ADVERTISEMENT

ಬಿಆರ್‌ಟಿ: ಕಳ್ಳಬೇಟೆಗಾರನ ಬಂಧನ– ಜಿಂಕೆ ಮೃತದೇಹ, ಕಡವೆ ಮಾಂಸ ವಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 12:00 IST
Last Updated 8 ಏಪ್ರಿಲ್ 2022, 12:00 IST
ಬಿಆರ್‌ಟಿ ಕೆ.ಗುಡಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದು
ಬಿಆರ್‌ಟಿ ಕೆ.ಗುಡಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದು   

ಚಾಮರಾಜನಗರ: ಜಿಂಕೆ ಹಾಗೂ ಕಡವೆಗಳನ್ನು ಅಕ್ರಮವಾಗಿ ಬೇಟೆಯಾಡುತ್ತಿದ್ದ ಬೇಟೆಗಾರರೊಬ್ಬರನ್ನು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದ ಅರಣ್ಯ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾರೆ.

ಬಂಧಿತ ಆರೋಪಿ ಬಳಿಯಿಂದ ಜಿಂಕೆಯ ಮೃತದೇಹ, ತಲೆಮರೆಸಿಕೊಂಡಿರುವ ಆರೋಪಿಯ ಮನೆಯಿಂದ ಎರಡು ಕೆಜಿ ಒಣ ಕಡವೆ ಮಾಂಸ, ಜಿಂಕೆಯ ನಾಲ್ಕು ಕೊಂಬುಗಳು, ಕಡವೆಯ ಎರಡು ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ.

ಚಾಮರಾಜನಗರ ತಾಲ್ಲೂಕಿನ ಮೂಕನಪಾಳ್ಯದ ಜಗದೀಶನಾಯ್ಕ (38) ಬಂಧಿತ ಆರೋಪಿ. ಇನ್ನೊಬ್ಬ ಆರೋಪಿ ಅದೇ ಗ್ರಾಮದ ನಾಗೇಶನಾಯ್ಕ (42) ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.

ADVERTISEMENT

ಕೆ.ಗುಡಿ ವನ್ಯಜೀವಿ ವಲಯದ ಅಟ್ಟುಗೂಳಿಪುರ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಮಧ್ಯಾಹ್ನ ರಾಮಾಪುರ ಗಸ್ತಿನ 500 ಎಕರೆ ಪ್ಲಾಂಟೇಷನ್‌ ವ್ಯಾಪ್ತಿಯ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಸಿಬ್ಬಂದಿಯನ್ನು ಕಂಡು ಓಡಲು ಯತ್ನಿಸಿದರು. ಸಿಬ್ಬಂದಿಗೆ ಅನುಮಾನ ಬಂದು ಅವರನ್ನು ಬೆನ್ನಟ್ಟಿದಾಗ ಜಗದೀಶ ನಾಯ್ಕ ಎಂಬುವವರು ಸೆರೆ ಸಿಕ್ಕರು. ನಾಗೇಶನಾಯ್ಕ ಅವರು ತಪ್ಪಿಸಿಕೊಂಡರು.

ಜಗದೀಶನಾಯ್ಕ ಅವರನ್ನು ವಿಚಾರಿಸಿದಾಗ, ಜಿಂಕೆಯ ಮೃತದೇಹವನ್ನು ಚೀಲದಲ್ಲಿ ಹಾಕಿ ಪೊದೆಯಲ್ಲಿ ಬಚ್ಚಿಟ್ಟಿದ್ದನ್ನು ತೋರಿಸಿದ್ದಾರೆ. ಮತ್ತಷ್ಟು ವಿಚಾರಣೆ ಮಾಡಿದಾಗ ಪರಾರಿಯಾದ ಆರೋಪಿಯ ವಿವರಗಳನ್ನು ನೀಡಿದ್ದಾರೆ. ನಾಗೇಶ ನಾಯ್ಕ ಅವರ ಮನೆಯಲ್ಲಿ ಶೋಧ ನಡೆಸಿದಾಗ ಎರಡು ಕೆಜಿಯಷ್ಟು ಕಡವೆಯ ಒಣ ಮಾಂಸ, ಎರಡು ಕೊಂಬು ಹಾಗೂ ಜಿಂಕೆಯ ನಾಲ್ಕು ಕೊಂಬುಗಳು ಪತ್ತೆಯಾಗಿವೆ.

‘ಕಡವೆಯನ್ನು ಎರಡು ವಾರಗಳ ಹಿಂದೆಯೇ ಬೇಟಿಯಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇಬ್ಬರ ವಿರುದ್ಧವೂ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಕೆ.ಗುಡಿ ವಲಯ ಅರಣ್ಯಾಧಿಕಾರಿ ಶಾಂತಪ್ಪಪೂಜಾರ್‌ ಅವರು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಅಟ್ಟುಗೂಳಿಪುರದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್‌, ಸಿಬ್ಬಂದಿ ಮಹೇಶ್‌ ಜಾಧವ್‌, ಮೂರ್ತಿ ಮುಷಾಕ್‌ ಸೇರಿದಂತೆ ಪುಣಜನೂರು ವಲಯದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.