ADVERTISEMENT

ಅರ್ನಬ್‌ ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 12:39 IST
Last Updated 20 ಜನವರಿ 2021, 12:39 IST
ಅರ್ನಬ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಅರ್ನಬ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಸೋರಿಕೆಗೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಸಬೇಕು. ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಂದೆ ನಿಲ್ಲುವಂತೆ ಮಾಡಬೇಕು’ ಎಂದು ಆಗ್ರಹಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿಯ (ಎಸ್‌ಡಿಪಿಐ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಲಾರಿ ನಿಲ್ದಾಣದ ಬಳಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಅರ್ನಬ್‌ ಗೊಸ್ವಾಮಿ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಅರ್ನಬ್‌ ಗೋಸ್ವಾಮಿಗೆ ಸಂಬಂಧಿಸಿದ ವಾಟ್ಸ್‌ ಆ್ಯಪ್‌ ಸಂದೇಶಗಳು ಇತ್ತೀಚೆಗೆ ಸೋರಿಕೆಯಾಗಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷ ಯಗಳನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿ ತೀವ್ರ ಕಳವಳಕಾರಿಯಾಗಿದೆ.ಸರ್ಕಾರದ ಮುಖ್ಯ ವ್ಯಕ್ತಿಗಳೊಂದಿಗಿನ ತನ್ನ ಪ್ರಭಾವವನ್ನು ಬಳಸಿಕೊಂಡು ವ್ಯವಸ್ಥೆಯ ಹೊರಗಿನ ವ್ಯಕ್ತಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತಿರುವುದು ಈ ಸೋರಿಕೆಯಿಂದ ಬಹಿರಂಗಗೊಂಡಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಸೋರಿಕೆ ಬಗ್ಗೆ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇಂತಹ ಗಂಭೀರ ವಿಷಯದ ಬಗ್ಗೆ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಘ ಪರಿವಾರದವರ ದೇಶಭಕ್ತಿಯ ಕೂಗುಗಳು, ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಹಾಳುಮಾಡಲು ಹಾಗೂ ಅದರ ಪರದೆಯ ಹಿಂದಿನ ತಂತ್ರವನ್ನು ಮುಚ್ಚಿಹಾಕಲು ಮಾಡುತ್ತಿರುವ ಮುಖವಾಡ ಎಂಬುದು ಈ ಘಟನೆಯಿಂದ ಸಾಬೀತಾಗಿದೆ’ ಎಂದರು.

ಬಾಲಾಕೋಟ್‌ ಕಾರ್ಯಾಚರಣೆಗೆ ಮೂರು ದಿನಗಳ ಮುಂಚಿತವಾಗಿ ಅರ್ನಬ್‌ಗೆ ದಾಳಿಯ ಬಗ್ಗೆ ಮಾಹಿತಿ ಇತ್ತು ಎಂಬುದು ಆತಂಕಕಕಾರಿ ಸಂಗತಿ. ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ಇದು ಬಹಳ ಗಂಭೀರ ವಿಷಯ. ರಾಷ್ಟ್ರದ ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಮತ್ತು ಟಿಆರ್‌ಪಿ ರೇಟಿಂಗ್ ಪಾಯಿಂಟ್‌ಗಳನ್ನು ಹೆಚ್ಚಿಸುವ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳ ವ್ಯಾಪಾರವನ್ನು ಹೆಚ್ಚಿಸಲು ರಾಷ್ಟ್ರದ ಭದ್ರತೆಯನ್ನು ಮಾರುಕಟ್ಟೆ ಸರಕಾಗಿಸಲು ಅವಕಾಶ ಕೊಡಬಾರದು. ಈ ಬಗ್ಗೆ ತನಿಖೆ ನಡೆಸಲು ಉನ್ನತಮಟ್ಟದ ತಂಡವನ್ನು ರಚಿಸಬೇಕು. ಅರ್ನಬ್‌ನನ್ನು ಕೂಡಲೇ ಬಂಧಿಸಬೇಕು ಮತ್ತು ಗೋಪ್ಯ ಮಾಹಿತಿಯನ್ನು ಪಡೆಯಲು ಸಹಾಯ ಮಾಡಿದ ಎಲ್ಲರ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ಉಪಾಧ್ಯಕ್ಷ ಸಮೀಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಕಾರ್ಯದರ್ಶಿ ಜಬೀನೂರ, ಜಿಲ್ಲಾ ಸಮಿತಿ ಸದಸ್ಯರಾದ ಸೈಯದ್ ಆರೀಫ್, ಕಿಜರ್ ಅಹಮ್ಮದ್, ನಗರಸಭಾ ಸದಸ್ಯ ಮಹಮ್ಮದ್ ಅಮೀಕ್, ಪಿಎಫ್‌ಐ ಜಿಲ್ಲಾಧ್ಯಕ್ಷ ಕಫಿಲ್ ಅಹಮ್ಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.