ADVERTISEMENT

ಶೇ 70ರಷ್ಟು ಹುಲಿಗಳು ಭಾರತದಲ್ಲಿ: ಡಾ.ಎಸ್.ಪಿ.ಯಾದವ್

ಬಂಡೀಪುರದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿಯಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ಪ್ರತಿನಿಧಿಗಳು
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿಯಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ಪ್ರತಿನಿಧಿಗಳು   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ‘ವಿಶ್ವದಲ್ಲಿರುವ ಹುಲಿಗಳಲ್ಲಿ ಶೇ 70ರಷ್ಟು ಭಾರತದಲ್ಲಿಯೇ ಇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ನಿರ್ದೇಶಕ ಡಾ.ಎಸ್.ಪಿ.ಯಾದವ್ ತಿಳಿಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿಯಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್‌ ಶೃಂಗಸಭೆಯಲ್ಲಿ ಅವರು ಮಾತನಾಡಿದರು. 

‘ವಿಶ್ವದಲ್ಲಿರುವ ಬಿಗ್ ಕ್ಯಾಟ್ಸ್‌ ಪ್ರಬೇಧಗಳಾದ ಹುಲಿ, ಸಿಂಹ, ಚಿರತೆ, ಚೀತಾ, ಹಿಮ ಚಿರತೆ, ಜಾಗ್ವಾರ್ ಹಾಗೂ ಪ್ಯೂಮಾಗಳನ್ನು ‌ರಕ್ಷಣೆ ಈ ಶೃಂಗಸಭೆಯ ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ 14,000ದಿಂದ 15,000ದಷ್ಟು ಚಿರತೆಗಳಿವೆ. ಸಿಂಹಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದು ಬಿಗ್ ಕ್ಯಾಟ್ಸ್‌ಗಳ ಸಂತತಿಯನ್ನು ಸಂರಕ್ಷಿಸುವಲ್ಲಿ ಭಾರತವು ಮಾದರಿಯಾಗಿದೆ’ ಎಂದರು. 

‘1952ರಲ್ಲಿ ದೇಶದಲ್ಲಿ ಚೀತಾ ಸಂತತಿ ಸಂಪೂರ್ಣ ನಶಿಸಿತ್ತು. ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಂಡು ಪೋಷಿಸಿದ ಫಲವಾಗಿ ಪ್ರಸ್ತುತ 35 ಚೀತಾಗಳಿವೆ’ ಎಂದು ಹೇಳಿದರು.

‘ಶೃಂಗಸಭೆಯಲ್ಲಿ ವಿಶ್ವದ 23 ದೇಶಗಳ 39 ಪ್ರತಿನಿಧಿಗಳು ಭಾಗವಹಿಸಿದ್ದು, ಬಿಗ್‌ ಕ್ಯಾಟ್ಸ್‌ ಪ್ರಭೇದಗಳ ಸಂತತಿ ಉಳಿವಿನ ಸಂಬಂಧ ವಿಚಾರ ವಿನಿಮಯ, ಸಂವಾದ ಜರುಗಲಿದೆ’ ಎಂದು ಮಾಹಿತಿ ನೀಡಿದರು.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಪಿಸಿಎಫ್ ಮನೋರಂಜನ್, ಬಿಸ್ವಜಿತ್ ಮಿಶ್ರಾ, ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್, ಚಾಮರಾಜನಗರ ಸಿಸಿಎಫ್ ಮಾಲತಿ ಪ್ರಿಯಾ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಪ್ರಭಾಕರನ್‌, ಎಸಿಎಫ್ ನವೀನ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.