ADVERTISEMENT

ಸರ್ಕಾರಿ ಮಕ್ಕಳಿಗೆ ಸರಳ ಇಂಗ್ಲಿಷ್‌ ಪಾಠ

ಮೈಸೂರಿನ ಸ್ವಯಂಸೇವಾ ಸಂಸ್ಥೆ ಪ್ರಥಮ್‌ನಿಂದ ವಿಭಿನ್ನ ಪ್ರಯತ್ನ

ಮಹದೇವ್ ಹೆಗ್ಗವಾಡಿಪುರ
Published 21 ಡಿಸೆಂಬರ್ 2019, 10:23 IST
Last Updated 21 ಡಿಸೆಂಬರ್ 2019, 10:23 IST
ಇಂಗ್ಲಿಷ್‌ ಕಲಿಕೆಯ ಭಾಗವಾಗಿ ಸಿದ್ಧಪಡಿಸಿದ ಚಿತ್ರಪಟಗಳೊಂದಿಗೆ ಮಕ್ಕಳು
ಇಂಗ್ಲಿಷ್‌ ಕಲಿಕೆಯ ಭಾಗವಾಗಿ ಸಿದ್ಧಪಡಿಸಿದ ಚಿತ್ರಪಟಗಳೊಂದಿಗೆ ಮಕ್ಕಳು   

ಸಂತೇಮರಹಳ್ಳಿ: ಇಂಗ್ಲಿಷ್‌ ಕಲಿಕೆಯಲ್ಲಿ ಹಿಂದುಳಿದಿರುವ ಸರ್ಕಾರಿ ಮಕ್ಕಳಿಗೆ ಇಂಗ್ಲಿಷ್‌ ಕಲಿಸಿಕೊಡುವ ಪ್ರಯತ್ನಕ್ಕೆ ಮೈಸೂರಿನ ಸ್ವಯಂಸೇವಾ ಸಂಸ್ಥೆ ಪ್ರಥಮ್‌ ಕೈಹಾಕಿದೆ.

ಈ ಹಿಂದೆ, ರೋಟರಿ, ಪ್ರಗತಿ ಸಂಸ್ಥೆಗಳ ಸಹಯೋಗದಲ್ಲಿ ಪ್ರಥಮ್‌ ಸಂಸ್ಥೆ ಸಂತೇಮರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಪಾಠ ಆರಂಭಿಸಿತ್ತು. ಈಗ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಬೋಧನೆ ಆರಂಭಿಸಿದೆ. ಪ್ರಾಯೋಗಿಕವಾಗಿ 30 ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಇಂಗ್ಲಿಷ್‌ ಹೇಳಿಕೊಡಲಾಗುತ್ತಿದೆ.

ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಸುಲಭ ಹಾಗೂ ಸರಳವಾಗಿ ಇಂಗ್ಲಿಷ್ ಕಲಿಸಿ ಮಾತನಾಡುವಂತೆ ಅಭ್ಯಾಸ ಮಾಡಿಸುತ್ತಿದ್ದಾರೆ. ಒಂದು ತಿಂಗಳಿಂದ ಈ ತರಬೇತಿ ನಡೆಯುತ್ತಿದೆ.

ADVERTISEMENT

ಕಲಿಸುವುದು ಹೇಗೆ?:ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಇಂಗ್ಲಿಷ್‌ ಕಲಿಸಲಾಗುತ್ತಿದೆ. ಪ್ರಾತ್ಯಕ್ಷಿಕೆಯ ಮೂಲಕವೇ ಕಲಿಸಲಾಗುತ್ತಿದೆ. ಇಂಗ್ಲಿಷ್ ವರ್ಣಮಾಲೆಯ ದೊಡ್ಡ ಮತ್ತು ಸಣ್ಣ ಅಕ್ಷರಗಳನ್ನು ಸುಲಭ ರೀತಿಯಲ್ಲಿ ತಿಳಿಸಲಾಗುತ್ತಿದೆ.ಇಂಗ್ಲಿಷ್ ಪದಗಳ ಹಂತದಲ್ಲಿ ಅಕ್ಷರಗಳನ್ನು ಕೂಡಿಸಿ ಉಚ್ಚಾರಣೆ ಮಾಡಿಸುವುದು ಹಾಗೂ ಅದರ ಅರ್ಥವನ್ನು ತಿಳಿಯುವಂತೆ ಹೇಳಿಕೊಡಲಾಗುತ್ತಿದೆ.

ಕೆಲವು ವಸ್ತುಗಳನ್ನು ಇಟ್ಟು ಅವುಗಳ ಬಣ್ಣ, ವಸ್ತುವಿನ ಹೆಸರು, ಅವುಗಳ ಕೆಲಸ ಕಾರ್ಯಗಳನ್ನು ನಿರ್ದಿಷ್ಟ ಅಕ್ಷರದೊಂದಿಗೆ ಗುರುತಿಸಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುತ್ತಿದ್ದಾರೆ. ಇಂಗ್ಲಿಷ್‌ ವರ್ಣಮಾಲೆಯ ಅಕ್ಷರಗಳನ್ನು ಗುಂಪಿನಲ್ಲಿ ಚದುರಿಸಿ ಇಟ್ಟು ವಾಕ್ಯಗಳನ್ನು ರಚಿಸುವಂತೆ ಕೆಲವು ವಸ್ತುಗಳನ್ನು ತೋರಿಸುತ್ತಾರೆ. ಇದರ ಆಧಾರದ ಮೇಲೆ ವಿದ್ಯಾರ್ಥಿಗಳು ಹಣ್ಣು, ತರಕಾರಿಗಳು ಹಾಗೂ ಆಟಿಕೆ ವಸ್ತುಗಳು ಸೇರಿದಂತೆ ಅವುಗಳ ಹೆಸರಿಗೆ ತಕ್ಕಂತೆ ವಾಕ್ಯಗಳನ್ನು ರಚಿಸುತ್ತಿದ್ದಾರೆ.

ಸಣ್ಣ ಸಣ್ಣ ಇಂಗ್ಲಿಷ್ ಕಥೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಓದುವಂತೆ ಮಾಡಿ ವಿವರಣೆ ಹೇಳಿಕೊಡುತ್ತಾರೆ. ವಿದ್ಯಾರ್ಥಿಗಳು ಇದನ್ನು ಅರ್ಥೈಸಿಕೊಂಡು ಇತರೆ ವಿದ್ಯಾರ್ಥಿಗಳಿಗೆ ಕಥೆ ರೂಪದಲ್ಲಿ ಹೇಳಿಕೊಡುತ್ತಾರೆ. ಕಥೆಯಲ್ಲಿ ಬರುವ ಕೆಲವು ಸನ್ನಿವೇಶಕ್ಕೆ ತಕ್ಕಂತೆ ಅಭಿನಯಿಸಿ ಕಥೆಯನ್ನು ಹೇಳಿಸುತ್ತಾರೆ. ಇಂತಹ ಸಂಧರ್ಭದಲ್ಲಿ ಅಕ್ಷರಗಳು ಹಾಗೂ ಅವುಗಳನ್ನು ಯಾವ ರೀತಿ ಸಂಬೋಧಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಸ್ವತಃ ಇಂಗ್ಲಿಷ್ ಚಿತ್ರಪಟಗಳನ್ನು ತಯಾರಿಸಿ ಶಾಲಾ ಗೋಡೆಗಳಲ್ಲಿ ತೂಗು ಹಾಕಿದ್ದಾರೆ.

‘ಸರಳ ಕಲಿಕೆಯಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲ’

‘ಮಕ್ಕಳಿಗೆ ಇಂಗ್ಲಿಷ್ ಅನ್ನು ಸರಳ ರೀತಿಯಲ್ಲಿ ಕಲಿಸುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ. ಮಕ್ಕಳು ಹೆಚ್ಚು ಉತ್ಸುಕರಾಗಿದ್ದು, ಕಲಿತು ಆರಂಭದ ಇಂಗಿಷ್ ಪದಗಳನ್ನು ಮಾತನಾಡಲು ಆರಂಭಿಸಿದ್ದಾರೆ. ಸಂಸ್ಥೆಯು ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಮುಂದಾದಾಗ ರೋಟರಿ ಹಾಗೂ ಪ್ರಗತಿ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿವೆ’ ಎಂದು ಪ್ರಥಮ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಹದೇವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳಿಗೆ ಇಂಗಿಷ್ ಕಲಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳು ಉತ್ಸಾಹದಿಂದ ಇಂಗ್ಲಿಷ್ ಕಲಿಯುತ್ತಿದ್ದಾರೆ. ಈ ಕಾರ್ಯಕ್ರಮ ಬೇರೆ ಶಾಲೆಗಳಿಗೂ ವಿಸ್ತರಿಸಿದರೆ ಅಲ್ಲಿನ ಮಕ್ಕಳಿಗೂ ಅನುಕೂಲವಾಗುತ್ತದೆ’ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಹೇಶ್ ತಿಳಿಸಿದರು.

‘ಪ್ರಥಮ್ ಸಂಸ್ಥೆಯವರು ಇಂಗ್ಲಿಷ್ ಕಲಿಸುತ್ತೇವೆ ಎಂದಾಗ ನಮಗೆ ಭಯ ಹಾಗೂ ಆಶ್ಚರ್ಯವಾಯಿತು. ಸಂಸ್ಥೆಯ ಶಿಕ್ಷಕರು ಚೆನ್ನಾಗಿ ಕಲಿಸುತ್ತಿದ್ದಾರೆ. ಈಗ ಸ್ನೇಹಿತರ ಜೊತೆ ಇಂಗ್ಲಿಷಿನಲ್ಲೇ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು 5ನೇ ತರಗತಿಯ ವಿದ್ಯಾರ್ಥಿನಿ ಸಿಂಚನಾ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.