
ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಭತ್ತ, ರಾಗಿ, ಹುರುಳಿ ಕಟಾವು ಹಾಗು ಒಕ್ಕಣೆ ಪ್ರಕ್ರಿಯೆ ಬಿರುಸಾಗಿದ್ದು, ಕೆಲವು ರೈತರು ಬೆಳೆಗಳನ್ನು ಕಣದಲ್ಲಿ ಒಕ್ಕಣೆ ಮಾಡುವ ಬದಲಾಗಿ ಹೆದ್ದಾರಿಗೆ ತಂದು ಸುರಿಯುತ್ತಿರುವ ಪರಿಣಾಮ ವಾಹನ ಸವಾರರ ಜೀವಕ್ಕೆ ಕುತ್ತು ಎದುರಾಗಿದೆ. ಅಲ್ಲಲ್ಲಿ ಅಪಘಾತಗಳು ಕೂಡ ಸಂಭವಿಸುತ್ತಿವೆ.
ಹಿಂದೆಲ್ಲ ರೈತರು ಬೆಳೆದ ಬೆಳೆಯನ್ನು ಊರಿನೊಳಗಿರುವ ವಿಶಾಲವಾದ ಕಣಗಳಲ್ಲಿ ಹಾಗೂ ಜಮೀನಿನಲ್ಲಿಯೇ ಸಮತಟ್ಟಾದ ಜಾಗದಲ್ಲಿ ಒಕ್ಕಣೆ ಮಾಡಿ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದರು. ಆಧುನಿಕ ಕಾಲಘಟ್ಟದಲ್ಲಿ ಕಣಗಳು ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಕೆಲವು ರೈತರು ಒಕ್ಕಣೆಗೆ ಅಪಾಯಕಾರಿ ವಿಧಾನದ ಮೊರೆ ಹೋಗಿದ್ದಾರೆ.
ಹೆಚ್ಚು ವಾಹನಗಳು ಸಂಚಾರ ಮಾಡುವ ರಸ್ತೆಗಳನ್ನೇ ಆಯ್ಕೆ ಮಾಡಿಕೊಂಡು ದವಸ– ಧಾನ್ಯಗಳನ್ನು ತಂದು ಸುರಿಯುತ್ತಿದ್ದಾರೆ. ಡಾಂಬಾರ್ ಹಾಕಿರುವ ಕಡೆಗಳಲ್ಲಿ ಪೂರ್ತಿಯಾಗಿ ಬೆಳೆಗಳನ್ನು ಹರಡುತ್ತಿರುವುದರಿಂದ ಸವಾರರು ಅನಿವಾರ್ಯವಾಗಿ ಬೆಳೆಗಳ ಮೇಲೆಯೇ ಸಂಚಾರ ಮಾಡಬೇಕಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ.
ಕಾರು, ಟೆಂಪೊ, ಲಾರಿ ಸಹಿತ ಭಾರಿ ಗಾತ್ರ ವಾಹನಗಳು ರಸ್ತೆಯಲ್ಲಿ ವೇಗವಾಗಿ ಸಾಗುವಾಗ ಏಕಾಏಕಿ ಅಡ್ಡಲಾಗಿ ಸುರಿದಿರುವ ದವಸ ಧಾನ್ಯಗಳನ್ನು ಕಂಡು ಬೆಚ್ಚಿಬೀಳುತ್ತಿದ್ದಾರೆ. ಹಲವು ಸಲ ಸವಾರರು ವಾಹನಗಳನ್ನು ನಿಯಂತ್ರಣ ಮಾಡಲಾಗದೆ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿಸುತ್ತಿದ್ದಾರೆ.
ಬೈಕ್ ಸವಾರರ ಪಾಲಿಗಂತೂ ರಸ್ತೆ ಮೇಲಿನ ಕಣಗಳು ಮೃತ್ಯುವಾಗಿ ಕಾಡುತ್ತಿವೆ. ವೇಗವಾಗಿ ನುಗ್ಗುವ ಬೈಕ್‌ಗಳ ಚಕ್ರಗಳು ಧಾನ್ಯಗಳ ಮೇಲೆ ಚಲಿಸುತ್ತಿದ್ದಂತೆ ಸ್ಕಿಡ್ ಆಗಿ ಅಪಘಾತಕ್ಕೀಡಾಗುತ್ತಿವೆ. ನಿಪುಣ ಚಾಲಕರೂ ಗಂಭೀರವಾಗಿ ಪೆಟ್ಟುಮಾಡಿಕೊಳ್ಳುತ್ತಿದ್ದಾರೆ. ಕೆಲವು ಸವಾರರು ವಾಹನಗಳನ್ನು ಧಾನ್ಯಗಳ ಮೇಲೆ ಓಡಿಸುವುದನ್ನು ತಪ್ಪಿಸಲು ಹೋಗಿ ರಸ್ತೆಯ ಅಂಚಿನಲ್ಲಿ ಸಾಗುವಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ.
ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುವಾಗಲಂತೂ ಅಪಘಾತಗಳು ಸರ್ವೇ ಸಾಮಾನ್ಯವಾಗಿವೆ. ಹೆಚ್ಚಾಗಿ ಬೈಕ್ ಸವಾರರು ನಿಯಂತ್ರಣ ತಪ್ಪಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ಸವಾರರು ದೂರುತ್ತಾರೆ.
‘ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುವ ಅರಿವಿದ್ದರೂ ಕೆಲವು ರೈತರು ಜಾಣ ತೆಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಶ್ನಿಸಿದರೆ ರಸ್ತೆ ಸರ್ಕಾರದ ಜಾಗವಾಗಿದ್ದು, ಒಕ್ಕಣೆ ಮಾಡಲು ಯಾರ ಅನುಮತಿ ಪಡೆಯುವ ಅಗತ್ಯವಿಲ್ಲ; ನಿಮ್ಮ ಸ್ವಂತದ್ದಲ್ಲ ಎಂದು ಜಗಳಕ್ಕೆ ಮುಂದಾಗುತ್ತಾರೆ’ ಎಂದು ಬೈಕ್ ಸವಾರ ಮುರುಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಕಾಣದ ರೀತಿಯಲ್ಲಿ ಒಕ್ಕಣೆ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಒಕ್ಕಣೆ ಮಾಡುವಾಗ ಏಳುವ ದೂಳಿನಿಂದಾಗಿ ಬೈಕ್ ಸವಾರರಿಗೆ ಸಮಸ್ಯೆಯಾಗುತ್ತಿದೆ. ದೂಳಿನ ಕಣಗಳು ಕಣ್ಣಿಗೆ ಹೋಗಿ ವಾಹನಗಳು ನಿಯಂತ್ರಣ ಕಳೆದುಕೊಳ್ಳುತ್ತಿವೆ.
ಒಕ್ಕಣೆಯ ಜಾಗದಲ್ಲಿ ಗುಂಡಿಗಳಿದ್ದರೆ, ರಸ್ತೆ ಉಬ್ಬುಗಳಿದ್ದರೆ ವಾಹನಗಳ ಚಕ್ರಗಳು ಇಳಿದು ಬೆನ್ನಿಗೆ ಗಂಭೀರ ಪೆಟ್ಟು ಬೀಳುತ್ತಿದೆ. ಬೈಕ್ ಸವಾರರು ಪ್ರಯಾಸದಿಂದ ವಾಹನ ಓಡಿಸಬೇಕಾಗಿದೆ. ಕಳೆದ ವರ್ಷ ಎರಡು ಕಾರುಗಳು ಅಪಘಾತಕ್ಕೀಡಾಗಿ ಸುಟ್ಟುಹೋಗಿದ್ದವು.
ಜ.3ರಿಂದ 7ರವರೆಗೆ ತಾಲ್ಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ನಡೆಯುತ್ತಿದ್ದು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯ ಭಕ್ತರು ಹೆಚ್ಚಾಗಿ ಬೈಕ್‌ನಲ್ಲಿ ಬಂದರೆ, ಹೊರ ಜಿಲ್ಲೆಗಳಿಂದ ಕಾರುಗಳಲ್ಲಿ ಬರುತ್ತಾರೆ. ಹೀಗೆ ಬರುವ ಭಕ್ತರಿಗೆ ರಸ್ತೆ ಮೇಲೆ ಹಾಕಿರುವ ಕಣಗಳಿಂದ ತೊಂದರೆಯಾಗುತ್ತಿದೆ.
ತಾಲ್ಲೂಕಿನ ಮತ್ತಿಪುರ, ಇಕ್ಕಡಹಳ್ಳಿ, ದೊಡ್ಡಿಂದುವಾಡಿ, ಮಧುವನಹಳ್ಳಿ, ಲಕ್ಕರಸನ ಪಾಳ್ಯ, ಕೆಂಪನಪಾಳ್ಯ, ಗುಂಡೇಗಾಲ, ನರೀಪುರ, ಪಾಳ್ಯ, ಕೊತ್ತನೂರು, ತೆಳ್ಳನೂರು,ಮರಿಯಪುರ, ಸತ್ಯೇಗಾಲ, ಧನಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಮೇಲೆ ಒಕ್ಕಣೆ ಮಾಡಲಾಗುತ್ತಿದೆ. ಈ ರಸ್ತೆಗಳು ಚಿಕ್ಕಲ್ಲೂರು ಜಾತ್ರೆಗೆ ಸಂಪರ್ಕ ಕಲ್ಪಿಸುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ರೈತರಿಗೆ ತಿಳಿಹೇಳಿ ಕಣಗಳನ್ನು ತೆಗೆಸಬೇಕು ಎಂದು ಕೊತ್ತನೂರು ಗ್ರಾಮದ ದೊರೆ ಒತ್ತಾಯಿಸಿದರು.
ರೈತರು ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ರಸ್ತೆಯಲ್ಲಿ ಒಕ್ಕಣೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ.ಗುರುಶಾಂತಪ್ಪ ಬೆಳ್ಳುಂಡಗಿ ತಾಲ್ಲೂಕು ಪಂಚಾಯಿತಿ ಇಒ
ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ರೈತರು ಜನರ ಜೀವನದ ಹಿತದೃಷ್ಟಿಯಿಂದ ಕಣದಲ್ಲಿ ಒಕ್ಕಣೆ ಮಾಡಿಕೊಳ್ಳಬೇಕು.ಪ್ರಕಾಶ್ ಬೈಕ್ ಸವಾರ
ಸರ್ಕಾರ ಒಕ್ಕಣೆ ಮಾಡುವ ಸ್ಥಳವನ್ನು ನಿರ್ಮಾಣ ಮಾಡಿದರೆ ರಸ್ತೆಯಲ್ಲಿ ಒಕ್ಕಣೆ ಮಾಡುವುದಿಲ್ಲ. ಒಕ್ಕಣೆಗೆ ಸೂಕ್ತ ಜಾಗ ಇಲ್ಲದಿರುವುದು ಕೊಯಿಲಿನ ಸಂದರ್ಭ ಮಾತ್ರ ಒಕ್ಕಣೆಗೆ ರಸ್ತೆಗೆ ಹಾಕಲಾಗುತ್ತದೆ.ಕೀರ್ತಿ ರೈತ
ಜಗಳಕ್ಕೆ ಕಾರಣ
ಮೂರು ದಿನಗಳ ಹಿಂದಷ್ಟೆ ಇಕ್ಕಡಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ರಸ್ತೆಯಲ್ಲಿ ಒಕ್ಕಣೆ ಮಾಡುವಾಗ ಸವಾರ ಸರಗೂರು ಪ್ರಕಾಶ್ ಎಂಬುವರು ಒಕ್ಕಣೆಯ ಮೇಲೆ ಬೈಕ್ ಹರಿಸಿ ಬಿದ್ದು ಗಾಯಮಾಡಿಕೊಂಡಿದ್ದರು. ಈ ಸಂದರ್ಭ ಬೈಕ್ ಸವಾರ ಹಾಗೂ ರೈತನ ನಡುವೆ ಜಗಳ ಉಂಟಾಯಿತು. ಗ್ರಾಮಸ್ಥರು ಆಗಮಿಸಿ ಗೊಂದಲದ ವಾತಾವರಣ ಸರಿಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.