ADVERTISEMENT

ಚಾಮರಾಜನಗರ: ಜನದಟ್ಟಣೆ, ಹೆಚ್ಚುವರಿ ಬಸ್‌ಗಳಿಗೆ ಹೆಚ್ಚಿದ ಕೂಗು

ಶಕ್ತಿ ಯೋಜನೆ: ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ ₹20 ಲಕ್ಷ ಹೆಚ್ಚುವರಿ ಆದಾಯ, 1.20 ಲಕ್ಷ ಮಹಿಳೆಯರ ಪ್ರಯಾಣ

ಸೂರ್ಯನಾರಾಯಣ ವಿ
Published 16 ಜೂನ್ 2023, 23:43 IST
Last Updated 16 ಜೂನ್ 2023, 23:43 IST
ಚಾಮರಾಜನಗರ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಏರಲು ಕಂಡು ಬಂದ ಪೈಪೋಟಿ
ಚಾಮರಾಜನಗರ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಏರಲು ಕಂಡು ಬಂದ ಪೈಪೋಟಿ   

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಬೆನ್ನಲ್ಲೇ, ಜಿಲ್ಲೆ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆಯ ಕೂಗು ಕೇಳಿಬರುತ್ತಿದೆ. 

ಗುಂಡ್ಲುಪೇಟೆ, ಹನೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಲ್ಕೈದು ದಿನಗಳಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಎಸ್‌ಆರ್‌ಟಿಸಿಗೆ ಬಸ್‌ಗಳ ಕೊರತೆ ಉಂಟಾಗಿದ್ದು, ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. 

ಕೆಎಸ್‌ಆರ್‌ಟಿಸಿಯ ಚಾಮರಾಜನಗರ ವಿಭಾಗದಲ್ಲಿ 507 ಬಸ್‌ಗಳಿವೆ (ನಂಜನಗೂಡು ಘಟಕವೂ ಸೇರಿ). 480 ಮಾರ್ಗಗಳಿದ್ದು, ಈ ಪೈಕಿ 230 ಮಾರ್ಗಗಳು ಗ್ರಾಮೀಣ ಪ್ರದೇಶಗಳಲ್ಲಿವೆ. 467 ಬಸ್‌ಗಳು ಶಕ್ತಿ ಯೋಜನೆ ವ್ಯಾಪ್ತಿಗೆ ಬರುತ್ತವೆ. 

ADVERTISEMENT

ಸೋಮವಾರದಿಂದೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಕೆಲವು ಊರುಗಳಿಗೆ ಬೆಳಿಗ್ಗೆ ಒಂದು ಟ್ರಿಪ್‌ ಮಾತ್ರ ಕೆಎಸ್‌ಆರ್‌ಟಿಸಿ ಬಸ್‌ಗಳು ಹೋಗುತ್ತವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಒಂದು ಬಸ್‌ ಸಾಕಾಗುತ್ತಿಲ್ಲ. ಇದರಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಉದ್ಯೋಗ ನಿಮಿತ್ತ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಹೆಚ್ಚುವರಿ ಬಸ್‌ ಸೌಕರ್ಯ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಹೆಚ್ಚುವರಿ 80 ಬಸ್‌ಗಳು ಬೇಕು: ‘ಉಚಿತ ಪ್ರಯಾಣದ ಸೌಲಭ್ಯ ಇರುವ ಕಾರಣಕ್ಕೆ ಮಹಿಳೆಯರೆಲ್ಲ ನಮ್ಮ ಬಸ್‌ ಹತ್ತುತ್ತಿದ್ದಾರೆ. ಹಿಂದೆ ಕುಟುಂಬದ ಸದಸ್ಯರ ಜೊತೆ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದ ಪುರುಷರೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಸಂಚರಿಸುತ್ತಿದ್ದಾರೆ/  ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಒಂದು ಇಲ್ಲವೇ ಎರಡು ಟ್ರಿಪ್‌ ಹೋಗುವ ಕಡೆಗಳಲ್ಲಿ ಸಮಸ್ಯೆಯಾಗುತ್ತಿರುವುದು ನಿಜ. ಈಗಿನ ಪರಿಸ್ಥಿತಿಯಲ್ಲಿ ಬಸ್‌ಗಳ ಕೊರತೆ ಉಂಟಾಗುತ್ತಿದೆ. ಹೆಚ್ಚುವರಿ ಬಸ್‌ಗಳ ಅಗತ್ಯವಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಹೇಳಿದರು. 

 ‘ನಮ್ಮ ವಿಭಾಗದ ಎಲ್ಲ ಡಿಪೊಗಳ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ್ದೇನೆ. ಯಾವ ಮಾರ್ಗದಲ್ಲಿ ಹೆಚ್ಚುವರಿ ಬಸ್‌ ಗೆ ಬೇಡಿಕೆ ಇದೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ. ಈಗ ಸಂಚರಿಸುವ ಮಾರ್ಗಗಳಲ್ಲಿ ಎಲ್ಲೆಲ್ಲಿ ಹೆಚ್ಚು ಬಸ್‌ಗಳ ಅಗತ್ಯವಿಲ್ಲವೋ ಅಲ್ಲಿ ಸಂಚಾರ ಸ್ಥಗಿತಗೊಳಿಸಿ, ಅಗತ್ಯವಿರುವ ಕಡೆಗೆ ಹಾಕಲು ಸೂಚಿಸಲಾಗಿದೆ. ದೂರದ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳನ್ನು ಕಡಿಮೆಗೊಳಿಸಲು ಯೋಚಿಸಲಾಗುತ್ತಿದೆ. ಉದಾಹರಣೆಗೆ ಚಾಮರಾಜನಗರದಿಂದ ಮೈಸೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುವ ಕೆಲವು ಬಸ್‌ಗಳಿವೆ. ಮೈಸೂರಿನಿಂದ ಬೆಂಗಳೂರಿಗೆ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳಿರುವುದರಿಂದ, ನಮ್ಮ ಬಸ್‌ ಅನ್ನು ಬೆಂಗಳೂರಿಗೆ ಕಳುಹಿಸದೆ, ವಾಪಸ್‌ ನಗರಕ್ಕೆ ಬರುವಂತೆ ಮಾಡಿ, ನಂತರ ಬೇಡಿಕೆ ಇರುವ ಗ್ರಾಮೀಣ ಪ್ರದೇಶಕ್ಕೆ ಕಳುಹಿಸಬಹುದಾಗಿದೆ’ ಎಂದು ಅವರು ವಿವರಿಸಿದರು. 

‘ನಮ್ಮಲ್ಲಿ ಈಗ ಹೆಚ್ಚಾಗಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗೆ ಕನಿಷ್ಠ 60 ಹೆಚ್ಚುವರಿ ಬಸ್‌ಗಳ ಅಗತ್ಯವಿದೆ. ನಂಜನಗೂಡು ಘಟಕವನ್ನೂ ಸೇರಿಸಿದರೆ ನಮ್ಮ ವಿಭಾಗಗಕ್ಕೆ 80 ಬಸ್‌ಗಳು ಹೆಚ್ಚುವರಿಯಾಗಿ ಬೇಕು’ ಎಂದು ಶ್ರೀನಿವಾಸ ಹೇಳಿದರು. 

ಶ್ರೀನಿವಾಸ ಬಿ.

ಪ್ರತಿ ದಿನ ₹20 ಲಕ್ಷ ಹೆಚ್ಚು ಆದಾಯ

ಈ ಮಧ್ಯೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೆಎಸ್‌ಆರ್‌ಟಿಸಿಯ ಪ್ರತಿ ದಿನದ ಆದಾಯದಲ್ಲಿ ಸರಾಸರಿ ₹20 ಲಕ್ಷದಷ್ಟು ಹೆಚ್ಚಾಗಿದೆ.  ಚಾಮರಾಜನಗರ ವಿಭಾಗದ ವ್ಯಾಪ್ತಿಯಲ್ಲಿ ಈಗ ಪ್ರತಿ ದಿನ ಸರಾಸರಿ 1.20 ಲಕ್ಷದಷ್ಟು ಮಹಿಳೆಯರು ಸಂಚರಿಸುತ್ತಿದ್ದಾರೆ.  ಶಕ್ತಿ ಯೋಜನೆ ಜಾರಿಗೂ ಮುನ್ನ ಕೆಎಸ್‌ಆರ್‌ಟಿಸಿ ಒಂದು ದಿನದಲ್ಲಿ ₹53 ಲಕ್ಷದಿಂದ ₹55 ಲಕ್ಷ ಆದಾಯ ಸಂಗ್ರಹಿಸುತ್ತಿತ್ತು. ಈಗ ₹74 ಲಕ್ಷವರೆಗೂ ಸಂಗ್ರಹವಾಗುತ್ತಿದೆ (ಉಚಿತ ಪ್ರಯಾಣದ ಟಿಕೆಟ್‌ ಮೊತ್ತವೂ ಸೇರಿ. ಈ ಹಣವನ್ನು ಸರ್ಕಾರ ಭರಿಸುತ್ತದೆ).   ‘ನಾವು ಒಂದು ದಿನದಲ್ಲಿ 80 ಸಾವಿರದಿಂದ 90 ಸಾವಿರ ಮಹಿಳೆಯರು ಪ್ರಯಾಣಿಸಬಹುದು ಎಂದು ಲೆಕ್ಕಹಾಕಿದ್ದೆವು. ಆದರೆ 1.20 ಲಕ್ಷದಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ’ ಎಂದು ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು. 

ಹೆಚ್ಚುವರಿ ಬಸ್‌ಗಳ ಪೂರೈಕೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೊಸ ಬಸ್‌ ಖರೀದಿಗೆ ನಿರ್ಧರಿಸಿದ್ದರೂ ಬಸ್‌ ಬರಲು 3 ತಿಂಗಳು ಬೇಕು
-ಶ್ರೀನಿವಾಸ ಬಿ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.