ADVERTISEMENT

ರಾಮಾಪುರ: ತಾಂಡವವಾಡುತ್ತಿದೆ ಅನೈರ್ಮಲ್ಯ

ಮನವಿ ಮಾಡಿದರೂ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬಿ.ಬಸವರಾಜು
Published 24 ಡಿಸೆಂಬರ್ 2019, 10:40 IST
Last Updated 24 ಡಿಸೆಂಬರ್ 2019, 10:40 IST
ರಸ್ತೆ ಬದಿಯಲ್ಲಿ ಕಸದ ರಾಶಿ, ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ
ರಸ್ತೆ ಬದಿಯಲ್ಲಿ ಕಸದ ರಾಶಿ, ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ   

ಹನೂರು: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ರಾಮಾಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಸಾರ್ವಜನಿಕರು ಸಂಚರಿಸಲು ಪ್ರಯಾಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರದಲ್ಲಿ ಸುತ್ತಾಡಿದರೆ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ರಸ್ತೆ ಬದಿಯಲ್ಲಿ ನಿಂತಿರುವ ಕೊಳಚೆ ನೀರು, ರಸ್ತೆ ಮಧ್ಯದಲ್ಲೇ ಮಲಗಿರುವ ಬಿಡಾಡಿ ದನಗಳು, ಚರಂಡಿಯಲ್ಲಿ ಮಲಗಿರುವ ಹಂದಿಗಳು ಕಾಣಸಿಗುತ್ತವೆ. ಜನರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯೂ ಅವರನ್ನು ಕಾಡುತ್ತಿದೆ.

ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ರಾಮಾಪುರ ಅತ್ಯಂತ ದೊಡ್ಡ ಹೋಬಳಿ. ಗ್ರಾಮದಲ್ಲಿ 4,000 ಕುಟುಂಬಗಳಿದ್ದು, ಅಂದಾಜು 12 ಸಾವಿರ ಜನಸಂಖ್ಯೆ ಇದೆ. ಈ ಬಾರಿ ಬಿದ್ದ ಉತ್ತಮ ಮಳೆಗೆ ರಸ್ತೆಯಲ್ಲೆಲ್ಲಾ ಗುಂಡಿಗಳು ಉಂಟಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ADVERTISEMENT

ಕಸವೋ ಕಸ: ಸ್ವಚ್ಛತೆ ಎಂಬುದು ಇಲ್ಲಿ ಮಾಯವಾಗಿದೆ. ಹೆಜ್ಜೆ ಹೆಜ್ಜೆಗೂ ಕಸದ ರಾಶಿ ಕಾಣುತ್ತದೆ. ನಾಲ್‌ರೋಡ್‌ ರಸ್ತೆ, ಕೌದಳ್ಳಿ ರಸ್ತೆ, ದಿನ್ನಳ್ಳಿ ಮತ್ತು ಹನೂರಿಗೆ ತೆರಳುವರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಕಸದ ರಾಶಿಗಳೇ ಇವೆ.ಜನರು ಕೂಡ ಎಲ್ಲೆಂದರೆ ಕಸವನ್ನು ಎಸೆಯುತ್ತಿರುವುದರಿಂದ ಬಡಾವಣೆಗಳು ಗಬ್ಬೆದ್ದು ನಾರುತ್ತಿವೆ.

ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಗಳಿಂದಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಪೊಲೀಸ್ ವಸತಿ ಗೃಹದ ಹಿಂಭಾಗದ ಚರಂಡಿಯಲ್ಲಿ ಕಸಕಡ್ಡಿಯೆಲ್ಲಾ ಕೊಳೆತು ದುರ್ನಾತ ಬೀರುತ್ತಿದೆ.

‘ಹದಗೆಟ್ಟ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗಳು.

ಹಂದಿ, ಬಿಡಾಡಿ ದನಗಳ ಉಪಟಳ: ಹಂದಿ, ಹಸುಗಳು ಸೇರಿದಂತೆ ಜಾನುವಾರ ಉಪಟಳವೂ ಇಲ್ಲಿನ ಜನರನ್ನು ಕಾಡುತ್ತಿದೆ. ಹಂದಿಗಳನ್ನು ಸಾಕುತ್ತಿರುವವರು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೊರಗಡೆ ಬಿಡುತ್ತಿರುವುದರಿಂದ ಅವು ಚರಂಡಿಗಳನ್ನೇ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ. ಕಸದ ರಾಶಿಗಳಲ್ಲೂ ಆಹಾರ ಹುಡುಕುತ್ತಾ ಬಿದ್ದಿರುತ್ತವೆ.

ಬಿಡಾಡಿ ದನ ಕರುಗಳು ರಸ್ತೆ ಮಧ್ಯೆಯೇ ಮಲಗಿರುತ್ತವೆ. ಇದರಿಂದಾಗಿ ವಾಹನಗಳ ಹಾಗೂ ಜನರ ಓಡಾಟಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.

‘₹20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ’

ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ಮಹದೇವಸ್ವಾಮಿ ಅವರು, ‘ತ್ಯಾಜ್ಯ ವಿಲೇವಾರಿ ನಿರ್ಮಾಣಕ್ಕಾಗಿ 1 ಎಕರೆ 6 ಗುಂಟೆ ಜಮೀನನ್ನು ಕಂದಾಯ ಇಲಾಖೆ ಗುರುತಿಸಿದೆ. ₹20 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಾನು ಓಡಿಸಲೇ?: ಹಂದಿಗಳು ಹಾಗೂ ಬಿಡಾಡಿ ದನಗಳ ಬಗ್ಗೆ ಕೇಳಿದ್ದಕ್ಕೆ, ‘ಅವುಗಳು ರಸ್ತೆಯಲ್ಲಿ ಅಡ್ಡಾಡಿದರೆ ನಾನೇನು ಮಾಡುವುದಕ್ಕೆ ಆಗುತ್ತದೆ? ನಾನೊಬ್ಬ ಅಧಿಕಾರಿಯಾಗಿ ಹೋಗಿ ಹಸುಗಳನ್ನು ಓಡಿಸಲೇ’ ಎಂದು ಪ್ರಶ್ನಿಸಿದರು.

ಜನರಲ್ಲಿ ಮೂಡದ ಅರಿವು: ಗ್ರಾಮದ ಕೇಂದ್ರದಲ್ಲಿ ವಾಸಿಸುತ್ತಿರುವವರು ಕಸ ವಿಲೇವಾರಿ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿಲ್ಲ. ನಿವಾಸಿಗಳು, ಅಂಗಡಿ ಮಾಲೀಕರು ಕಸವನ್ನು ಎಲ್ಲೆಂದಿರಲ್ಲಿ ಕಸವನ್ನು ಎಸೆಯುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಿದೆ.

‘ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಸಹಕಾರ ಬಹುಮುಖ್ಯ. ಅವರು ಎಲ್ಲೆಂದರಲ್ಲಿ ಎಸೆಯುವುದನ್ನು ಮೊದಲು ಬಿಡಬೇಕು. ಇದರಿಂದ ಅರ್ಧದಷ್ಟು ಸಮಸ್ಯೆ ಬಗೆ ಹರಿಯುತ್ತದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.