ADVERTISEMENT

ಬಜೆಟ್‌ನಲ್ಲಿ ರೈಲ್ವೆ ಮಾರ್ಗ ಘೋಷಣೆ ಸಾಧ್ಯತೆ: ಸುನೀಲ್ ಬೋಸ್ ವಿಶ್ವಾಸ

ಕೊಳ್ಳೇಗಾಲಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಸಂಸದ ಸುನೀಲ್ ಬೋಸ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:36 IST
Last Updated 17 ಜುಲೈ 2024, 15:36 IST
ಕೊಳ್ಳೇಗಾಲದ ಡಾ. ಬಿಆರ್ ಅಂಬೇಡ್ಕರ್ ಪ್ರತಿಭೆಗೆ ಸಂಸದ ಸುನಿಲ್ ಬೋಸ್ ಮಾಲಾರ್ಪಣೆ ಮಾಡಿದರು
ಕೊಳ್ಳೇಗಾಲದ ಡಾ. ಬಿಆರ್ ಅಂಬೇಡ್ಕರ್ ಪ್ರತಿಭೆಗೆ ಸಂಸದ ಸುನಿಲ್ ಬೋಸ್ ಮಾಲಾರ್ಪಣೆ ಮಾಡಿದರು   

ಕೊಳ್ಳೇಗಾಲ: ಸಂಸದರಾಗಿ ಮೊದಲ ಬಾರಿಗೆ ಕೊಳ್ಳೇಗಾಲಕ್ಕೆ ಆಗಮಿಸಿದ ಸಂಸದ ಸುನೀಲ್ ಬೋಸ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಮರ್ಪಣೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದರು ಗೆದ್ದು ತಿಂಗಳಾದರೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂದು ವಿರೋಧ ಪಕ್ಷದವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಸಂಸದನಾಗಿ ಆಯ್ಕೆಯಾಗಿ ದೆಹಲಿಗೆ ಹೋಗಿ ಪ್ರಮಾಣ ವಚನ ಸ್ವೀಕರಿಸಿದೆ. ಬಳಿಕ, ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಂಡಿದ್ದೆ. ಆದರೆ, ನನ್ನ ವಿರುದ್ಧ ಅಪಪ್ರಚಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಕ್ಷೇತ್ರ ಅಭಿವೃದ್ಧಿ ಬಗ್ಗೆ ಸಂಬಂಧಪಟ್ಟ ಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಬೆಂಗಳೂರು, ಕನಕಪುರ, ಕೊಳ್ಳೇಗಾಲ, ಚಾಮರಾಜನಗರ ರೈಲ್ವೆ ಮಾರ್ಗದ ಸರ್ವೆ ನಡೆಸಿರುವ ಬಗ್ಗೆ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಜೊತೆ ಚರ್ಚಿಸಿದ್ದೇನೆ. ಬಜೆಟ್‌ನಲ್ಲಿ ಈ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತದಾರರ ಋಣ ತೀರಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಆರ್.ನರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಮುಖಂಡ ರಮೇಶ್, ಚಿಕ್ಕ ಮಾಳಿಗೆ, ಸಿದ್ಧಾರ್ಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.