ADVERTISEMENT

ವನ್ಯಪ್ರಾಣಿಗಳ ಜೀವಕ್ಕೆ ಕುತ್ತು!

ಹನೂರು: ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್ ಹಾವಳಿ

ಬಿ.ಬಸವರಾಜು
Published 25 ಜುಲೈ 2019, 19:50 IST
Last Updated 25 ಜುಲೈ 2019, 19:50 IST
ಕಾರಿಡಾರಿನಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್‌ ಬಾಟಲಿ ಹಾಗೂ ಇತರೆ ತ್ಯಾಜ್ಯ
ಕಾರಿಡಾರಿನಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್‌ ಬಾಟಲಿ ಹಾಗೂ ಇತರೆ ತ್ಯಾಜ್ಯ   

ಹನೂರು: ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ (ಬಿಆರ್‌ಟಿ) ಮತ್ತು ಮಲೆ ಮಹದೇಶ್ವರ ವನ್ಯಧಾಮಗಳ ನಡುವಿನ ಕೊಂಡಿಯಂತಿರುವ ಎಡೆಯಾರಳ್ಳಿ ಕಾರಿಡಾರಿನಲ್ಲಿ ಪ್ಲಾಸ್ಟಿಕ್‌ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವನ್ಯಪ್ರಾಣಿಗಳಿಗೆ ಕಂಟಕವಾಗುವ ಆತಂಕ ಎದುರಾಗಿದೆ.

1.6 ಕಿ.ಮೀ ಉದ್ದದ ಈ ಕಾರಿಡಾರ್‌ನಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ, ಇದು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿರುವುದರಿಂದ ಅಂತರರಾಜ್ಯ ಸಾರಿಗೆ ವಾಹನಗಳು ಈ ಮೂಲಕವೇ ಸಾಗುತ್ತವೆ. ವಾಹನಗಳಲ್ಲಿ ತೆರಳುವ ಪ್ರಯಾಣಿಕರು ರಸ್ತೆಯ ಎರಡು ಬದಿಗಳಲ್ಲಿ ಎಸೆಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಸಂರಕ್ಷಿತ ಪ್ರದೇಶದ ಪರಿಸರವನ್ನು ಹಾಳು ಮಾಡುವುದಲ್ಲದೇ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿವೆ.

5 ಕ್ವಿಂಟಲ್‌ ಪ್ಲಾಸ್ಟಿಕ್ ಸಂಗ್ರಹ: ಕಳೆದ ವರ್ಷದ ಜೂನ್‌ 5ರಂದು ಬೈಲೂರು ಹಾಗೂ ಪಿ.ಜಿ. ವನ್ಯಜೀವಿ ವಲಯಗಳ ಸಹಯೋಗದಲ್ಲಿ ಸ್ವಯಂಸೇವಕರೊಂದಿಗೆ ಕಾರಿಡಾರಿನ ಚಿಕ್ಕರಂಗಶೆಟ್ಟಿ ದೊಡ್ಡಿಯಿಂದ ಮೈಸೂರಪ್ಪನ ದೊಡ್ಡಿವರೆಗೆ ಪ್ಲಾಸ್ಟಿಕ್ ಸಂಗ್ರಹಣೆ ಮಾಡಿದಾಗ ಸುಮಾರು ಐನೂರು ಕೆಜಿಯಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿತ್ತು.

ADVERTISEMENT

ಬಿಆರ್‌ಟಿ ಹಾಗೂ ಪಿ.ಜಿ. ಪಾಳ್ಯ ಡಿ ಲೈನ್‍ನಿಂದ ಸುಮಾರು 100 ಮೀ ಒಳಗೆ ಮದ್ಯದ ಬಾಟಲಿ, ಪ್ಲಾಸ್ಟಿಕ್ ಪೌಚ್‍ಗಳು, ಔಷಧಿ ತ್ಯಾಜ್ಯಗಳು ಕಂಡು ಬಂದಿದ್ದವು. ಆ ನಂತರ ಅರಣ್ಯ ಇಲಾಖೆ ಕಾರಿಡಾರ್ ಉದ್ದಕ್ಕೂ ಎರಡು ಬದಿಗಳಲ್ಲೂ ಸೂಚನಾ ಫಲಕಗಳನ್ನು ಅಳವಡಿಸಿತ್ತು. ಅಲ್ಲದೇ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಹಾಗೂ ಕಸವನ್ನು ಬಿಸಾಡದಂತೆ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು.

ಇದರ ಬೆನ್ನಲ್ಲೇ, ಐದಾರು ತಿಂಗಳ ಹಿಂದೆ ತಮಿಳುನಾಡಿನ ಅರಣ್ಯ ಇಲಾಖೆ ಸತ್ಯಮಂಗಲ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸಿತ್ತು. ಇದರಿಂದ ವಾಹನಗಳ ಓಡಾಟ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ತಿಂಗಳ ಹಿಂದೆ ರಾತ್ರಿ ಸಂಚಾವನ್ನು ಪುನರಾರಂಭಿಸಲಾಗಿದೆ. ಸಹಜವಾಗಿ ವಾಹನಗಳ ಓಡಾಟದಲ್ಲೂ ಹೆಚ್ಚಳ ಉಂಟಾಗಿದೆ.

ರಾತ್ರಿ ವೇಳೆ ಲಾರಿ ಹಾಗೂ ಇನ್ನಿತರ ವಾಹನಗಳಲ್ಲಿ ತೆರಳುವ ಸವಾರರು ರಸ್ತೆ ಮಧ್ಯೆದಲ್ಲಿಯೇ ವಾಹನ ನಿಲ್ಲಿಸಿ ಕುಡಿದು, ಊಟ ಮಾಡಿ ಮದ್ಯದ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ’ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಟಿಬೆಟಿಯನ್‌ ಕಾಲೊನಿ ಮುಖ್ಯಸ್ಥರಿಗೆ ಸೂಚನೆ

ಬಿಳಿಗಿರಿರಂಗನಾಥ ಹುಲಿ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಂತಿರುವ ಟಿಬೆಟಿಯನ್‌ ಕಾಲೊನಿಯಲ್ಲಿ ವಾಸಿಸುತ್ತಿರುವವರ ಪಾತ್ರವೂ ಇದರಲ್ಲಿ ಹೆಚ್ಚಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಅರಣ್ಯದೊಳಗೆ ಬಿದ್ದಿರುವ ದುಬಾರಿ ಬೆಲೆಯ ಮದ್ಯದ ಬಾಟಲಿ, ಔಷಧಿ ತ್ಯಾಜ್ಯಗಳು ಇದನ್ನು ಪುಷ್ಟೀಕರಿಸುತ್ತವೆ.

ಇದನ್ನು ಗಮನಿಸಿ ಪಿ.ಜಿ. ಪಾಳ್ಯ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳು ಈಗಾಗಲೇ ಟಿಬೆಟಿಯನ್ ನಿರಾಶ್ರಿತರ ಕಾಲೊನಿಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದಾರೆ. ಅರಣ್ಯದೊಳಗೆ ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯ ಎಸೆಯದಂತೆ ತಮ್ಮವರಿಗೆ ಸೂಚಿಸಬೇಕು ಎಂದು ತಿಳಿಸಿದ್ದರೂ ತ್ಯಾಜ್ಯದ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.