ADVERTISEMENT

ಮಹದೇಶ್ವರ ಬೆಟ್ಟ: ಶಿವರಾತ್ರಿ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 14:41 IST
Last Updated 17 ಫೆಬ್ರುವರಿ 2023, 14:41 IST
ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ನೀಡುವುದಕ್ಕಾಗಿ ತಯಾರಿಸಿರುವ ಲಾಡನ್ನು ‍ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ಪರಿಶೀಲಿಸಿದರು
ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ನೀಡುವುದಕ್ಕಾಗಿ ತಯಾರಿಸಿರುವ ಲಾಡನ್ನು ‍ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ಪರಿಶೀಲಿಸಿದರು   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು.

ಐದು ದಿನಗಳ ಕಾಲ ಜರುಗುವ ಜಾತ್ರೆಯ ಮೊದಲ ದಿನ ಬೇಡಗಂಪಣ ಅರ್ಚಕರು ಮಲೆ ಮಹದೇಶ್ವರಸ್ವಾಮಿಗೆ ಮುಂಜಾನೆಯೇ ಅಭಿಷೇಕಗಳನ್ನು ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾಲೂರು ಮಠದವರೆಗೆ ಮಲೆ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.

ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಮಾಡಿದರು. ಬಸವವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಸೇರಿದಂತೆ ವಿವಿಧ ಉತ್ಸವ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು. ದಾಸೋಹ ಸ್ವೀಕರಿಸಿದರು.

ADVERTISEMENT

ಶನಿವಾರ ಶಿವರಾತ್ರಿಯ ದಿನ ಸ್ವಾಮಿಗೆ ಎಣ್ಣೆ-ಮಜ್ಜನ ಸೇವೆ ಹಾಗೂ ಉತ್ಸವಾದಿಗಳು ನಡೆಯಲಿವೆ. ರಾತ್ರಿ ಜಾಗರಣೆ ಉತ್ಸವ ನೆರವೇರಲಿದೆ.

ರಥ ಕಟ್ಟುವ ಕಾರ್ಯ: 21ರಂದು ಮಹಾರಥೋತ್ಸವ ನಡೆಯಲಿದ್ದು, ಅದಕ್ಕಾಗಿ ರಥ ಕಟ್ಟುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಬೇಡಗಂಪಣ ಅರ್ಚಕರು ಬುಧವಾರವೇ ಕೆಲಸ ಆರಂಭಿಸಿದ್ದರು. ಶಿವರಾತ್ರಿ ಜಾತ್ರೆಯ ಕೊನೆಯ ದಿನ ಬೆಳಿಗ್ಗೆ 8.30ರಿಂದ ಬೆಳಗ್ಗೆ 9.30ರ ನಡುವೆ ರಥೋತ್ಸವ ನಡೆಯಲಿದೆ.

ನೂತನ ದಾಸೋಹ ಕೊಠಡಿ: ಮಹದೇಶ್ವರಬೆಟ್ಟದ ದಾಸೋಹ ಭವನದ ಮೇಲ್ಭಾಗದಲ್ಲಿ ಮತ್ತೊಂದು ನೂತನವಾಗಿ ದಾಸೋಹ ಭವನ ಉದ್ಘಾಟನೆಯಾಗಿದೆ. ಇಲ್ಲಿ 700ಕ್ಕೂ ಹೆಚ್ಚು ಭಕ್ತರು ಒಟ್ಟಿಗೆ ಕುಳಿತು ಪ್ರಸಾದ ಸವಿಯುವ ಮಾಡುವ ವ್ಯವಸ್ಥೆ ಹೊಂದಿದೆ. ಇಲ್ಲಿ ಅಚ್ಚುಕಟ್ಟಾದ ಊಟದ ಮೇಜು, ಕುರ್ಚಿ ಹಾಗೂ ಅಗತ್ಯ ಪರಿಕರಗಳನ್ನು ಇದ್ದು ಭಕ್ತರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಶುಕ್ರವಾರ ಬೆಳಿಗ್ಗೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃಧ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಹಾಗೂ ಉಪಕಾರ್ಯದರ್ಶಿ ಬಸವರಾಜು ಸೇರದಂತೆ ಇನ್ನಿತರ ಅಧಿಕಾರಿಗಳು ಭಕ್ತರ ಸರತಿ ಸಾಲಿನಲ್ಲಿ ಕುಳಿತು ಪ್ರಸಾದ ಸೇವಿಸಿದರು.

6ಲಕ್ಷಕ್ಕೂ ಹೆಚ್ಚು ಲಾಡು: ಜಾತ್ರೆ ಸಮಯದಲ್ಲಿ ಭಕ್ತರಿಗೆ ನೀಡುವುದಕ್ಕಾಗಿ 6 ಲಕ್ಷಕ್ಕೂ ಹೆಚ್ಚು ಲಾಡುಗಳನ್ನು ತಯಾರಿಸಲಾಗಿದ್ದು, ಸಿಬ್ಬಂದಿ ಲಾಡು ತಯಾರಿಕೆಯನ್ನು ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.