ADVERTISEMENT

ಹನೂರು: ‌ನೆಟ್‌ವರ್ಕ್‌ ಸಮಸ್ಯೆ, ಪಡಿತರ ಪಡೆಯಲು ಪಡಿಪಾಟಲು

ಪ್ರತಿ ತಿಂಗಳು ಗ್ರಾಮೀಣ ಭಾಗದ ಜನರ ಗೋಳು, ಪಡಿತರಕ್ಕಾಗಿ ಕಳೆದು ಕೊಳ್ಳಬೇಕು ಕೂಲಿ

ಬಿ.ಬಸವರಾಜು
Published 25 ಏಪ್ರಿಲ್ 2021, 19:30 IST
Last Updated 25 ಏಪ್ರಿಲ್ 2021, 19:30 IST
ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಸಿದ್ದಪ್ಪಾಜಿ ನ್ಯಾಯಬೆಲೆ ಅಂಗಡಿ ಮುಂಭಾಗ ಭಾನುವಾರ ಪಡಿತರ ಖರೀದಿಸಲು ಮುಗಿಬಿದ್ದಿರುವ ಜನ
ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಸಿದ್ದಪ್ಪಾಜಿ ನ್ಯಾಯಬೆಲೆ ಅಂಗಡಿ ಮುಂಭಾಗ ಭಾನುವಾರ ಪಡಿತರ ಖರೀದಿಸಲು ಮುಗಿಬಿದ್ದಿರುವ ಜನ   

ಹನೂರು: ನೆಟ್‌ವರ್ಕ್‌ ಸಮಸ್ಯೆಯಿಂದಾಗಿಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಗ್ರಾಮೀಣ ಜನರು ಇಡೀ ದಿನ ನ್ಯಾಯಬೆಲೆ ಅಂಗಡಿ ಮುಂದೆ ಕಾಯುವಂತಾಗಿದೆ.

ಪ್ರತಿ ತಿಂಗಳುಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.ಪಡಿತರ ಪಡೆಯಲು ಬೆರಳಚ್ಚು ನೀಡಬೇಕು ಎಂಬ ನಿಯಮ ಮಾಡಿದ ನಂತರ ಜನರಿಗೆ ಪ್ರತಿ ತಿಂಗಳು ಒಂದೆರಡು ಕೂಲಿ ಕೆಲಸ ಕೈತಪ್ಪುತ್ತದೆ. ಕೆಲಸ ಬಿಟ್ಟು ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕು. ಒಂದು ವೇಳೆ ಆ ದಿನ ನೆಟ್ ವರ್ಕ್ ಸಮಸ್ಯೆಯಾದರೆ ಸಾಲಿನಲ್ಲಿ ನಿಲ್ಲುವುದು ಎರಡನೇ ದಿನವೂ ಮುಂದುವರೆಯುತ್ತದೆ.

‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಈ ಸಮಸ್ಯೆಯಿಂದ ಸಾರ್ವಜನಿಕರು ದಿನನಿತ್ಯ ಪರದಾಡುವಂತಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಾದರೂ ನಮಗೆ ಸ್ಪಷ್ಟ ಮಾಹಿತಿ ನೀಡುವುದಿಲ್ಲ. ಇಂದು ಪಡಿತರ ನೀಡುತ್ತೇವೆ ಎನ್ನುತ್ತಾರೆ. ನೆಟ್ ವರ್ಕ್ ಸಮಸ್ಯೆಯಿದೆ ನಾಳೆ ಅಥವಾ ನಾಡಿದ್ದು ಬನ್ನಿ ಎಂದು ಹೇಳುತ್ತಾರೆ. ನಾವು ಸರ್ಕಾರ ನೀಡುವ ಉಚಿತ ಪಡಿತರ ಪಡೆಯಲು ಮೂರುದಿನ ಕೂಲಿ ಕೆಲಸ ಬಿಟ್ಟು ನಿಲ್ಲಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮೀಣ ಭಾಗದ ಜನತೆ.

ADVERTISEMENT

‘ಕೋವಿಡ್ ಎರಡನೇ ಅಲೆ ಇರುವುದರಿಂದ ಜನರಿಗೆ ಆಹಾರ ಸಮಸ್ಯೆ ಉಂಟಾಗಬಾರದು. ಆದಷ್ಟು ಜನಸಾಮಾನ್ಯರಿಗೆ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಕಡ್ಡಾಯವಾಗಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಅದರ ಆಧಾರದ ಮೇಲೆ ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಆದರೆ, ನೆಟ್ ವರ್ಕ್ ಸಮಸ್ಯೆಯಿಂದಾಗಿ ಈ ತೊಂದರೆ ಎದುರಾಗಿದೆ. ಜಿಲ್ಲೆಯಾದ್ಯಂತ ಈ ಸಮಸ್ಯೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು.

ಸುರಕ್ಷಿತ ಅಂತರ ಮಾಯ

ಒಂದೆಡೆ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಮುಂದೆ ಸಾರ್ವಜನಿಕರು ಗುಂಪು ಗುಂಪಾಗಿ ನಿಲ್ಲುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಕೋವಿಡ್ ಹರಡುವ ಭಯದ ವಾತಾವರಣವೂ ನಿರ್ಮಾಣವಾಗಿದೆ. ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ ಜನರು ಅಂತರ ಕಾಪಾಡಿಕೊಳ್ಳುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಸೂಚಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದೆ. ಆದರೆ ಗ್ರಾಮಗಳಲ್ಲಿ ಇಂದಿಗೂ ಜನರು ಯಾವುದೇ ಅಂತರವಿಲ್ಲದೇ ಪಡಿತರಕ್ಕಾಗಿ ನಿಲ್ಲುತ್ತಾರೆ.

‘ಪಡಿತರ ಪಡೆಯಲು ಬೆರಳಚ್ಚು ಮಾಡುವಾಗ ನೆಟ್‌ವರ್ಕ್ ಸಮಸ್ಯೆ ಇರುವ ಬಗ್ಗೆ ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದ್ದೇನೆ. ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಜನರು ಗುಂಪು ಸೇರದಂತೆ ಆಯಾ ಅಂಗಡಿ ಮಾಲೀಕರಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಮತ್ತೊಮ್ಮೆ ಮಾಲೀಕರಿಗೆ ಸೂಚನೆ ನೀಡಲಾಗುವುದು’ ಎಂದು ಹನೂರು ತಾಲ್ಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಇನ್ಸ್ಪೆಕ್ಟರ್ ಚಂದ್ರನಾಯ್ಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.