ADVERTISEMENT

ಬಜೆಟ್‌ನಲ್ಲಿ ಗಡಿ ಜಿಲ್ಲೆ ಕಡೆಗಣನೆ ಖಂಡಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 12:42 IST
Last Updated 11 ಮಾರ್ಚ್ 2021, 12:42 IST
ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಗಡಿ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಬೆಂಬಲಿಗರೊಂದಿಗೆ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಿದ ಅವರು ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಚಾಮರಾಜನಗರಕ್ಕೆ ಏನೂ ಕೊಟ್ಟಿಲ್ಲ. ಬಜೆಟ್‌ ಇಡೀ ರಾಜ್ಯದ ಜನರ ಪರವಾಗಿರಬೇಕು. ಆದರೆ, ಮುಖ್ಯಮಂತ್ರಿ ಅವರು ತಮಗೆ ಬೇಕಾದ ಜಿಲ್ಲೆಗಳಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಇಲ್ಲಿ ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ. ಯಡಿಯೂರಪ್ಪ ಯಾಕೆ ಚಾಮರಾಜನಗರಕ್ಕೆ ಬರುತ್ತಿಲ್ಲ? ಅನುದಾನ ಯಾಕೆ ಕೊಡುತ್ತಿಲ್ಲ? ಇದನ್ನು ಯಾರೂ ಕೇಳುವವರಿಲ್ಲ.ಇವರಿಗೆ ಚಾಮರಾಜನಗರ ಗೊತ್ತೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಯಡಿಯೂರಪ್ಪ ಸಿಡಿ ಬಗ್ಗೆಯೂ ತನಿಖೆಯಾಗಲಿ: ರಮೇಶ್ ಜಾರಕಿಹೊಳಿ ಒಬ್ಬರದ್ದು ಮಾತ್ರ ಅಲ್ಲ, ಯಡಿಯೂರಪ್ಪ ಸಿಡಿ ಬಗ್ಗೆಯೂ ತನಿಖೆಯಾಗಬೇಕು. ಸಿಡಿ ಪ್ರಕರಣದಿಂದ ರಕ್ಷಣೆ ಪಡೆಯಲು ಆರು ಮಂದಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಿಡಿ ಹಗರಣ ದೊಡ್ಡ ಭೂತವಾಗಿ ಪರಿಣಾಮಿಸಿದೆ. ಇದು ಶಾಸನಸಭೆಯಲ್ಲಿ ಚರ್ಚೆ ಆಗಬೇಕು. ಏಕೆ ಚೆರ್ಚೆ ಆಗಲಿಲ್ಲ? ಇದನ್ನು ಪ್ರಶ್ನೆ ಮಾಡುವಲ್ಲಿ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿದೆ. ಸರ್ವಾಧಿಕಾರಿ ಯಡಿಯೂರಪ್ಪ ರಾಜ್ಯದ ಶಾಸನಸಭೆಯ ಶಕ್ತಿ, ಗೌರವ ಹಾಳು ಮಾಡಿದ್ದಾರೆ’ ಎಂದು ದೂರಿದರು.

15ರಂದು ಅರಣ್ಯ ಇಲಾಖೆ ಕಚೇರಿ ಮುತ್ತಿಗೆ: ಪೊನ್ನಂಪೇಟೆಯಲ್ಲಿ ಕಾಡುಪ್ರಾಣಿಗಳು, ಮಾನವರ ಮೇಲೆ ಸಂಘರ್ಷ ನಡೆಯುತ್ತಿದ್ದು, ವನ್ಯಜೀವಿಗಳು ನಾಡಿಗೆ ನುಗ್ಗುತ್ತಿವೆ. ಜನರು ಭಯಭೀತರಾಗಿದ್ದಾರೆ. ಇದಕ್ಕೆ ಕಾರಣ ಅರಣ್ಯ ಒತ್ತುವರಿ, ಪ್ರಾಣಿಗಳ ನಿರ್ವಹಣೆ ಇಲ್ಲದಿರುವುದು ಕಾರಣ. ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳಲು ಇಡೀ ರಾಜ್ಯದಾದ್ಯಂತ ಸರ್ಕಾರ ತೀವ್ರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ 15 ರಂದು ಬೆಂಗಳೂರು ಕೇಂದ್ರ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆಹಾಕಿ ಚಳವಳಿ ನಡೆಸಲಾಗುವುದು. ನಂತರ ಪೊನ್ನಂಪೇಟೆಯಲ್ಲಿ ಧರಣೆ ನಡೆಸಲಾಗುವುದು ಎಂದರು.

ಕಾರ್ ನಾಗೇಶ್, ಬೂದಿತಿಟ್ಟು ಲಿಂಗರಾಜು, ವರದನಾಯಕ, ವರದರಾಜು, ಶಿವಲಿಂಗಮೂರ್ತಿ, ಶ್ರೀನಿವಾಸಗೌಡ, ರಾಮು, ಚಾ.ಮ.ಸೋಮಶೇಖರ್ ಇತರರು ರವಿಚಂದ್ರ ಪ್ರಸಾದ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.