ADVERTISEMENT

ಸಂತೇಮರಹಳ್ಳಿ: ಶಾಸಕ ಮಹೇಶ್‌ಗೆ ಪುಟ್ಟಸ್ವಾಮಿ ಬೆಂಬಲಿಗರ ಮುತ್ತಿಗೆ

ಜನಾಭಿಪ್ರಾಯ ಸಮಾವೇಶದಲ್ಲಿ ಬಿ.ಪುಟ್ಟಸ್ವಾಮಿ ಪತ್ನಿ ಸುನೀತಾ ಪ್ರತ್ಯಕ್ಷ, ಗೊಂದಲದ ವಾತಾವರಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 16:28 IST
Last Updated 11 ಫೆಬ್ರುವರಿ 2023, 16:28 IST
ಸಂತೇಮರಹಳ್ಳಿಯ ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗದಿಂದ ನಡೆದ ಜನಾಭಿಪ್ರಾಯ ಸಮಾವೇಶವನ್ನು ಮುಖಂಡರು ಉದ್ಘಾಟಿಸಿದರು
ಸಂತೇಮರಹಳ್ಳಿಯ ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿ.ಪುಟ್ಟಸ್ವಾಮಿ ಅಭಿಮಾನಿ ಬಳಗದಿಂದ ನಡೆದ ಜನಾಭಿಪ್ರಾಯ ಸಮಾವೇಶವನ್ನು ಮುಖಂಡರು ಉದ್ಘಾಟಿಸಿದರು   

ಸಂತೇಮರಹಳ್ಳಿ: ‍ಪೊಲೀಸ್‌ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಚುನಾವಣಾ ರಾಜಕೀಯಕ್ಕೆ ಇಳಿದಿರುವ ಬಿ.ಪುಟ್ಟಸ್ವಾಮಿ ಅವರ ಅಭಿಮಾನಿ ಬಳಗ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಜನಾಭಿಪ್ರಾಯ ಸಮಾವೇಶದಲ್ಲಿ ಪುಟ್ಟಸ್ವಾಮಿ ಅವರ ಪತ್ನಿ ಸುನೀತಾ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಕೆರಳಿಸಿತು.

ಶಾಸಕ ಎನ್‌.ಮಹೇಶ್‌ ಅವರೇ ಕುಮ್ಮಕ್ಕು ನೀಡಿ ಸುನೀತಾ ಅವರನ್ನು ಸಮಾವೇಶಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದ ಪುಟ್ಟಸ್ವಾಮಿ ಬೆಂಬಲಿಗರು, ಪ್ರವಾಸಿ ಮಂದಿರದಲ್ಲಿ ಶಾಸಕರಿದ್ದ ಕೋಣೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ಪತ್ನಿ ಸುನೀತಾ ಅವರು ಪ್ರವಾಸಿ ಮಂದಿರದಿಂದ ಹೊರಬಂದದ್ದನ್ನು ಕಂಡು ಪುಟ್ಟಸ್ವಾಮಿ ಅವರೂ ಕೋಪಗೊಂಡು ಅಭಿಮಾನಿಗಳ ಬೆಂಬಲಕ್ಕೆ ನಿಂತರು. ‘ಕ್ಷೇತ್ರದಲ್ಲಿ ನನಗೆ ಸಿಗುತ್ತಿರುವ ಬೆಂಬಲವನ್ನು ಕಂಡು, ಜನಾಭಿಪ್ರಾಯವನ್ನು ನೋಡಿ ಹೊಟ್ಟೆ ಕಿಚ್ಚು ಪಟ್ಟು, ಇಲ್ಲಿಗೆ ಕರೆಸಿಕೊಂಡಿದ್ದಾರೆ. ಇದರ ಹಿಂದೆ ಶಾಸಕರ ಪಿತೂರಿ ಇದೆ’ ಎಂದು ಆರೋಪಿಸಿದರು.

ADVERTISEMENT

ಆಗಿದ್ದೇನು?: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಸ್ಪರ್ಧಿಸಲು ಬಯಸಿರುವ ಪುಟ್ಟಸ್ವಾಮಿ, ಸಂತೇಮರಹಳ್ಳಿಯಲ್ಲಿ ಶನಿವಾರ ಜನಾಭಿಪ್ರಾಯ ಸಮಾವೇಶ ಹಮ್ಮಿಕೊಂಡಿದ್ದರು. ಸಮಾವೇಶ ಮುಕ್ತಾಯದ ಹೊತ್ತಿನಲ್ಲಿ ಸುನೀತಾ ಬಂದಿದ್ದರು. ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ಜಗಳಕ್ಕೆ ಮುಂದಾಗಿದ್ದರು. ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದರು.

ಬಳಿಕ ಸುನೀತಾ ಪ್ರವಾಸಿ ಮಂದಿರಕ್ಕೆ ಹೋಗಿದ್ದರು. ಶಾಸಕ ಎನ್.ಮಹೇಶ್‌ ಕೂಡ ಅಲ್ಲಿದ್ದರು.

ಶಾಸಕ ಸುನೀತಾರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸಿದ ಪುಟ್ಟಸ್ವಾಮಿ ಬೆಂಬಲಿಗರು ಶಾಸಕರು ಇದ್ದ ಕೊಠಡಿಗೆ ಮುತ್ತಿಗೆ ಹಾಕಿದರು. ಅವರನ್ನು ಪೊಲೀಸರು ತಡೆದು ವಾಪಸ್‌ ಕಳುಹಿಸಿದರು. ನಂತರ ಹೊರಗಡೆ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ವಲ್ಪ ಹೊತ್ತಿನಲ್ಲಿ ಎನ್‌.ಮಹೇಶ್‌ ಬೆಂಬಲಿಗರು ಕೂಡ ಅಲ್ಲಿ ಜಮಾಯಿಸಿದರು. ಎರಡೂ ಕಡೆಯವರು ಘರ್ಷಣೆಗೆ ಮುಂದಾಗುತ್ತಿದ್ದಂತೆಯೇ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿದರು.

ಶಾಸಕರ ಷಡ್ಯಂತ್ರ: ಮಾಧ್ಯಮಗಳೊಂದಿಗೆ ಮಾತನಾಡಿದ ಪುಟ್ಟಸ್ವಾಮಿ, ‘ನನ್ನ ಮೇಲೆ ಜನರಿಗೆ ಇರುವ ಅಭಿಪ್ರಾಯವನ್ನು ಕಂಡು ಮಹೇಶ್‌ ಅವರು ಷಡ್ಯಂತ್ರ ಮಾಡಿ ಆಕೆಯನ್ನು ಇಲ್ಲಿಗೆ ಕಳುಹಿಸಿದ್ದಾರೆ. ಸಮಾರಂಭದಲ್ಲಿ ಸಾವಿರಾರು ಜನರ ಮಧ್ಯೆ ಅವಮಾನ ಮಾಡಿದ್ದಲ್ಲದೇ, ನೇರವಾಗಿ ಆಕೆಯೊಂದಿಗೆ ಮಾತನಾಡುವುದು ಏನಿತ್ತು? ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಅವರು, ಯೋಗ್ಯತೆಯನ್ನು ಉಳಿಸಿಕೊಂಡಿದ್ದರೆ ಹೀಗ್ಯಾಕೆ ಆಡುತ್ತಾ ಇದ್ದಾರೆ. ಕಾನೂನು ವಿರುದ್ಧವಾಗಿ ಯಾಕೆ ಕೆಲಸ ಮಾಡಬೇಕು. ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ. ನೇರವಾಗಿ ಎದುರಿಸಲಿ’ ಎಂದು ಹರಿಹಾಯ್ದರು.

ಮಹಿಳೆ ಪರಿಚಯ ಇಲ್ಲ: ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸ‌ಕ ಎನ್‌.ಮಹೇಶ್‌, ‘ ಮಹಿಳೆಯ ಪರಿಚಯ ನನಗಿಲ್ಲ. ಮೊದಲ ಬಾರಿ ನೋಡುತ್ತಿದ್ದೇನೆ. ಪ್ರವಾಸಿ ಮಂದಿರಲ್ಲಿ ಕಾರ್ಯಕರ್ತರ ಸಭೆ ಮಾಡುತ್ತಿರುವಾಗ ಮಹಿಳೆ ಬಂದಿದ್ದರು. ಸಭೆ ಮುಗಿದು ಮಾತನಾಡುತ್ತೇನೆ ಎಂದು ಹೇಳಿದ್ದೆ. ಅಷ್ಟರಲ್ಲಿ ಹೊರಗಡೆ ಗಲಾಟೆ ಆರಂಭವಾಯಿತು. ಇಂತಹ ನೀಚ ರಾಜಕಾರಣ ನಾನು ಮಾಡಬೇಕಾಗಿಲ್ಲ. ಅವರ ಹುಳುಕು ಮುಚ್ಚಿಕೊಳ್ಳಲು, ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಜಿಲ್ಲೆಯ ಅಭಿವೃದ್ಧಿಗಾಗಿ ರಾಜಕಾರಣಕ್ಕೆ’

ಇದಕ್ಕೂ ಮೊದಲು ಸಮಾರಂಭದಲ್ಲಿ ಮಾತನಾಡಿದ ಪುಟ್ಟಸ್ವಾಮಿ, ‘ಜಿಲ್ಲೆಯಾದ್ಯಂತ ಅಭಿಮಾನಿಗಳು ರೂಪಿಸಿರುವ ಟ್ರಸ್ಟ್ ಹೆಸರಿನಲ್ಲಿ 52 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನಾಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷ ಸೇರಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ನಿರೀಕ್ಷೆಗೂ ಮೀರಿ ಹೆಚ್ಚಿನ ಜನ ಸೇರಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

‘ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ನೀಡಿರುವಷ್ಟು ಪ್ರಾಶಸ್ತ್ಯ ಜಿಲ್ಲೆಗೆ ಸರ್ಕಾರ ನೀಡಿಲ್ಲ. ಶಿಕ್ಷಣ, ಆರೋಗ್ಯ, ರಾಜಕೀಯ ಕ್ಷೇತ್ರಗಳು ಅಭಿವೃದ್ಧಿ ಕಂಡಿಲ್ಲ. ಇದುವರೆಗೆ ಇದ್ದ ರಾಜಕಾರಣಿಗಳು ಜಿಲ್ಲೆಯ ಅಭಿವೃದ್ಧಿಯಲ್ಲಿ ಗಮನ ಹರಿಸದ ಕಾರಣ ನಾನು ರಾಜಕೀಯಕ್ಕೆ ಬರಬೇಕಾಯಿತು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಅರಣ್ಯ, ಪೊಲೀಸ್, ಕಂದಾಯ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆಯ ಆಶೀರ್ವಾದ ಬೇಕಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಶಂಕರ್, ಕಮರವಾಡಿ ಶಂಕರಪ್ಪ, ಜಯಮೇರಿ, ಟ್ರಸ್ಟ್ ಅಧ್ಯಕ್ಷ ಪ್ರಕಾಶ್, ಟ್ರಸ್ಟ್ ಕಾರ್ಯದರ್ಶಿ ದುಂಡಪ್ಪ, ಬಸಪ್ಪನ ದೊಡ್ಡಿ ಬಸವರಾಜು, ಪ್ರಕಾಶ್, ಚಂದ್ರು, ಧರ್ಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.