
ಹನೂರು: ತಾಲ್ಲೂಕಿನ ಮಣಗಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ತಮ್ಮ ಶಾಲೆ, ಗ್ರಾಮದ ಮೂಲ ಸೌಲಭ್ಯ ಕೊರತೆಗಳನ್ನು ಸಚಿವರು, ಶಾಸಕರ ಮುಂದೆ ಎಳೆ ಎಳೆಯಾಗಿ ಬಿಟ್ಟಿಟ್ಟರು.
ದೊಡ್ಡಮಟ್ಟದಲ್ಲಿ ಮಣಗಳ್ಳಿಯಲ್ಲಿ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು.
ಮಣಗಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮಾತನಾಡಿ, ಅಲಗುಮೂಲೆಯಿಂದ ಮಣಗಳ್ಳಿ ಗ್ರಾಮಕ್ಕೆ ಶಾಲಾ ಮಕ್ಕಳು ಬರುತ್ತಿದ್ದು, ಸಾರಿಗೆ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದಳು. ಅಮೂಲ್ಯ ಎಂಬ ವಿದ್ಯಾರ್ಥಿನಿ ಮಾತನಾಡಿ, ನಮ್ಮ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಬೇಕು ಜೊತೆಗೆ ಡಿಜಿಟಲ್ ಗ್ರಂಥಾಲಯ ತೆರೆಯುಬೇಕು ಎಂದು ಮನವಿ ಮಾಡಿದಳು. ವಿದ್ಯಾಶ್ರೀ ಎಂಬ ವಿದ್ಯಾರ್ಥಿನಿ ಮಾತನಾಡಿ, ರಾತ್ರಿ ವೇಳೆ ಕಿಡಿಗೇಡಿಗಳು ನಮ್ಮ ಶಾಲೆಗೆ ನುಗ್ಗಿ ಕೈತೋಟದ ಹೂಕುಂಡಗಳನ್ನು ಒಡೆದುಹಾಕುತ್ತಿದ್ದಾರೆ. ಜೊತೆಗೆ ನಮ್ಮ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಿಕೊಡಬೇಕು ಎಂದಳು. ಭರತ್ ಎಂಬ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಅಕ್ಷರ ದಾಸೋಹ ಕೊಠಡಿ ಹಾಗೂ ಬೋಜನಾಲಯವನ್ನು ನಿರ್ಮಿಸಿಕೊಂಡುವಂತೆ ಮನವಿ ಮಾಡಿದನು.
ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ರೈತರು ತಾವು ಬೆಳೆದ ಫಸಲನ್ನು ಬೇರಡೆ ಕೊಂಡೊಯ್ಯಲು ಸಮರ್ಪಕ ರಸ್ತೆ ನಿರ್ಮಿಸುವಂತೆ ಅಲಗುಮೂಲೆ ಸಾಲೆ ವಿದ್ಯಾರ್ಥಿನಿ ಭುವನೇಶ್ವರಿ ಮನವಿ ಮಾಡಿದಳು. ಬೈರನತ್ತ ಶಾಲೆಯ ವಿದ್ಯಾರ್ಥಿ ಸಚಿನ್ ಮಾತನಾಡಿ, ನಮ್ಮ ಶಾಲೆಯಲ್ಲಿ 70 ಮಕ್ಕಳಿಗೆ ಒಂದೇ ಶೌಚಾಲಯವಿದ್ದು ಅದು ಸಹ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ಇದನ್ನು ದುರಸ್ತಿಪಡಿಸುವುದರ ಜೊತೆಗೆ ಮತ್ತೆರೆಡು ಹೆಚ್ಚುವರಿ ಶೌಚಾಲಯ ನಿರ್ಮಿಸಕೊಡಬೇಕು. ಜೊತೆಗೆ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದನು.
ಇದಕ್ಕು ಮುನ್ನ ದೀಪ ಬೆಳಗಿಸಿ ಮಾತನಾಡಿದ ಶಾಸ ಎಂ.ಆರ್. ಮಂಜುನಾಥ್, ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿರುವ ನಮ್ಮ ರಾಜ್ಯವು ಹೊರ ಭಾಗದವರಿಗೂ ಸೇವೆ ನೀಡುವಷ್ಟು ಸಮರ್ಥವಾಗಿದೆ. ಇಂದಿನ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಮಕ್ಕಳಿಂದಲೇ ಅವರ ಹಕ್ಕುಗಳು, ಬೇಡಿಕೆಗಳ ಬಗ್ಗೆ ತಿಳಿದು ಪರಿಹರಿಸುವ ಇಂತಹ ಕಾರ್ಯಕ್ರಮಗಳು ಪಾರದರ್ಶಕತೆ, ಉತ್ತರದಾಯಿತ್ವ ಗ್ರಾಮೀಣ ಅಭಿವೃದ್ಧಿಗೆ ನೆರವಾಗಲಿವೆ ಎಂದರು.
ಸಭೆಯಲ್ಲಿ ಮಣಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್. ಉಪಾಧ್ಯಕ್ಷೆ ಚಿಕ್ಕವೆಂಕಟಮ್ಮ, ಜಿಲ್ಲಾ ಪಂಚಾಯಿತಿ ಸಿಇಓ ಮೋನಾ ರೋತ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಚಂದ್ರ ಪಾಟೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮಕ್ಕಳನ್ನು ಹುರಿದುಂಬಿಸಿದ ಸಚಿವ
ಸಭೆಯಲ್ಲಿ ಮಕ್ಕಳು ಪ್ರಸ್ತಾಪಿಸಿರುವ ಸಮಸ್ಯೆಗಳು ಬೇಡಿಕೆಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದ್ದು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕು. ಕುಡಿಯುವ ನೀರು ರಸ್ತೆಯಂತಹ ಮೂಲ ಸೌಲಭ್ಯಗಳನ್ನು ಒದಗಿಸುವ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಸ್ತೆ ಅಕ್ಷರ ದಾಸೋಹಕ್ಕೆ ಪ್ರತ್ಯೇಕ ಕೊಠಡಿ ಭೋಜನಾಲಯಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕು. ಸಿಎಸ್ಆರ್ ಅನುದಾನದಡಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿದ್ದು ಅದನ್ನು ಬಳಸಿಕೊಂಡು ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಶಾಲಾ ಮಕ್ಕಳೊಂದಿಗೆ ಮಾತನಾಡಿದ ಸಚಿವರು ಮುಂದೆ ಏನಾಗಬೇಕೆಂದು ಬಯಸಿದ್ದೀರಿ? ಕಲಿಕೆಗೆ ಇನ್ನೂ ಯಾವ ಸೌಲಭ್ಯಗಳು ನಿಮಗೆ ಅಗತ್ಯವಿದೆ ಎಂದು ಪ್ರಶ್ನಿಸಿದರು. ವೈದ್ಯ ಜಿಲ್ಲಾಧಿಕಾರಿ ಅಂತಹ ಹುದ್ದೆಗಳನ್ನು ಅಲಂಕರಿಸುವ ಅಭಿಲಾಷೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಚೆನ್ನಾಗಿ ಓದಬೇಕು. ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲರು ಮಹಿಳೆಯರೇ ಆಗಿದ್ದಾರೆ. ನಿಮಗೆ ಇವರೇ ಸ್ಫೂರ್ತಿಯಾಗಿದ್ದಾರೆ ಎಂದರು. ಹಿರಿಯ ಅಧಿಕಾರಿಗಳ ಜೊತೆ ವಿದ್ಯಾರ್ಥಿಗಳನ್ನು ಮಾತನಾಡಿಸಿ ಹುರಿದುಂಬಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.