ADVERTISEMENT

ಕೋವಿಡ್‌ ಲಸಿಕೆ: ಸಚಿವರು ಬರುತ್ತಿದ್ದಂತೆಯೇ ಕಾಡಿಗೆ ಕಾಲ್ಕಿತ್ತ ಸೋಲಿಗರು

ಕೋವಿಡ್‌ ಲಸಿಕೆ ಪಡೆಯಲು ಹಿಂದೇಟು: ಸುರೇಶ್‌ಕುಮಾರ್‌, ಶಾಸಕರಿಗೆ ಪ್ರತ್ಯಕ್ಷ ಅನುಭವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:38 IST
Last Updated 18 ಜೂನ್ 2021, 17:38 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪುರಾಣಿ ಪೋಡಿನಲ್ಲಿ ಸೋಲಿಗ ಮಹಿಳೆಯೊಬ್ಬರೊಂದಿಗೆ ಮಾತನಾಡಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪುರಾಣಿ ಪೋಡಿನಲ್ಲಿ ಸೋಲಿಗ ಮಹಿಳೆಯೊಬ್ಬರೊಂದಿಗೆ ಮಾತನಾಡಿದರು   

ಯಳಂದೂರು: ಕೋವಿಡ್‌ ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಸೋಲಿಗರನ್ನು ಮನವೊಲಿಸಲು ಜಿಲ್ಲೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರಿಗೆ ಇನ್ನೂ ಅವರನ್ನು ಮನವೊಲಿಸಲು ಸಾಧ್ಯವಾಗಿಲ್ಲ. ಲಸಿಕೆ ಪಡೆಯಲು ಗಿರಿಜನರು ಹಿಂದೇಟು ಹಾಕುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ಪ್ರತ್ಯಕ್ಷ ಅನುಭವಕ್ಕೂ ಶುಕ್ರವಾರ ಬಂತು.

ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪುರಾಣಿ ಪೋಡಿನಲ್ಲಿ ಗಿರಿಜನರಿಗೆ ಸಚಿವರ ಸಮ್ಮುಖದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿತ್ತು. ಸಚಿವರು, ಶಾಸಕರು ಮತ್ತು ಪಂಚಾಯಿತಿ ಸದಸ್ಯರು ಬರುವಸುಳಿವು ದೊರಕುತ್ತಲೇ ಬಹುತೇಕ ಸೋಲಿಗರು ಕಾಡಿನತ್ತ ಕಾಲ್ಕಿತ್ತರು. ಇನ್ನೂ ಕೆಲವರು ಮನೆಯೊಳಗೇ ಕುಳಿತರು!

‘ಯಾಕೆ ಯಾರು ಕಾಣಿಸುತ್ತಿಲ್ಲವಲ್ಲ’ ಎಂದು ಕೇಳುವಾಗಲೆಲ್ಲ, ‘ಕೆ.ಗುಡಿಯಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದಾರೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದರು.

ADVERTISEMENT

ಇಡೀ ಹಾಡಿಯಲ್ಲಿ ಹೊರ ಭಾಗಗಳಿಂದ ತೆರಳಿದ್ದ ಅತಿಥಿಗಳೇ ಹೆಚ್ಚಾಗಿ ಕಂಡುಬಂದರು. ಲಸಿಕೆ ನೀಡಲು ವ್ಯವಸ್ಥೆ ಮಾಡಿದ್ದ ಆಶ್ರಮ ಶಾಲೆಯ ಕೊಠಡಿಯಲ್ಲಿ ಯಾರೂ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಲಿಲ್ಲ.ಇದರಿಂದ ಸಚಿವರು ಮತ್ತು ಶಾಸಕರು ಪೋಡುಗಳ ಸುತ್ತಮುತ್ತ ನಡೆದು ಜಾಗೃತಿ ಮೂಡಿಸಿದರು. ಗುಡಿಸಲುಗಳ ಬಳಿ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಿಕೊಂಡರು.

ಬಾಗಿಲಿಗೆ ಚಿಲಕ:ಸಚಿವರು ಮತ್ತು ಶಾಸಕರು ಖುದ್ದಾಗಿ ಗಿರಿಜನರ ಮನೆಗಳ ಬಳಿ ತೆರಳಿದರು. ಹಲವು ಜನರಿಗಾದರೂ ಲಸಿಕೆ ನೀಡಲು ಸಹಕರಿಸುವಂತೆ ಯಜಮಾನರು, ಮುಖಂಡರು ಮತ್ತು ಪಂಚಾಯಿತಿ
ಸದಸ್ಯರಲ್ಲಿ ಮನವಿ ಮಾಡಿದರು.

ನಂತರ ಕದ ಮುಚ್ಚಿದ್ದ ಮನೆಯೊಂದರ ಒಳಗೆ ಇಣುಕಿದರು. ಕುತೂಹಲದಿಂದ ಮನೆಯೊಳಗೆ ತೆರಳಿದಸಚಿವರು, ಅಲ್ಲಿ ಅಲಂಕೃತವಾಗಿದ್ದ ಚಾಮುಂಡೇಶ್ವರಿಅಮ್ಮನವರ ಬಗ್ಗೆ ಮಾಹಿತಿ ಪಡೆದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸೋಲಿಗ ಮಹಿಳೆಯೊಬ್ಬರು, ‘ಇವರನ್ನುಮನೆಯೊಳಗೆ ಬಿಟ್ಟವರು ಯಾರು? ದೇವರ ಗುಡಿಯೊಳಗೆ ಏಕೆ ಬಂದಿದ್ದಾರೆ’ ಎಂದು ಕೂಗಿದರು.ನಂತರ ಗಿರಿಜನ ಮುಖಂಡರು ಆಕೆಯನ್ನು ಸಮಾಧಾನ ಪಡಿಸಿ, ಸಚಿವರಿಗೆಅಲ್ಲಿನ ಪದ್ಧತಿ, ಬುಡಕಟ್ಟು ಕಟ್ಟುಪಾಡುಗಳ ಬಗ್ಗೆ ತಿಳಿಸಿಕೊಟ್ಟರು.

ಏಳು ಮಂದಿಗೆ ಮಾತ್ರ ಲಸಿಕೆ!

ಪೋಡಿನ 140ಕ್ಕೂ ಹೆಚ್ಚಿನ ಜನರ ಪೈಕಿ 7 ಮಂದಿಗೆ ಮಾತ್ರ ಲಸಿಕೆ ನೀಡಲಾಯಿತು.

‘ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ಮತ್ತು ಸದಸ್ಯರು ಇನ್ನೂ ಲಸಿಕೆ ಪಡೆದಿಲ್ಲ. ಇವರುನಮ್ಮನ್ನು ಮಾತ್ರ ಚುಚ್ಚುಮದ್ದು ಪಡೆಯುವಂತೆ ಒತ್ತಾಯಿಸುತ್ತಾರೆ. ಈಗಾಗಲೇ, ಲಸಿಕೆಪಡೆದವರೊಬ್ಬರಿಗೆ ಕಣ್ಣು ಮಂಜಾಗಿದೆ. ಇದರಿಂದ ನಮಗೂ ತೊಂದರೆ ಕಾಡಬಹುದು. ಹಾಗಾಗಿನಾವು ಲಸಿಕೆ ಪಡೆದಿಲ್ಲ’ ಎಂದು ಸ್ಥಳೀಯರಾದ ಬಸವ ಆತಂಕ ವ್ಯಕ್ತಪಡಿಸಿದರು.

‘ಪಲ್ಸ್ ಪೋಲಿಯೊದಂತೆ ಇದು ಕೂಡ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚುಚ್ಚುಮದ್ದು. ಜಮೀನಿನ ಸುತ್ತ ಬೇಲಿ ಹಾಕಿ, ಇತರರು ಬರದಂತೆ ಬೆಳೆ ರಕ್ಷಿಸುವಂತೆ, ಕೋವಿಡ್ ಲಸಿಕೆ ಪಡೆದ ದೇಹಕ್ಕೆ ರೋಗಾಣು ತಗಲದು’ ಎಂದು ಗಿರಿವಾಸಿಗಳಿಗೆ ಸಚಿವರು ಮನವೊಲಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.