾಗುತ್ತಿವೆ. ರಾತ್ರಿಯ ಹೊತ್ತು ಟಿಪ್ಪರ್ ಹಾಗೂ ಲಾರಿಗಳಲ್ಲಿ ಸರಕು ತುಂಬಿಸಿ ನಿಲುಗಡೆ ದೀಪವನ್ನೂ ಹಾಕಿಕೊಳ್ಳಲದೆ ರಸ್ತೆ ಬದಿ ಅಪಾಯಕಾರಿಯಾಗಿ ನಿಲ್ಲಿಸಲಾಗುತ್ತಿದೆ. ಕೆಲವು ಸವಾರರು ಹೆದ್ದಾರಿ ಬದಿ ವಾಹನಗಳನ್ನು ನಿಲ್ಲಿಸಿ ಅಲ್ಲಿಯೇ ಮೋಜು ಮಸ್ತಿ ಮಾಡುತ್ತಿರುವುದು ಹೆಚ್ಚಾಗಿದೆ. ಹೆದ್ದಾರಿಗಳಲ್ಲಿ ಗಸ್ತು ಹೆಚ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಶಾಂತರಾಜು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.