ADVERTISEMENT

ಕೋವಿಡ್-19: ಮಾಸ್ಕ್‌ ಕೊರತೆ ನೀಗಲು ಮಹಿಳೆಯರ ಪಣ

ಜಿಲ್ಲಾ ಪಂಚಾಯಿತಿಯ ಪ್ರಯತ್ನ, ಅಭಾವ ನೀಗುವುದರ ಜೊತೆ ಸ್ವ ಉದ್ಯೋಗಕ್ಕೆ ಉತ್ತೇಜನನೀಡುವ ಪ್ರಯತ್ನ

ಸೂರ್ಯನಾರಾಯಣ ವಿ
Published 17 ಮಾರ್ಚ್ 2020, 19:45 IST
Last Updated 17 ಮಾರ್ಚ್ 2020, 19:45 IST
ಮಾಸ್ಕ್
ಮಾಸ್ಕ್   

ಚಾಮರಾಜನಗರ: ಕೊರೊನಾ ಭೀತಿ ನಡುವೆ ಜಿಲ್ಲೆಯಲ್ಲಿ ಮುಖಗವುಸುಗಳ (ಮಾಸ್ಕ್‌) ಕೊರತೆ ತಲೆದೋರಿದ್ದು, ಇದನ್ನು ದೂರ ಮಾಡಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸ್ವ ಸಹಾಯ ಸಂಘದ ಮಹಿಳೆಯರು ಮುಂದೆ ಬಂದಿದ್ದಾರೆ.

ಜಿಲ್ಲೆಯ ಮೂರ್ನಾಲ್ಕು ಸ್ವ ಸಹಾಯ ಸಂಘಗಳು ಎರಡು ದಿನಗಳಿಂದ ಮರು ಬಳಸಬಹುದಾದ ಹತ್ತಿ ಬಟ್ಟೆಯ ಮುಖಗವುಸುಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 1000 ಮುಖಗವುಸುಗಳಿಗೆ ಬೇಡಿಕೆ ಇಟ್ಟಿದೆ. ಖಾಸಗಿ ಔಷಧಿ ಅಂಗಡಿಯವರೂ 200 ಮುಖಗವುಸುಗಳನ್ನು ಸಿದ್ಧಪಡಿಸುವಂತೆ ಕೋರಿದ್ದಾರೆ. ₹15ರಿಂದ ₹25 ರವರೆಗಿನ ದರದಲ್ಲಿ‌ ಮಾರಾಟ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಮುಖಗವುಸುಗಳ ಕೊರತೆ ಇದೆ. ಇವುಗಳನ್ನು ಸ್ಥಳೀಯವಾಗಿ ತಯಾರಿಸುವುದರಿಂದ ಅಭಾವವನ್ನು ನೀಗಿಸಬಹುದು. ಇದರ ಜೊತೆಗೆ ಕೊರೊನಾ ವೈರಸ್‌ ಭೀತಿಯಿಂದಾಗಿ ಎಲ್ಲವೂ ಸ್ತಬ್ಧಗೊಂಡಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರಿಗೆ ದುಡಿಯಲು ಅವಕಾಶ ನೀಡಿದಂತಾಗುತ್ತದೆ. ಅವರಿಗೆ ಆದಾಯವೂ ಬರುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್‌ ಹರ್ಷಲ್‌ ನಾರಾಯಣ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ (ಎನ್‌ಆರ್‌ಎಲ್‌ಎಂ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಸಮುದಾಯ ಬಂಡವಾಳ ನಿಧಿಯಿಂದ ಸಾಲ ನೀಡಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಈ ಯೋಜನೆ ಅಡಿಯಲ್ಲಿ ಹೊಲಿಗೆ ಯಂತ್ರಗಳನ್ನು ಖರೀದಿಸಿ ಸ್ವ ಉದ್ಯೋಗವನ್ನು ಕೈಗೊಂಡಿರುವ ಸಂಘಗಳ ಮಹಿಳೆಯರು ಮುಖಗವುಸು ಹೊಲಿಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಹನೂರು ತಾಲ್ಲೂಕಿನ ಶಾಗ್ಯದಲ್ಲಿರುವ ಸ್ವ ಸಹಾಯ ಸಂಘ ಹಾಗೂ ಚಾಮರಾಜನಗರ ತಾಲ್ಲೂಕಿನ ಗೂಳಿಪುರದಲ್ಲಿರುವ ಸ್ವಸಹಾಯ ಸಂಘದ ಸದಸ್ಯರು ಹತ್ತಿ ಬಟ್ಟೆಯಿಂದ ಮುಖಗವುಸುಗಳನ್ನು ತಯಾರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮುಖಗವುಸು ಹೊಲಿದು ಕೊಡಲು ಸಾಧ್ಯವೇ ಎಂದು ಆರೋಗ್ಯ ಇಲಾಖೆಯವರು ಕೇಳಿದ್ದರು. ಅದರಂತೆ ಒಂದು ಮಾದರಿ ಮುಖಗವುಸನ್ನು ಹೊಲಿದು ತೋರಿಸಿದ್ದೆವು. ತಮಗೆ ಇಂತಹದ್ದೇ ವಿನ್ಯಾಸದ್ದು ಬೇಕು ಎಂದು ಹೇಳಿದ್ದಾರೆ. ಅದನ್ನು ಹೊಲಿಯುತ್ತಿದ್ದೇವೆ’ ಎಂದು ಗೂಳಿಪುರದ ಭುವನೇಶ್ವರಿ ಸ್ವಸಹಾಯ ಸಂಘದ ನಾಗರತ್ನಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ನಾವು ಹತ್ತು ಮಂದಿ ಇದ್ದೇವೆ. ಆರೋಗ್ಯ ಇಲಾಖೆಯವರು ಸಾವಿರ ಮುಖಗವುಸು ಬೇಕು ಎಂದು ಹೇಳಿದ್ದಾರೆ. ಆದಷ್ಟು ಬೇಗ ಅದನ್ನು ಹೊಲಿದು ಕೊಡಬೇಕಾಗಿದೆ’ ಎಂದು ಅವರು ಹೇಳಿದರು.

ಸ್ವ ಉದ್ಯೋಗಕ್ಕೆ ಉತ್ತೇಜನ

ಮುಖಗವುಸುಗಳ ಕೊರತೆ ಇದೆ ಎಂದು ಗೊತ್ತಾದ ತಕ್ಷಣ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣ ರಾವ್‌ ಅವರು ಹೊಲಿಗೆ ಯಂತ್ರಗಳನ್ನು ಖರೀದಿಸಿ ಸ್ವ ಉದ್ಯೋಗ ಮಾಡಿಕೊಂಡಿರುವ ಮಹಿಳೆಯರ ನೆರವು ಪಡೆಯಲು ಯೋಜನೆ ರೂಪಿಸಿದರು.

ಕೊರೊನಾ ವೈರಸ್‌ ಭೀತಿಯಿಂದಾಗಿ ವ್ಯಾಪಾರ ವಹಿವಾಟಿಗೆ ಧಕ್ಕೆಯಾಗಿದೆ. ಆರ್ಥಿಕ ಸ್ಥಿತಿಯೂ ಕುಸಿದಿದೆ. ಇಂತಹ ಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶ ಕೆಲವು ಮಹಿಳೆಯರಿಗಾದರೂ ಸ್ವ ಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಖಗವುಸುಗಳನ್ನು ಹೊಲಿಯಲು ಉತ್ತೇಜನ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.