ಚಾಮರಾಜನಗರ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಗರದಲ್ಲಿ ಬುಧವಾರವೂ ಹೋರಾಟ ನಡೆಯಿತು.
ಕಬ್ಬು ಬೆಳೆಗಾರರ ಸಂಘದ ಸದಸ್ಯರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರೆ, ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಪ್ರತಿಭಟನೆ ನಡೆಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟಿನ ಮುಂದೆ ಸೇರಿದ ಪ್ರತಿಭಟನಕಾರರು, ಅಂಕಿ ಬಿಚ್ಚಿ, ಅರೆಬೆತ್ತಲೆಯಾಗಿ ನಿಂತುಕೊಂಡು ಕೇಂದ್ರ, ರಾಜ್ಯ ತಮಿಳುನಾಡು ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ‘ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರು ಜನ ಜಾನುವಾರುಗಳಿಗೆ, ಕೃಷಿಗೆ ನೀರು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಕಾವೇರಿ ನೀರಿನ ವಿಚಾರದಲ್ಲಿ ಬುಧವಾರ ತೀರ್ಪು ನೀಡಬಹುದು ಎಂದು ನಿರೀಕ್ಷೆ ಇತ್ತು. ಆದರೆ, ವಿಚಾರಣೆಯನ್ನು ಮತ್ತೆ ಮುಂದುವರಿದಿರುವುದು ತೀವ್ರ ನಿರಾಸೆ ತಂದಿದೆ. ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದರೆ, ಜನರು, ರೈತರು ಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.
‘ಕಾವೇರಿ, ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪ್ರಮಾಣ ಶೇಕಡ 52ರಷ್ಟು ಕಡಿಮೆಯಾಗಿದೆ. ಇದರ ಅರಿವಿದ್ದೂ ಸರ್ಕಾರ ಏನೂ ಮಾಡುತ್ತಿಲ್ಲ. ರಾಜ್ಯ ಸರ್ಕಾರ ನ್ಯಾಯಾಲಯದ ತೀರ್ಪು, ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶ ಎಂದು ಹೇಳಿಕೊಂಡು ಜಲಾಶಯದ ನೀರನ್ನು ಖಾಲಿ ಮಾಡುತ್ತಿರುವುದು ರಾಜ್ಯದ ರೈತರ ಮೇಲೆ ಬರೆ ಎಳೆದಂತಾಗುತ್ತದೆ. ತಕ್ಷಣವೇ ರಾಜ್ಯ ಸರ್ಕಾರ ನೀರು ಹರಿಸುವುದನ್ನು ನಿಲ್ಲಿಸಬೇಕು’ ಎಂದರು.
ರಾಜಕೀಯ ಪಕ್ಕಕ್ಕಿಡಿ: ಜಲಾಶಯಗಳಲ್ಲಿ ನೀರು ಖಾಲಿಯಾದರೆ, ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆ, ₹2000 ಹಣದಿಂದ ನೀರು ಖರೀದಿಸಲು ಆಗುವುದಿಲ್ಲ. ರಾಜ್ಯ ಸರ್ಕಾರ ಇನ್ನಾದರು ಎಚ್ಚೆತ್ತುಕೊಂಡು, ತಮಿಳುನಾಡು ಕ್ಯಾತೆಗೆ ಪ್ರಬಲವಾಗಿ ಪ್ರತಿಕ್ರಿಯಿಸಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಡಬೇಕು. ನೀರು ಹರಿಸುವದನ್ನು ತಕ್ಷಣ ನಿಲ್ಲಿಸದಿದ್ದರೆ, ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಂಘದ ಪಟೇಲ್ ಶಿವಮೂರ್ತಿ, ತಾಲ್ಲೂಕು ಅಧ್ಯಕ್ಷ ಹಾಲಿನ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಲೆಯೂರಿನ ಹರ್ಷ, ಮಹೇಂದ್ರ, ಅರಳಿ ಕಟ್ಟೆ ಕುಮಾರ್, ಪ್ರಭುಸ್ವಾಮಿ, ಮಹದೇವಸ್ವಾಮಿ, ವೀರಭದ್ರಸ್ವಾಮಿ, ಕೀಳಲಿಪುರ ನಂದೀಶ್, ಮಹದೇವಪ್ಪ, ಶ್ರೀಕಂಠಪ್ಪ, ಬಸವಣ್ಣ ಇತರರು ಇದ್ದರು.
ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿ ಪ್ರತಿಭಟನೆ
ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಸತತ ಏಳನೇ ದಿನ ಹೋರಾಟ ನಡೆಸಿದ್ದು, ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದಲ್ಲಿ ಪ್ರತಿಭಟನಕಾರರು ಅರೆಬೆತ್ತಲೆಯಾಗಿ ಅಂಗಾತ ಮಲಗಿ, ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ತಮಿಳುನಾಡು, ಕರ್ನಾಟಕ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿದರು.
ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ನೆರೆ ರಾಜ್ಯಕ್ಕೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯದಾದ್ಯಂತ ನಿರಂತರ ಹೋರಾಟ ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಾಜ್ಯದ ಜನತೆಗೆ, ರೈತರ ಹೊಟ್ಟೆಗೆ ತಣ್ಣೀರು ಹಾಕಿದೆ. ಈ ಕಾರಣಕ್ಕೆ ನಾವು ತಣ್ಣೀರು ಬಟ್ಟೆ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದೇವೆ’ ಎಂದರು.
ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಾ.ಮುರಳಿ, ಪಣ್ಯದಹುಂಡಿರಾಜು, ನಿಜಧ್ವನಿಗೋವಿಂದರಾಜು, ಮಹೇಶ್‌ಗೌಡ, ಸಾಗರ್‌ರಾವತ್, ಗು.ಪುರುಷೋತ್ತಮ್, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಚಾ.ಸಿ.ಸಿದ್ದರಾಜು, ಲಿಂಗರಾಜು, ತಾಂಡವಮೂರ್ತಿ, ಆಟೊ ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.