ADVERTISEMENT

ಚಾಮರಾಜನಗರ: ಶಾಲೆಗಳಲ್ಲಿ ಮಕ್ಕಳಿಗೆ ಅಕ್ಕಿ, ಬೇಳೆ ವಿತರಣೆ

ದಿಗ್ಬಂಧನ: ಮಧ್ಯಾಹ್ನದ ಬಿಸಿಯೂಟದ ಬದಲಿಗೆ 21 ದಿನಗಳಿಗೆ ಆಗುವಷ್ಟು ಧಾನ್ಯ

ಸೂರ್ಯನಾರಾಯಣ ವಿ
Published 29 ಮಾರ್ಚ್ 2020, 19:45 IST
Last Updated 29 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೊರೊನಾ ವೈರಸ್‌ ಭೀತಿಯಿಂದ ಅವಧಿಗೆ ಮುನ್ನ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದ್ದರೂ, ಏಪ್ರಿಲ್‌ 10ರವರೆಗಿನ ಅವಧಿವರೆಗಿನ ಲೆಕ್ಕಾಚಾರದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಅಕ್ಕಿ ಮತ್ತು ಬೇಳೆಯನ್ನು ವಿತರಿಸುತ್ತಿದೆ.

ಮಾರ್ಚ್‌ 14ರಿಂದ ಏಪ್ರಿಲ್‌ 10 ನಡುವಿನ 21 ದಿನಗಳ (ರಜಾ ದಿನಗಳನ್ನು ಬಿಟ್ಟು) ಅವಧಿಗಾಗಿ ಶಾಲೆಯಲ್ಲಿ ಪೂರೈಸಬೇಕಾಗಿದ್ದ ಬಿಸಿಯೂಟದ ಬದಲಿಗೆ ನಿಗದಿತ ಪ್ರಮಾಣದ ಅಕ್ಕಿ ಮತ್ತು ಬೇಳೆಯನ್ನು ಮಕ್ಕಳಿಗೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಅದರಂತೆ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಒಂದರಿಂದ ಐದನೇ ತರಗತಿ ಮಕ್ಕಳಿಗೆ ದಿನವೊಂದಕ್ಕೆ 100 ಗ್ರಾಂ ಅಕ್ಕಿ ಮತ್ತು 50 ಗ್ರಾಂ ಬೇಳೆ, ಆರನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಪ್ರತಿ ದಿನ 150 ಗ್ರಾಂ ಅಕ್ಕಿ, 75 ಗ್ರಾಂ ಬೇಳೆ ಅಳತೆಯಲ್ಲಿ ವಿತರಿಸಲಾಗುತ್ತಿದೆ. 21 ದಿನಗಳ ಲೆಕ್ಕಹಾಕಿದರೆ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 2 ಕೆ.ಜಿ 100 ಗ್ರಾಂ ಅಕ್ಕಿ, 1 ಕೆ.ಜಿ 50 ಗ್ರಾಂ ಬೇಳೆ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ 3 ಕೆ.ಜಿ 150 ಗ್ರಾಂ ಅಕ್ಕಿ ಹಾಗೂ ಒಂದೂವರೆ ಕೆ.ಜಿ ಬೇಳೆ ನೀಡಬೇಕಾಗುತ್ತದೆ.

ADVERTISEMENT

‘ಶಾಲೆಯಲ್ಲಿ ಐದನೇ ತರಗತಿವರೆಗಿನ ಪ್ರತಿ ಮಕ್ಕಳಿಗೆ 100 ಗ್ರಾಂ ಅಕ್ಕಿ ಹಾಗೂ 10 ಗ್ರಾಂ ಬೇಳೆ ಅದೇ ರೀತಿ ಆರರಿಂದ 10ನೇ ತರಗತಿವರೆಗಿನ ಮಕ್ಕಳಿಗೆ 150 ಗ್ರಾಂ ಅಕ್ಕಿ ಹಾಗೂ 30 ಗ್ರಾಂ ಬೇಳೆ ಅಳತೆಯಲ್ಲಿ ಬಿಸಿಯೂಟ ಸಿದ್ಧಪಡಿಸಬೇಕು ಎಂಬುದು ನಿಯಮ. ಆದರೆ, ಈಗ ತರಕಾರಿಯ ಬದಲಾಗಿ ಮಕ್ಕಳಿಗೆ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಬೇಳೆ ನೀಡಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದಾಸ್ತಾನು ಇದೆ: ‘ಈಗಾಗಲೇ ನಮ್ಮಲ್ಲಿ ಬಿಸಿಯೂಟಕ್ಕೆ ಸಿದ್ಧಪಡಿಸಲು ಬೇಕಾದಷ್ಟು ದಾಸ್ತಾನು ಮಾಡಿಟ್ಟ ಅಕ್ಕಿ ಮತ್ತು ಬೇಳೆ ಇದೆ. ಅದನ್ನೇ ಮಕ್ಕಳಿಗೆ ವಿತರಿಸಲಾಗುತ್ತಿದೆ. ಬಹುಶಃ ಎಲ್ಲ ಮಕ್ಕಳಿಗೂ ಸಾಕು. ಒಂದು ವೇಳೆ ಕೊರತೆ ಉಂಟಾದರೆ, ಇಲಾಖೆಗೆ ಮನವಿ ಮಾಡಿ ಅಗತ್ಯವಿರುವಷ್ಟು ತರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಮಕ್ಕಳು ಅಥವಾ ಪೋಷಕರು ಯಾರು ಬಂದರೂ ಅಕ್ಕಿ ಮತ್ತು ಬೇಳೆಯನ್ನು ಶಾಲೆಯಲ್ಲಿ ನೀಡಲಾಗುತ್ತದೆ. ಈ ಜವಾಬ್ದಾರಿಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ. ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಸಹ ಶಿಕ್ಷಕರ ನೆರವನ್ನು ಪಡೆಯಲೂ ಸೂಚಿಸಲಾಗಿದೆ’ ಎಂದು ಗುರುಲಿಂಗಯ್ಯ ಹೇಳಿದರು.

ಶಾಲಾಭಿವೃದ್ಧಿ ಸಮಿತಿಯ (ಎಸ್‌ಡಿಎಂಸಿ) ಸಮ್ಮುಖದಲ್ಲಿ ಅಕ್ಕಿ ಮತ್ತು ಬೇಳೆ ವಿತರಿಸಬೇಕು. ನಂತರ ವಿದ್ಯಾರ್ಥಿ/ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷ/ಸದಸ್ಯರ ಸಹಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂಬ ಸೂಚನೆಯನ್ನೂ ಅಧಿಕಾರಿಗಳು ಮುಖ್ಯ ಶಿಕ್ಷಕರಿಗೆ ನೀಡಿದ್ದಾರೆ.

***

250ಕ್ಕೂ ಹೆಚ್ಚು ಶಾಲೆಗಳಲ್ಲಿ ಅಕ್ಕಿ ಮತ್ತು ಬೇಳೆಯನ್ನು ಈಗಾಗಲೇ ವಿತರಿಸಲಾಗಿದೆ. ಶೀಘ್ರದಲ್ಲಿ ಎಲ್ಲ ಶಾಲೆಗಳಲ್ಲಿ ವಿತರಿಸಲಾಗುವುದು

-ಎಸ್‌.ಟಿ.ಜವರೇಗೌಡ, ಡಿಡಿಪಿಐ

ಅಂಕಿ ಅಂಶ

926 - ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು

81,240 - ಬಿಸಿಯೂಟ ಫಲಾನುಭವಿ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.