ADVERTISEMENT

ಚಾಮರಾಜನಗರದಲ್ಲಿ ಈ ಬಾರಿ ಸರಳ ದಸರಾ

ಜಿಲ್ಲಾ ಉಸ್ತುವಾರಿ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:01 IST
Last Updated 27 ಸೆಪ್ಟೆಂಬರ್ 2020, 15:01 IST
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಅವರು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಅವರು ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಚಾಮರಾಜನಗರ: ಮೈಸೂರು ದಸರಾ ಅಂಗವಾಗಿ ಜಿಲ್ಲೆಯಲ್ಲೂ ಪ್ರತಿ ವರ್ಷ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವವನ್ನು ಈ ಬಾರಿಕೋವಿಡ್‌–19 ಕಾರಣಕ್ಕೆ ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ದಸರಾ ಆಚರಣೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್‌ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ಬಾರಿ ಮೈಸೂರಿನಲ್ಲಿಯೂ ಸಾಂಪ್ರದಾಯಿಕ ಹಾಗೂ ಸರಳ ದಸರಾ ಆಚರಣೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್ ಕಾರಣದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಹೀಗಾಗಿ ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಆಚರಿಸುವ ಕುರಿತು ಅಭಿಪ್ರಾಯ, ಸಲಹೆಗಳನ್ನು ನೀಡುವಂತೆ ಉಸ್ತುವಾರಿ ಸಚಿವರು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಸುರಕ್ಷಿತ ಅಂತರ, ಇನ್ನಿತರ ಕಾರಣಗಳಿಂದ ಈ ಹಿಂದಿನಂತೆ ಪೂಜೆ ಮತ್ತಿತರ ಸಾಂಪ್ರದಾಯಿಕ ಆಚರಣೆ ಮಾತ್ರ ಇರುವುದು ಒಳಿತು. ಆದರೆ ದೀಪಾಲಂಕಾರ ಮಾತ್ರ ಎಂದಿನಂತೆ ಇರಲಿ. ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಡ’ ಎಂದು ಸಲಹೆ ನೀಡಿದರು.

ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ, ‘ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಹೆಚ್ಚಿನ ಜನಸೇರುತ್ತಿದ್ದರು. ಈ ಬಾರಿ ಕೊರೊನಾ ಕಾರಣದಿಂದ ಜನಸಂದಣಿಗೆ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್‌ ಅವರು, ‘ಈ ವರ್ಷ ದಸರಾ ಆಚರಣೆಯನ್ನು ದೇವಾಲಯಕ್ಕೆ ಮಾತ್ರ ಸೀಮಿತ ಮಾಡುವುದು ಒಳ್ಳೆಯದು. 50ರಿಂದ 100 ಜನರನ್ನು ಒಳಗೊಂಡಂತೆ ಸಾಂಪ್ರದಾಯಿಕವಾಗಿ ದಸರಾ ಆಚರಣೆಯಾಗಲಿ’ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆನ್‌ಲೈನ್‌ ಮೂಲಕ ಮಾತನಾಡಿ, ‘ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚಳಿ ವಾವಾವರಣವೂ ಇರುವುದರಿಂದ ಐಎಲ್‌ಐ ಮತ್ತು ಸಾರಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಹೀಗಾಗಿ ಎಲ್ಲ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ. ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಆಚರಣೆ ಮಾಡಬೇಕಾಗುತ್ತದೆ. ದೀಪಾಲಂಕಾರ ಮಾಡಲು ಸಾರ್ವಜನಿಕರ ಸಹಕಾರ ಕೋರಬಹುದು’ ಎಂದರು.

ದಸರಾ ಆಚರಣೆ ಸಂಬಂದ ಎಲ್ಲರ ಅಭಿಪ್ರಾಯ, ಸಲಹೆ ಆಲಿಸಿದ ಉಸ್ತುವಾರಿ ಸಚಿವರಾದ ಎಸ್.ಸುರೇಶ್‌ಕುಮಾರ್‌ ಅವರು, ‘ಹೆಚ್ಚು ಜನರು ಪಾಲ್ಗೊಳ್ಳುವ ಕಾರ್ಯಕ್ರಮ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸೋಣ, ಕೊರೊನಾ ಮುಕ್ತವಾದ ನಂತರ ವೈಭವದಿಂದ ಮುಂದಿನ ಬಾರಿ ದಸರಾ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ’ ಎಂದರು.

‘ವರ್ಚ್ಯುವಲ್ ಮೂಲಕ ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಆವರಣದೊಳಗೆ ಹಮ್ಮಿಕೊಂಡು ಜನರಿಗೆ ತಲುಪಿಸಬಹುದೇ ಎಂಬ ಬಗ್ಗೆಯೂ ಚಿಂತನೆ ನಡೆಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು. ಮನೆ ಮನೆ ದಸರಾ ಮೂಲಕ ಬಹುಮಾನ, ಪ್ರಮಾಣ ಪತ್ರ ವಿತರಣೆ ಮಾಡಬಹುದೇ ಎಂಬ ಬಗ್ಗೆಯೂ ಚಿಂತಿಸಬಹುದು. ಆದರೆ ಇಲ್ಲಿ ದೀಪಾಲಂಕಾರ ಈ ಹಿಂದಿನಂತೆ ಇರಲಿ. ಎಲ್ಲರ ಅಭಿಪ್ರಾಯದಂತೆ ದಸರಾ ಸರಳ ಆಚರಣೆ ಇರಲಿ’ ಎಂದರು.

ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷ ಕೆ.ರವೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೋಯರ್‌ ಹರ್ಷಲ್‌ ನಾರಾಯಣ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬೊಡೊಲೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.