ADVERTISEMENT

ಬಂಡೀಪುರ | ಸಫಾರಿಗೆ ವಿರೋಧ: ಒಂದು ಟ್ರಿಪ್‌ ಕಡಿತ

ಕಾಡು ಉಳಿಸಿ, ಸಫಾರಿ ಅಳಿಸುವಂತೆ ರೈತ ಸಂಘಟನೆಗಳ ಒತ್ತಾಯ

ಬಾಲಚಂದ್ರ ಎಚ್.
ಮಲ್ಲೇಶ ಎಂ.
Published 30 ಅಕ್ಟೋಬರ್ 2025, 2:24 IST
Last Updated 30 ಅಕ್ಟೋಬರ್ 2025, 2:24 IST
ಬಂಡಿಪುರ ಅರಣ್ಯದಲ್ಲಿ ಸಫಾರಿ (ಸಂಗ್ರಹ ಚಿತ್ರ)
ಬಂಡಿಪುರ ಅರಣ್ಯದಲ್ಲಿ ಸಫಾರಿ (ಸಂಗ್ರಹ ಚಿತ್ರ)   

ಚಾಮರಾಜನಗರ/ಗುಂಡ್ಲುಪೇಟೆ: ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿ ಧಾಮದೊಳಗೆ ಸಫಾರಿ ನಿರ್ಬಂಧಿಸಬೇಕು ರೈತ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸಫಾರಿ ಟ್ರಿಪ್‌ ಕಡಿತಕ್ಕೆ ಆದೇಶ ನೀಡಿದ್ದಾರೆ.

ಸಂಜೆ 6 ಗಂಟೆಯ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುವುದರಿಂದ ವಾಹನಗಳ ಬೆಳಕು ಹಾಗೂ ಶಬ್ದದಿಂದ ವನ್ಯಜೀವಿಗಳಿಗೆ ತೊಂದರೆಯಾಗಿ ಕಾಡುಬಿಟ್ಟು ನಾಡಿಗೆ ಬಂದು ಉಪಟಳ ನೀಡುತ್ತಿರುವ ಬಗ್ಗೆ ರೈತ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಲಿ ಸಫಾರಿ ಟ್ರಿಪ್‌ಗಳ ಪೈಕಿ ಒಂದು ಟ್ರಿಪ್‌ ಕಡಿತಕ್ಕೆ ಸಚಿವರು ಆದೇಶ ನೀಡಿದ್ದಾರೆ.

ರೈತರ ವಿರೋಧ: ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿರುವ ಹಾಗೂ ಕಾನನದೊಳಗೆ ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿರುವ ಸಫಾರಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಅರಣ್ಯ ಸಚಿವರು ಕಾಟಾಚಾರಕ್ಕೆ ಒಂದು ಟ್ರಿಪ್ ಮಾತ್ರ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಮುಖಂಡ ಹೊನ್ನೂರು ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರತಿದಿನ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜ್‌ಗೆ ಸೇರಿರುವ 25ಕ್ಕೂ ಹೆಚ್ಚು ವಾಹನಗಳು ಬಂಡೀಪುರ ಅರಣ್ಯದೊಳಗೆ ಸಫಾರಿಗೆ ತೆರಳುತ್ತಿವೆ. ಸಾವಿರಾರು ಪ್ರವಾಸಿಗರನ್ನು ಹುಲಿಗಳ ಆವಾಸ ಇರುವ ಕೋರ್‌ ಝೋನ್‌ಗೆ ಸಫಾರಿ ಹೆಸರಿನಲ್ಲಿ ಕರೆದೊಯ್ಯುವುದು ಎಷ್ಟು ಸರಿ ಎಂದು ಹೊನ್ನೂರು ಪ್ರಕಾಶ್ ಪ್ರಶ್ನಿಸಿದರು.

ಬಂಡೀಪುರ ಅರಣ್ಯದೊಳಗಿನ ರಸ್ತೆಯಲ್ಲಿ ಓಡಾಡಿದರೆ ದಂಡ ವಿಧಿಸುವ ಅಧಿಕಾರಿಗಳು ಕಾಡಿನೊಳಗೆ ಪ್ರವಾಸಿಗರನ್ನು ಕರೆದೊಯ್ದು ಪ್ರಾಣಿಗಳಿಗೆ ಭಯ ಹುಟ್ಟಿಸುವುದು ನಿಯಮಬಾಹಿರ. ಎಡೆಬಿಡದೆ ಸಂಚರಿಸುವ ಸಫಾರಿ ವಾಹನಗಳ ಶಬ್ದಕ್ಕೆ ಬೆದರಿ ಪ್ರಾಣಿಗಳು ನಾಡಿನತ್ತ ಮುಖಮಾಡುತ್ತಿದ್ದು ಜನ– ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದರು.

ಅರಣ್ಯ ಸಚಿವರಿಗೆ ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ ಸಫಾರಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಇಲ್ಲವಾದರೆ ರೈತರ ಹೋರಾಟ ಮುಂದುವರಿಯಲಿದೆ ಎಂದು ಪ್ರಕಾಶ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಶೇ 50ಕ್ಕಿಂತ ಹೆಚ್ಚು ಅರಣ್ಯವಿದ್ದು ಪ್ರಾಣಿಗಳಿಗೆ ನೀರು ಆಹಾರ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು, ಕಾಡಿನೊಳಗೆ ಅಲ್ಲಲ್ಲಿ ಕೃತಕ ಕೆರೆಗಳನ್ನು ನಿರ್ಮಾಣ ಮಾಡಬೇಕು, ಹುಲ್ಲುಗಾವಲುಗಳನ್ನು ಬೆಳೆಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಸಫಾರಿಯಿಂದ ಬರುವ ಆದಾಯದ ಆಸೆ ಬಿಟ್ಟು ವನ್ಯಜೀವಿಗಳ ಹಿತ ಕಾಯಬೇಕು ಅರಣ್ಯದೊಳಗೆ ಅತಿಕ್ರಮ ಪ್ರವೇಶ ನಿರ್ಬಂಧಿಸಬೇಕು
ಹೊನ್ನೂರು ಪ್ರಕಾಶ್ ರೈತ ಮುಖಂಡ
‘ಐದು ಟ್ರಿಪ್‌ಗಳಲ್ಲಿ ಸಫಾರಿ’
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿದಿನ 5 ಟ್ರಿಪ್‌ಗಳ ಸಫಾರಿ ನಡೆಯುತ್ತಿದೆ. ಇಲಾಖೆಯ ಸುಪರ್ದಿಯಲ್ಲಿರುವ 5 ಜಿಪ್ಸಿ ವಾಹನ 5 ಕ್ಯಾಂಪರ್ ಹಾಗೂ 7 ಮಿನಿ ಬಸ್‌ಗಳು ಸೇರಿ 17 ವಾಹನಗಳು ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ಜಂಗಲ್‌ಲಾಡ್ಜ್‌ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತಿವೆ. ಪ್ರತಿ ದಿನ ಬೆಳಿಗ್ಗೆ 6.30 ಹಾಗೂ 8 ಗಂಟೆಗೆ 2 ಟ್ರಿಪ್ ಮಧ್ಯಾಹ್ನ 2.30 3.30 ಹಾಗೂ 5 ಗಂಟೆಗೆ 3 ಟ್ರಪ್‌ಗಳಲ್ಲಿ ಸಪಾರಿ ನಡೆಯುತ್ತದೆ. ಸಚಿವರ ಆದೇಶದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯ ಟ್ರಿಪ್‌ ಕಡಿತಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.