ADVERTISEMENT

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ಚಾಮರಾಜನಗರ ಜಿಲ್ಲೆಯಲ್ಲಿ 5,119 ಎಕರೆ ಸ್ವತ್ತು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 13:26 IST
Last Updated 7 ಏಪ್ರಿಲ್ 2025, 13:26 IST
<div class="paragraphs"><p>ಪ್ರಮೋದಾದೇವಿ ಒಡೆಯರ್</p></div>

ಪ್ರಮೋದಾದೇವಿ ಒಡೆಯರ್

   

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಸ್ವತ್ತುಗಳನ್ನು ಕೂಡಲೇ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಖಾತೆಯಾಗುವವರೆಗೂ ಯಾರ ಹೆಸರಿಗೂ ಖಾತೆ ಮಾಡದಂತೆ‌, ಕಂದಾಯ ಗ್ರಾಮವಾಗಿ ಘೋಷಿಸದಂತೆ, ಯಾವುದೇ ವಹಿವಾಟು ನಡೆಸಲು ಅವಕಾಶ ನೀಡದಂತೆ ತಕರಾರು ಅರ್ಜಿಯನ್ನೂ ಸಲ್ಲಿಸಿದ್ದಾರೆ.

ADVERTISEMENT

‘ಮಾರ್ಚ್‌ 20ರಂದು ಬರೆದಿರುವ ಪತ್ರವು 21ರಂದು ಕಚೇರಿಗೆ ತಲುಪಿದ್ದು ಅರ್ಜಿಯ ಪರಿಶೀಲನೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಜ.23, 1950ರಂದು ಮೈಸೂರು ಮಹಾರಾಜರು ಹಾಗೂ ಅಂದಿನ ಕೇಂದ್ರ ಸರ್ಕಾರದ ನಡುವಿನ ಒಪ್ಪಂದದಂತೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ, ಹಲವು ಸರ್ವೇ ನಂಬರ್‌ಗಳಲ್ಲಿರುವ 5,119 ಎಕರೆ 9 ಗುಂಟೆ ಜಮೀನು ಮಹಾರಾಜರಿಗೆ ಸೇರಿದ ಖಾಸಗಿ ಸ್ವತ್ತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲಿ ಎಷ್ಟು ಆಸ್ತಿ?

ಅಟ್ಟಗೂಳಿಪುರದಲ್ಲಿ 4,445 ಎಕರೆ 33 ಗುಂಟೆ, ಹರದನಹಳ್ಳಿಯ ಸರ್ವೆ ನಂಬರ್ 125, 124, 134, 135, 133, 463, 169, 184ರಲ್ಲಿ 130 ಎಕರೆ 3 ಗುಂಟೆ, ಬೂದಿತಿಟ್ಟು ಗ್ರಾಮದ ಸರ್ವೇ ನಂಬರ್ 117ರಲ್ಲಿ 63 ಎಕರೆ 39 ಗುಂಟೆ, ಕರಡಿಹಳ್ಳ ಗ್ರಾಮದ ಸರ್ವೇ ನಂಬರ್ 1, 2, 3ರಲ್ಲಿ 76 ಎಕರೆ 23 ಗುಂಟೆ.

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮೈಸೂರು ಮಹಾರಾಜರಿಗೆ ಸೇರಿರುವ ಸ್ವತ್ತುಗಳನ್ನು ಖಾತೆ ಮಾಡಿಕೊಡುವಂತೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬರೆದಿರುವ ಪತ್ರದ ಪ್ರತಿ

ಕನ್ನಿಕೆರೆ ಗ್ರಾಮದ ಸರ್ವೇ ನಂಬರ್ 1, 2, 3 ರಲ್ಲಿ 190 ಎಕರೆ 4 ಗುಂಟೆ, ಉಮ್ಮತ್ತೂರು ಗ್ರಾಮದ ಸರ್ವೇ ನಂಬರ್ 563ರಲ್ಲಿರುವ 199 ಎಕರೆ 27 ಗುಂಟೆ, ಬಸವಾಪುರ ಗ್ರಾಮದ ಸರ್ವೇ ನಂಬರ್ 143ರಲ್ಲಿ 13 ಎಕರೆ ಹಾಗೂ ಚಾಮರಾಜನಗರದಲ್ಲಿರುವ ಮಹಾರಾಜರ ಜನನ ಮಂಟಪ ಹಾಗೂ ಉದ್ಯಾನವು ರಾಜಮನೆತನದ ಸ್ವತ್ತಾಗಿದೆ ಎಂದು ತಿಳಿಸಿದ್ದಾರೆ.

ರಾಜರ ಸ್ವತ್ತುಗಳಿರುವ ಗ್ರಾಮಗಳನ್ನು ಜಿಲ್ಲಾಡಳಿತವು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುತ್ತಿರುವ ಮಾಹಿತಿ ಇದ್ದು, ಖಾಸಗಿ ಸ್ವತ್ತುಗಳನ್ನು ಕಂದಾಯ ಗ್ರಾಮವಾಗಿಸಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.

‘ಪತ್ರ ತಲುಪಿದೆ; ಪೂರಕ ದಾಖಲೆಗಳು ಸಲ್ಲಿಸಿಲ್ಲ’

ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಪತ್ರ ಜಿಲ್ಲಾಡಳಿತಕ್ಕೆ ತಲುಪಿದೆ. ಆದರೆ ಮಹಾರಾಜರ ಖಾಸಗಿ ಸ್ವತ್ತು ಎಂಬುದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಅರ್ಜಿ ಸಂಬಂಧ ಪರಿಶೀಲನೆ ನಡೆಸುವಂತೆ ಚಾಮರಾಜನಗರ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ  ಸಿ.ಟಿ.ಶಿಲ್ಪಾನಾಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.