ADVERTISEMENT

ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ದರ ಇಳಿಸದಿದ್ದರೆ ಇಂಧನ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 12:17 IST
Last Updated 3 ಅಕ್ಟೋಬರ್ 2022, 12:17 IST
ವಿದ್ಯುತ್‌ ದರ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಸೋಮವಾರ ಚಾಮರಾಜನಗರ ಸೆಸ್ಕ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು
ವಿದ್ಯುತ್‌ ದರ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಸೋಮವಾರ ಚಾಮರಾಜನಗರ ಸೆಸ್ಕ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಸೋಮವಾರ ನಗರದ ಸೆಸ್ಕ್‌ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕಚೇರಿ ಮುಂಭಾಗ ಸೇರಿದ ಪ್ರತಿಭಟನಕಾರರು ‘ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ ಸೌದೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡಸಿದರು. ಸರ್ಕಾರ, ಇಂಧನ ಸಚಿವರ ವಿರುದ್ದ ಘೋಷಣೆ ಕೂಗಿದರು.

ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ತೊಂದರೆ ಕೊಡುತ್ತಿದೆ. ಒಂದು ಒಳ್ಳೆಯ ಕೆಲಸ ಮಾಡಿಲ್ಲ. ದಿನ ನಿತ್ಯದ ಜೀವನದಲ್ಲಿ ಅಗತ್ಯವಾಗಿ ಬೇಕಾದ ವಿದ್ಯುತ್ತಿನ ದರವನ್ನು ಸರ್ಕಾರ ಏಕಾಏಕಿ ಏರಿಕೆ ಮಾಡಿದೆ. ಇದನ್ನು ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಜನರನ್ನು ಲೂಟಿ ಮಾಡುವುದನ್ನು ಬಿಟ್ಟು, ಅನಕೂಲ ಕಲ್ಪಿಸಬೇಕು. ತಕ್ಷಣವೇ ವಿದ್ಯುತ್‌ ದರವನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಇಂಧನ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು’ ಎಂದು ಅವರು ಎಚ್ಚರಿಸಿದರು.

ಶಾ.ಮರಳಿ, ಕಂಡಕ್ಟರ್ ಚಾ.ಸಿ.ಸೋಮನಾಯಕ, ಚಾ.ವೆಂ.ರಾಜ್‌ಗೋಪಾಲ್, ನಿಜಧ್ವನಿ ಗೋವಿಂದರಾಜು, ಗು. ಪುರುಷೋತ್ತಮ್, ಪಣ್ಯದಹುಂಡಿ ರಾಜು, ಗಾಳಿಪುರ ಇರ್ಷಾದ್, ಚಂದ್ರಕುಮಾರ್, ಪಿ.ಕೃಷ್ಣಯ್ಯ, ಸಾಗರ್‌ ರಾವತ್, ಆಟೊ ಸುರೇಶ್, ತಾಂಡವಮೂರ್ತಿ, ದೊರೆ, ಜಗದೀಶ್, ಸಣ್ಣಮಾದಯ್ಯ, ಸಿದ್ದಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.