ADVERTISEMENT

ಡ್ರಗ್ಸ್‌ ತಪಾಸಣೆ ಸೋಗಿನಲ್ಲಿ ₹14 ಲಕ್ಷ ದರೋಡೆ?

ಅ.20ರಂದು ಪುಣಜನೂರು ಬಳಿ ಘಟನೆ, ಬೆಳ್ಳುಳ್ಳಿ ವ್ಯಾಪಾರಿಯಿಂದ ದೂರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 12:27 IST
Last Updated 24 ಅಕ್ಟೋಬರ್ 2020, 12:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಅಧಿಕಾರಿಗಳು ಎಂದು ಹೇಳಿಕೊಂಡು ಐವರು ದುಷ್ಕರ್ಮಿಗಳು ತಾಲ್ಲೂಕಿನ ಪುಣಜನೂರಿನ ಬಳಿ ವಾಹನವೊಂದನ್ನು ಅಡ್ಡಗಟ್ಟಿ ವ್ಯಾಪಾರಿಯೊಬ್ಬರಿಂದ ₹14.70 ಲಕ್ಷ ದರೋಡೆ ಮಾಡಿದ್ದಾರೆ ಎಂಬ ದೂರು ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಅ.21ರಂದು ದಾಖಲಾಗಿದೆ.

ಅ.20ರ ರಾತ್ರಿ 8.30ಕ್ಕೆ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಮಿಳುನಾಡಿನ ಬೆಳ್ಳುಳ್ಳಿ ವ್ಯಾಪಾರಿ ಶಬರಿ ಗಿರೀಶನ್‌ ಎಂಬುವವರು ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ವ್ಯಾಪಾರಿಯು ತಮ್ಮ ಬೊಲೆರೊ ಪಿಕ್‌ಅಪ್‌ನಲ್ಲಿ ಬೆಳ್ಳುಳ್ಳಿ ಖರೀದಿಗಾಗಿ ಕೊಯಮತ್ತೂರಿನಿಂದ ಮೈಸೂರಿಗೆ ಬರುತ್ತಿದ್ದರು ಎಂದು ಹೇಳಲಾಗಿದೆ. ಅ.20ರ ರಾತ್ರಿ 8.30 ಪುಣಜನೂರು ಚೆಕ್‌ಪೋಸ್ಟ್‌ನಿಂದ ಅರ್ಧ ಕಿ.ಮೀ ದೂರದಲ್ಲಿ ಐವರ ತಂಡ ವಾಹನವನ್ನು ಅಡ್ಡಕಟ್ಟಿ, ತಾವು ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಎಂದು ಹೇಳಿಕೊಂಡು ವಾಹನ ತಪಾಸಣೆ ಮಾಡುವ ನೆಪದಲ್ಲಿ ವಾಹನದಲ್ಲಿ ಇರಿಸಲಾಗಿದ್ದ ₹14 ಲಕ್ಷ ನಗದನ್ನು ದೋಚಿದ್ದಾರೆ ಎಂದು ಶಬರಿ ಗಿರೀಶನ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಮರುದಿನ ಬೆಳಿಗ್ಗೆ ಅವರುದೂರು ನೀಡಿದ್ದಾರೆ.ವಾಹನದಲ್ಲಿ ವ್ಯಾಪಾರಿ ಒಬ್ಬರೇ ಇದ್ದರು ಎಂದು ಹೇಳಲಾಗಿದೆ.

ADVERTISEMENT

ಪೊಲೀಸರಲ್ಲಿ ಅನುಮಾನ: ದೂರು ದಾಖಲಾಗಿರುವುದನ್ನು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್ ಅವರು ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು, ‘ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ಮಾಡಲಾಗಿದೆ. ಮಾದಕ ದ್ರವ್ಯ ನಿಗ್ರಹ ಅಧಿಕಾರಿಗಳು ಎಂದು ಹೇಳಿಕೊಂಡು ವಾಹನ ತಪಾಸಣೆ ಮಾಡುವ ನೆಪದಲ್ಲಿ ದುಡ್ಡು ಕೊಳ್ಳೆ ಹೊಡೆದಿದ್ದಾರೆ ಎಂದು ವ್ಯಾಪಾರಿ ದೂರಿನಲ್ಲಿ ಹೇಳಿದ್ದಾರೆ.ವಾಹನದಲ್ಲಿ ಅವರೊಬ್ಬರೇ ಇದ್ದರು. ಅವರ ಬಗ್ಗೆಯೂ ನಮಗೆ ಅನುಮಾನ ಇದೆ. ಅಷ್ಟು ಹಣ ಎಲ್ಲಿಂದ ಬಂತು? ದೊಡ್ಡ ಮೊತ್ತವನ್ನು ತೆಗೆದುಕೊಂಡು ಹೋಗುತ್ತಿದ್ದುದು ಯಾಕೆ ಎಂಬುದನ್ನು ಅವರು ಸರಿಯಾಗಿ ವಿವರಿಸಿಲ್ಲ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅವರು ಸಲ್ಲಿಸಿಲ್ಲ. ಹಾಗಾಗಿ, ಎಲ್ಲ ಆಯಾಮಗಳಿಂದಲೂ ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.