ಗುಂಡ್ಲುಪೇಟೆ: ‘ಮನೆ ಮನೆಗೆ ಪೊಲೀಸರು ಭೇಟಿ ನೀಡಿದ ವೇಳೆ ಮುಕ್ತವಾಗಿ ದೂರು, ಸಮಸ್ಯೆಗಳನ್ನು ಹೇಳಿಕೊಳ್ಳಬೇಕು’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್ ತಿಳಿಸಿದರು.
ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಹಾಗೂ ತಾಲ್ಲೂಕು ಪೊಲೀಸ್ ಠಾಣೆಯಿಂದ ಸಾರ್ವಜನಿಕರ ಸುರಕ್ಷತೆಗಾಗಿ ‘ಮನೆ ಮನೆಗೆ ಪೊಲೀಸ್ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸರ್ಕಾರದ ನಿರ್ದೇಶನದಂತೆ ಪ್ರತಿ ಮನೆಗೂ ಬೀಟ್ ಪೊಲೀಸರು ಭೇಟಿ ನೀಡಲಿದ್ದಾರೆ. ಆ ವೇಳೆ ಯಾವುದೇ ಸಮಸ್ಯೆಗಳಿದ್ದರೂ ತಿಳಿಸಬೇಕು. ಅದನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದು ತುರ್ತು ಕ್ರಮ ವಹಿಸಲಾಗುವುದು’ ಎಂದರು.
‘ಪೊಲೀಸರು ಜನ ಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧ ಪ್ರಕರಣಗಳನ್ನು ಸುಲಭವಾಗಿ ತಡೆಗಟ್ಟಬಹುದು. ಗ್ರಾಮೀಣ ಪ್ರದೇಶದಲ್ಲಿ ಮದ್ಯ ಅಕ್ರಮ ಮಾರಾಟ, ಜೂಜಾಟವನ್ನು ಹತೋಟಿಗೆ ತರುವಲ್ಲಿ ಕೆಲಸ ನಿರ್ವಹಿಸಬಹುದು’ ಎಂದು ಮನವಿ ಮಾಡಿದರು.
‘ಎಲ್ಲರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಬಾಲ್ಯ ವಿವಾಹ, ದೂರವಾಣಿ ಬೆದರಿಕೆ ಕರೆ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗೆ ಪೊಲೀಸರ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಲು ಜನರು ಪೊಲೀಸರ ಸಹಕಾರ ಪಡೆಯಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಗ್ರಾಮದ ಹಿರಿಯ ಮುಖಂಡರ ಗಮನಕ್ಕೆ ತಂದು ಇತ್ಯರ್ಥ ಪಡಿಸಿಕೊಳ್ಳುವುದು ಒಳಿತು. ಪ್ರತಿಯೊಂದಕ್ಕೂ ಪೊಒಲೀಸ್ ಠಾಣೆ ಮೆಟ್ಟಿಲೇರಿದರೆ ಹಣ, ಸಮಯ ವ್ಯರ್ಥವಾಗುತ್ತದೆ’ ಎಂದರು.
ಸಬ್ ಇನ್‌ಸ್ಪೆಕ್ಟರ್ ಸಾಹೇಬಗೌಡ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಸದಸ್ಯ ಚೆನ್ನಬಸಪ್ಪ, ಮಹೇಶ್, ತೋಟಗಾರಿಗೆ ಸಹಕಾರ ಸಂಘದ ನಿರ್ದೇಶಕ ಎಸ್.ಕೆ.ಶಿವಕಂಠಮೂರ್ತಿ, ಮುಖಂಡರಾದ ಗೌಡಿಕೆ ಮರಿಬಸಪ್ಪ, ಅಂಕಪ್ಪನ ಸಿದ್ದಪ್ಪ, ರವೀಂದ್ರ, ನಂಜಪ್ಪ, ಜವರಯ್ಯ, ಪಿಡಿಒ ಶಾಂತರಾಜು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.