ADVERTISEMENT

ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ, ಸಂಚಾರ ಸಂಕಟ

ಅಟ್ಟುಗೂಳಿಪುರದಿಂದ ಪುಣಜನೂರುವರೆಗಿನ ಎನ್‌ಎಚ್‌ 209ರಲ್ಲಿ ಹಳ್ಳ ಗುಂಡಿಗಳು

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:23 IST
Last Updated 14 ಜುಲೈ 2020, 17:23 IST
ರಸ್ತೆಯ ಹೊಂಡದಲ್ಲಿರುವ ಕೆಸರಿನಲ್ಲಿ ಲಾರಿಯ ಚಕ್ರಗಳು ಹೂತು ಹೋಗಿರುವುದು
ರಸ್ತೆಯ ಹೊಂಡದಲ್ಲಿರುವ ಕೆಸರಿನಲ್ಲಿ ಲಾರಿಯ ಚಕ್ರಗಳು ಹೂತು ಹೋಗಿರುವುದು   

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 209ರ ತಾಲ್ಲೂಕಿನ ಅಟ್ಟುಗೂಳಿಪುರದಿಂದ ಪುಣಜನೂರುವರೆಗಿನ 22 ಕಿ.ಮೀ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಹೊಂಡ ಗುಂಡಿಗಳಾಗಿದ್ದು, ವಾಹನಗಳು ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ.

ತಮಿಳುನಾಡಿನ ಸತ್ಯಮಂಗಲವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಈಗ ಅಂತರರಾಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಹೆಚ್ಚಿನ ವಾಹನಗಳು ಸಂಚರಿಸುತ್ತಿಲ್ಲ. ಸಂಚರಿಸುವ ಬೆರಳೆಣಿಕೆಯಷ್ಟು ವಾಹನಗಳು, ಅದರಲ್ಲೂ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಾಹನಗಳು ಒಂದಿಲ್ಲೊಂದು ಕಡೆ ಅಪಘಾತಕ್ಕೆ ಈಡಾಗುತ್ತಿವೆ.

ಕೆಲವು ಕಡೆ ಆಳೆತ್ತರದ ಗುಂಡಿಗಳಾಗಿದ್ದು, ಆಳದ ಅರಿವಿಲ್ಲದೆ ಚಾಲಕರು ವಾಹನಗಳನ್ನು ಇಳಿಸಿದಾಗ ಚಕ್ರಗಳು ಹೂತು ಹೋಗುವ ಘಟನೆಗಳು, ಆಯತಪ್ಪಿ ಪಲ್ಟಿಯಾಗುವ ಘಟನೆಗಳು ಪ್ರತಿ ದಿನವೂ ನಡೆಯುತ್ತಿದೆ.

ADVERTISEMENT

ಮಳೆಯೂ ಆರಂಭವಾಗಿರುವುದರಿಂದ ಮೊದಲೇ ಹಳ್ಳಗಳಿಂದ ಕೂಡಿದ್ದ ರಸ್ತೆ ಈಗ ಇನ್ನಷ್ಟು ಹದಗೆಟ್ಟಿದೆ. ಕ್ಷೇತ್ರದ ಸಂಸದರು, ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಜಾರಿಯಲ್ಲಿದೆ. ಅದಕ್ಕಾಗಿ ಹಲವು ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿಗಳು ನಡೆದಿವೆ. ಕೆಲವು ತಿಂಗಳುಗಳಿಂದೀಚೆಗೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕೋವಿಡ್‌–19 ಹಾವಳಿಯ ನಂತರ ಕಾಮಗಾರಿ ಎಲ್ಲಿಯೂ ನಡೆಯುತ್ತಿಲ್ಲ. ಈ 22 ಕಿ.ಮೀ ರಸ್ತೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವುದರಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಸಿಗುವುದು ಸ್ವಲ್ಪ ತಡವಾಗಿತ್ತು. ಅನುಮತಿ ಸಿಕ್ಕ ನಂತರವೂ ಕಾಮಗಾರಿ ಆರಂಭವಾಗಿಲ್ಲ.

ಪ್ರಯೋಜನಕ್ಕೆ ಬಾರದ ತೇಪೆ: ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ 2019ರ ಅಕ್ಟೋಬರ್‌ನಲ್ಲಿ ಸ್ಥಳೀಯರು, ವಾಹನಗಳ ಚಾಲಕರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು, ರಸ್ತೆಯ ದುರವಸ್ಥೆಯನ್ನು ಪರಿಶೀಲಿಸಿದ್ದರು.

ಗುಂಡಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ₹40 ಲಕ್ಷ ಬಿಡುಗಡೆಗೊಳಿಸಿದ್ದು, 10 ದಿನಗಳಲ್ಲಿ ಸಂಪೂರ್ಣವಾಗಿ ಗುಂಡಿಗಳನ್ನು ಮುಚ್ಚಬೇಕು ಎಂದು ತಾಕೀತು ಮಾಡಿದ್ದರು.

‘ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿದ ನಂತರ, ಹೆಚ್ಚುವರಿಯಾಗಿ ₹15 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಅವರು ಹೇಳಿದ್ದರು.

ದುರಸ್ತಿಗಾಗಿ ಬಿಡುಗಡೆಯಾಗಿದ್ದ ಹಣದಲ್ಲಿ ಅಲ್ಲಲ್ಲಿ ಹೊಂಡಗಳನ್ನು ಮುಚ್ಚಲಾಗಿದೆ. ಕೆಲವೇ ಸಮಯದ ನಂತರ ಅದು ಕಿತ್ತು ಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಈ ರಸ್ತೆಯ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಗಮನ ಹರಿಸದ ಸಂಸದ: ಆರೋಪ

‘ಅಂತರರಾಜ್ಯ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಪುಣಜನೂರು ದಾಟಿದ ನಂತರ ತಮಿಳುನಾಡಿನ ರಸ್ತೆ ಉತ್ತಮವಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಹಾದು ಹೋಗುವ 22 ಕಿ.ಮೀ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಂಚರಿಸಲು ನರಕಯಾತನೆ ಪಡುವ ಸ್ಥಿತಿ ಇದೆ’ ಎಂದು ವಕೀಲ ಅರುಣ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಷೇತ್ರದ ಸಂಸದರು ರಸ್ತೆಯ ದುರವಸ್ಥೆಯ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಬೇಕು. ಆದರೆ, ವಿ.ಶ್ರೀನಿವಾಸ ಪ್ರಸಾದ್‌ ಅವರು ರಸ್ತೆಯ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಿಲ್ಲ. 22 ಕಿ.ಮೀ ರಸ್ತೆ ಅರಣ್ಯ ಪ್ರದೇಶದಲ್ಲಿ ಹಾದುಹೋಗುವುದರಿಂದ ಅನುಮತಿ ಸಿಗುವುದು ತಡವಾಗಿರಬಹುದು. ಅನುಮತಿ ಸಿಕ್ಕಿದ ನಂತರವಾದರೂ ವೇಗವಾಗಿ ಕೆಲಸ ಮಾಡಬೇಕಲ್ಲ? ಅಧಿಕಾರಿಗಳು ಹಾಗೂ ಸಂಸದರು ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. 40 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಆದರೆ, ಗುಣಮಟ್ಟದ ಕೆಲಸ ನಡೆದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.