ADVERTISEMENT

ಕೊಳ್ಳೇಗಾಲದಲ್ಲಿ ಮಹೇಶ್‌ ಆಯ್ಕೆ ಮಾಡಿ: ಚರ್ಚೆ ಹುಟ್ಟುಹಾಕಿದ ಬಿಎಸ್‌ವೈ ಹೇಳಿಕೆ

ಕೊಳ್ಳೇಗಾಲ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ನಾಲ್ವರ ಹೆಸರು, ಬಿಜೆಪಿ ಮುಖಂಡರಿಗೆ ಅಚ್ಚರಿ

ಸೂರ್ಯನಾರಾಯಣ ವಿ
Published 31 ಮಾರ್ಚ್ 2022, 4:48 IST
Last Updated 31 ಮಾರ್ಚ್ 2022, 4:48 IST
ಗೌಡಹಳ್ಳಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕಿನಕಳ್ಳಿ ರಾಚಯ್ಯ ಹಾಗೂ ಬೆಂಬಲಿಗರು ಯಡಿಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಅಭಿನಂ‌ದಿಸಿದರು
ಗೌಡಹಳ್ಳಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕಿನಕಳ್ಳಿ ರಾಚಯ್ಯ ಹಾಗೂ ಬೆಂಬಲಿಗರು ಯಡಿಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಅಭಿನಂ‌ದಿಸಿದರು   

ಚಾಮರಾಜನಗರ: ಮುಂಬರುವ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್‌.ಮಹೇಶ್ ಅವರನ್ನೇ ಆಯ್ಕೆ ಮಾಡಬೇಕು ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗೌಡಹಳ್ಳಿಯಲ್ಲಿ ಬುಧವಾರ ಸಾರ್ವಜನಿಕವಾಗಿ ಹೇಳಿರುವುದು ಜಿಲ್ಲಾ ಬಿಜೆಪಿ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಕಳೆದ ಚುನಾವಣೆಯಲ್ಲಿ ಎನ್‌.ಮಹೇಶ್‌ ಅವರು ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪ‍ರ್ಧಿಸಿ ಗೆದ್ದಿದ್ದರು. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪರೋಕ್ಷವಾಗಿ ಕಾರಣರಾಗಿದ್ದ ಮಹೇಶ್‌ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿ ದ್ದರು. ಯಡಿಯೂರಪ್ಪ ಅವರ ಆಪ್ತವಲಯದಲ್ಲೂ ಗುರುತಿಸಿಕೊಂಡಿದ್ದಾರೆ.

‌ಬುಧವಾರ ಗೌಡಹಳ್ಳಿಯ ವಿರಕ್ತಮಠದ ಧಾರ್ಮಿಕ ಸಮಾರಂಭ ದಲ್ಲಿ ಯಡಿಯೂರಪ್ಪ ಅವರು ಮಹೇಶ್‌ ಅವರಿಗೆ ಮತ್ತೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡಿರುವುದು, ಮುಂದಿನ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ADVERTISEMENT

ಯಡಿಯೂರಪ್ಪ ಹೇಳಿಕೆಯಿಂದ ಖುಷಿಯಾದ ಮಹೇಶ್‌ ಅವರು ತಮ್ಮ ಕುರ್ಚಿಯಿಂದ ಎದ್ದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ನಗುತ್ತಲೇ ಕೈಮುಗಿದಿದ್ದಾರೆ.

ಸುತ್ತೂರು ಮಠದ ಶ್ರೀಗಳು ಸೇರಿದಂತೆ ಜಿಲ್ಲೆ ಹಾಗೂ ಮೈಸೂರು ಭಾಗದ ಪ್ರಭಾವಿ ಸ್ವಾಮೀಜಿಗಳಿದ್ದ, ವೀರಶೈವ ಲಿಂಗಾಯತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಮಾರಂಭದಲ್ಲಿ ಯಡಿಯೂರಪ್ಪ ಅವರ ಹೇಳಿಕೆ ಪಕ್ಷದ ಮುಖಂಡರಲ್ಲಿ ಅಚ್ಚರಿ ಮೂಡಿಸಿದೆ.

ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳು ನಾಲ್ಕೈದು ಜನರಿದ್ದಾರೆ. ಯಾರೂ ಸಾರ್ವಜನಿಕವಾಗಿ ತಮ್ಮ ಬಯಕೆಯನ್ನು ವ್ಯಕ್ತಪಡಿಸಿಲ್ಲ. ಹಾಗಿದ್ದರೂ, ಹಾಲಿ ಶಾಸಕ ಎನ್‌.ಮಹೇಶ್‌, ಬಿಜೆಪಿಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ, ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ, ಮುಖಂಡರಾದ ಚಂದ್ರಕಲಾ ಬಾಯಿ, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕಿನಕಳ್ಳಿ ರಾಚಯ್ಯ, ಮುಖಂಡ ಸರ್ವೇಶ್‌ ಬಸವಯ್ಯ ಅವರು ಟಿಕೆಟ್‌ ಆಕಾಂಕ್ಷಿಗಳು ಎಂದು ಹೇಳಲಾಗುತ್ತಿದೆ. ಸರ್ವೇಶ್‌ ಬಸವಯ್ಯ ಅವರು ಕ್ಷೇತ್ರದಲ್ಲಿ ಹೆಚ್ಚುಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ನಾಲ್ವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜಿ.ಎನ್‌. ನಂಜುಂಡಸ್ವಾಮಿ ಅವರು ಈ ಬಾರಿಯೂ ಪಕ್ಷದ ಟಿಕೆಟ್‌ ಸಿಗುವ ವಿಶ್ವಾಸ ಹೊಂದಿದ್ದಾರೆ. ಪಕ್ಷದ ಮುಖಂಡರು ಹಾಗೂ ಆಪ್ತರ ಬಳಿ ಇದನ್ನು ಹೇಳಿಕೊಂಡಿದ್ದಾರೆ.

ಕಿನಕಳ್ಳಿ ರಾಚಯ್ಯ ಅವರು ಬುಧವಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಡಿಯೂರಪ್ಪ ಅವರಿಗೆ ವೇದಿಕೆಯಲ್ಲಿ ದೊಡ್ಡ ಹೂಮಾಲೆ ಹಾಕಿ ಗಮನಸೆಳೆದಿದ್ದಾರೆ. ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳುತ್ತಿವೆ ಮೂಲಗಳು‌.

ಯಡಿಯೂರಪ‍್ಪ ಅವರಿಗೆ ಆಪ್ತರಾಗಿರುವ, ಜಿಲ್ಲಾ ಪಂಚಾಯಿತಿಯ ಸದಸ್ಯರೂ ಆಗಿದ್ದ ಚಂದ್ರಕಲಾ ಬಾಯಿ ಅವರಿಗೆ ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಟಿಕೆಟ್‌ ಕೈತಪ್ಪಿತ್ತು. ಪಕ್ಷ ನೀಡಿದ್ದ ಬಿ.ಫಾರಂ ಅನ್ನು ವಾಪಸ್‌ ಪಡೆದು, ನಂಜುಂಡಸ್ವಾಮಿಗೆ ನೀಡಿತ್ತು. ಈ ಬಾರಿಯೂ ಅವರು ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.

ಹಾಲಿ ಶಾಸಕ ಎನ್‌.ಮಹೇಶ್‌ ಅವರು ಕೂಡ ಮತ್ತೆ ಸ್ಪರ್ಧಿಸಲು ಉತ್ಸಾಹ ತೋರಿದ್ದಾರೆ. ಬುಧವಾರ ಯಡಿಯೂರಪ್ಪ ಅವರು ತಮ್ಮನ್ನು ಬೆಂಬಲಿಸಿ ಹೇಳಿಕೆ ನೀಡಿರುವುದು ಅವರ ಹಾಗೂ ಬೆಂಬಲಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

‘ಈಗಲೇ ಹೇಳಲು ಸಾಧ್ಯವಿಲ್ಲ’

‘ಯಡಿಯೂರಪ್ಪ ಅವರು ಮಹೇಶ್‌ ಪರವಾಗಿ ಮಾತನಾಡಿರಬಹುದು. ಅಂದ ಮಾತ್ರಕ್ಕೆ ಅವರಿಗೆ ಟಿಕೆಟ್‌ ಖಚಿತ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ರಾಜ್ಯದ ಮುಖಂಡರು ಸಭೆ ಸೇರಿ ಚರ್ಚಿಸುತ್ತಾರೆ. ಆ ಬಳಿಕವಷ್ಟೇ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವರಿಷ್ಠರು ಯಡಿಯೂರಪ್ಪ ಅವರ ಮಾತನ್ನು ಕೇಳುತ್ತಾರೆಯೇ ಇಲ್ಲ, ಅವರ ಸಲಹೆಯನ್ನು ಪರಿಗಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಷ್ಟೆ’ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಬಾರಿ ಯಡಿಯೂರಪ್ಪ ಹೇಳಿದ ಅಭ್ಯರ್ಥಿಗೆ ಕೊಳ್ಳೇಗಾಲದಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್‌ ತಪ್ಪಿತ್ತು. ಬಿಜೆಪಿ ಸರ್ಕಾರ ಬರಲು ಕಾರಣರಾದ ಮಹೇಶ್‌ ಅವರ ‘ಋಣ’ ಯಡಿಯೂರಪ್ಪ ಅವರ ಮೇಲಿದೆ. ಹಾಗಾಗಿ, ಅವರಿಗೆ ಟಿಕೆಟ್‌ ನೀಡಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹಾಕುವ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರು ಬುಧವಾರ ಬಹಿರಂಗವಾಗಿ ಮತ್ತೆ ಮಹೇಶ್‌ ಅವರನ್ನು ಆಯ್ಕೆ ಮಾಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ ಎಂದು ಮುಖಂಡರು ವಿಶ್ಲೇಷಿಸುತ್ತಿದ್ದಾರೆ.

---

ಯಡಿಯೂರಪ್ಪ ನಮ್ಮ ನಾಯಕರು. ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ

-ಆರ್.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.