ADVERTISEMENT

ಮೋಟಾರ್‌ ಕಾಯ್ದೆ: ದಂಡ ಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಸೇನಾ ಪಡೆ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು
ದಂಡದ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಸೇನಾ ಪಡೆ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್‌ ವಾಹನ ಕಾಯ್ದೆಯ ಅಡಿಯಲ್ಲಿ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದಂಡವನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹೆಲ್ಮೆಟ್‌ ಧರಿಸಿ, ಸೈಕಲ್‌ ಸವಾರಿ ಮಾಡುವುದರ ಮೂಲಕ ಹೊಸ ಕಾಯ್ದೆಯನ್ನು ಖಂಡಿಸಿದರು.

ಚಾಮರಾಜೇಶ್ವರ ಉದ್ಯಾನವನ ಎದುರು ಸೇರಿದ ಪ್ರತಿಭಟನಾನಿರತರು ಭುವನೇಶ್ವರಿ ವೃತ್ತಕ್ಕೆ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಮಾತನಾಡಿ, ‘ಸಂಚಾರ ನಿಯಮಗಳ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕರ ಹಗಲು ದರೋಡೆ ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಹೆಲ್ಮೆಟ್ ಧರಿಸದವರಿಗೆ ₹1,000 ದಂಡ ಹಾಕಿದ ಮೇಲೆ ಹೆಲ್ಮೆಟ್ ನೀಡಬೇಕು. ವಾಹನ ವಿಮೆ ಇಲ್ಲದವರಿಗೆ ದಂಡ ಹಾಕಿದ ಮೇಲೆ ಸ್ಥಳದಲ್ಲೇ ವಿಮೆ ಮಾಡಿಸಿಕೊಡಬೇಕು. ಮದ್ಯದ ಅಂಗಡಿಗಳನ್ನು ಬಂದ್‌ ಮಾಡಿದರೆ ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಬಹುದು. ದಂಡದ ಮೊತ್ತ ಕಡಿಮೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.

ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಅವರು ಮಾತನಾಡಿ, ‘ಖಾಲಿಯಾಗಿರುವ ಕೇಂದ್ರ, ರಾಜ್ಯ ಸರ್ಕಾರದ ಖಜಾನೆಗೆ ಹಣ ತುಂಬಿಸುವ ಉದ್ದೇಶದಿಂದ ಹೆಚ್ಚು ದಂಡ ವಿಧಿಸಿ ಸಾರ್ವಜನಿಕರನ್ನು ಲೂಟಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಚಾ.ಸಿ.ಸೋಮನಾಯಕ, ಗು.ಪುರುಷೋತ್ತಮ್, ಚಾ.ಹ.ಶಿವರಾಜ್, ರವಿಚಂದ್ರ ಪ್ರಸಾದ್, ಮಹದೇವನಾಯಕ, ವೀರಭದ್ರ, ತಾಂಡವಮೂರ್ತಿ, ಟೈಲರ್‌ನಂಜುಂಡ, ಲಿಂಗರಾಜು, ಮಂಜುನಾಥ, ಮಹದೇವ, ಸ್ವಾಮಿ, ದೊರೆಸ್ವಾಮಿ, ಕಾರ್ತಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.