ಗುಂಡ್ಲುಪೇಟೆ: ಬೃಹತ್ ಕೃಷಿ ಹೊಂಡದಲ್ಲಿ ಮಳೆ ನೀರು ಸಂಗ್ರಹಿಸಿಕುಸಿದು ಹೋಗಿದ್ದ ಅಂತರ್ಜಲ ಮಟ್ಟ ಹೆಚ್ಚಿಸಿ,ವರ್ಷ ಪೂರ್ತಿ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ತಾಲ್ಲೂಕಿನ ವೀರನಪುರ ಗ್ರಾಮದ ಪ್ರಸನ್ನ ಅವರ ಯಶಸ್ಸಿನ ಕಥೆ ಇದು.
ಪ್ರಸನ್ನ ಅವರಿಗೆ ಜಮೀನಿನ ಕೊರತೆ ಇರಲಿಲ್ಲ. 20 ಎಕರೆ ಭೂಮಿ ಇದೆ. ಆದರೆ, ಕೃಷಿಗೆ ನೀರಿನ ಕೊರತೆ ಇತ್ತು. ಈಗ ಅದು ನೀಗಿದೆ. ತಮ್ಮ ಜಮೀನಿನಲ್ಲಿ ಬಾಳೆ, ಅರಿಸಿನ, ಬೀಟ್‌ರೂಟ್, ಬೀನ್ಸ್, ಟೊಮೆಟೊ, ಸೌತೆಕಾಯಿ ಸೇರಿದಂತೆ ವಿವಿಧ ತರಕಾರಿ ಹಾಗೂ ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ.
ಕಾಡುತ್ತಿದ್ದ ನೀರಿನ ಕೊರತೆ: ಸಾಕಷ್ಟು ಜಮೀನಿದ್ದರೂ, ಬೇಸಿಗೆಯಲ್ಲಿ ಕೃಷಿ ಮಾಡಲು ಪ್ರಸನ್ನ ಅವರಿಗೆ ನೀರಿನ ಕೊರತೆ ಎದುರಾಗುತ್ತಿತ್ತು. ಮಳೆಗಾಲದಲ್ಲಿ ಜಮೀನಿನ ಮೂಲಕ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು. ಬೇಸಿಗೆಯಲ್ಲಿ ನೀರಿಲ್ಲದೆ ಕೊಳವೆಬಾವಿಗಳೆಲ್ಲ ಬತ್ತಿ ಹೋಗಿ ಕೃಷಿ ಮಾಡುವುದಕ್ಕೆ ಬಾಡಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುವ ಪರಿಸ್ಥಿತಿ ಇತ್ತು.ಇದರಿಂದಾಗಿ ಪ್ರಸನ್ನ ನಷ್ಟವನ್ನೂ ಅನುಭವಿಸುತ್ತಿದ್ದರು.
ನೆರವಾದ ಹೊಂಡ: ಮಳೆ ನೀರು ಸಂಗ್ರಹದ ಬಗ್ಗೆ ತಿಳಿದುಕೊಂಡ ಅವರು, ತಮ್ಮ ಜಮೀನನ್ನು ಜಲಸಮೃದ್ಧ ಮಾಡಲು ಪಣತೊಟ್ಟರು.2017ರಲ್ಲಿ ಜಮೀನಿನಲ್ಲಿ 1 ಎಕರೆ ಜಾಗದಲ್ಲಿ ಕೆರೆ ನಿರ್ಮಾಣ ಮಾಡಿ ಮಳೆ ನೀರನ್ನು ಶೇಖರಣೆ ಮಾಡಿದರು. ಕೆರೆ ತುಂಬಿದ ಪರಿಣಾಮ ಜಮೀನಿನ ಕೊಳವೆಬಾವಿಗಳಲ್ಲಿ ಉತ್ತಮವಾಗಿ ನೀರು ಬರಲಾರಂಬಿಸಿತು. ಜೊತೆಗೆ, ಸುತ್ತಮುತ್ತಲ ರೈತರ ಜಮೀನಿನಲ್ಲಿರುವ ಕೊಳವೆಬಾವಿಗಳಲ್ಲಿಯೂ ನೀರು ವರ್ಷ ಪೂರ್ತಿ ಲಭಿಸುವಂತೆ ಆಯಿತು.
‘ಕೆರೆ ನಿರ್ಮಿಸುವುದಕ್ಕೂ ಮೊದಲು ಅರಿಸಿನ ಬೆಳೆಗೆ ಟ್ಯಾಂಕರ್ ನೀರು ಹಾಕಲು ₹ 15 ಸಾವಿರದಿಂದ ₹ 20 ಸಾವಿರದವರೆಗೆ ಹಣ ವ್ಯಯ ಮಾಡುತ್ತಿದ್ದೆ. ಇದೀಗ ಎಲ್ಲ ಕೊಳವೆಬಾವಿಗಳಲ್ಲೂ ಉತ್ತಮ ನೀರಿದೆ. ಒಮ್ಮೆ ಕೆರೆ ತುಂಬಿದರೆ ಮೂರು-ನಾಲ್ಕು ತಿಂಗಳು ನೀರಿಗೆ ಅಭಾವ ಇರುವುದಿಲ್ಲ. ಬೇಸಿಗೆಯಲ್ಲೂ ಕೊಳವೆಬಾವಿಗಳಲ್ಲಿ ಉತ್ತಮವಾಗಿ ನೀರು ಸಿಗುತ್ತಿದೆ’ ಎಂದು ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಳೆಗಾಲದ ಸಂದರ್ಭದಲ್ಲಿ ಐದಾರು ಬಾರಿಯಾದರೂ ದೊಡ್ಡ ಮಳೆಯಾಗಿ ಹೆಚ್ಚು ನೀರು ವ್ಯರ್ಥವಾಗುತ್ತದೆ. ನಮ್ಮ ಜಮೀನಿನಲ್ಲೇ ಸಣ್ಣದಾಗಿ ಅವಶ್ಯಕತೆ ಇರುವಷ್ಟು ಇಂಗುಗುಂಡಿಗಳನ್ನು ನಿರ್ಮಾಣ ಮಾಡಿ ಮಳೆ ನೀರನ್ನು ಸಂಗ್ರಹಿಸಿದರೆ, ಬೇಸಿಗೆಯಲ್ಲಿ ಕೊಳವೆಬಾವಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ’ ಎಂದು ಅವರು ವಿವರಿಸಿದರು.
‘ಬೆಳೆಗೆ ಬೆಂಬಲ ಬೆಲೆ ಇಲ್ಲ’
‘ರೈತರು ಕಷ್ಟಪಟ್ಟು ಕೃಷಿ ಮಾಡುತ್ತಾರೆ. ಆದರೆ, ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಬೆಳೆಗೆ ಉತ್ತಮ ಬೆಲೆ ಸಿಗುವುದು ದುಸ್ತರವಾಗಿದ್ದು, ಅನೇಕ ಸಂದರ್ಭದಲ್ಲಿ ಮಧ್ಯವರ್ತಿಗಳುಲಾಭ ಪಡೆಯುತ್ತಿದ್ದಾರೆ’ ಎಂದು ಪ್ರಸನ್ನ ಬೇಸರ ವ್ಯಕ್ತಪಡಿಸಿದರು.
‘ಕೃಷಿಗೆ ಹಾಕಿದ ಬಂಡವಾಳವನ್ನೂ ರೈತರಿಗೆ ಪಡೆಯಲಾಗುತ್ತಿಲ್ಲ. ಇದರಿಂದ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ತರಕಾರಿ ಬೆಳೆಯುವ ರೈತರು, ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಜಮೀನಿನಲ್ಲೇ ಕೊಳೆಯಲು ಬಿಡುತ್ತಿದ್ದಾರೆ. ಸರ್ಕಾರ ರೈತರಿಗೆ ತರಕಾರಿ ಸೇರಿದಂತೆ ಇನ್ನಿತರ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಮದ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಪ್ರಕೃತಿ ವಿಕೋಪದಿಂದ, ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದ ಸಂದರ್ಭದಲ್ಲಿ ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.