ಗುಂಡ್ಲುಪೇಟೆ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಸ್ಕಂದಗಿರಿ ಕ್ಷೇತ್ರದಲ್ಲಿ ಕಂದೇಗಾಲದ ಪಾರ್ವತಾಂಬ ಸಮೇತ ಸೋಮೇಶ್ವರಸ್ವಾಮಿ ರಥೋತ್ಸವ ಬುದ್ಧ ಪೂರ್ಣಿಮಾ ದಿನವಾದ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಹಿನ್ನೆಲೆಯಲ್ಲಿ ಪಾರ್ವತಾಂಬ ಮತ್ತು ಸೋಮೇಶ್ವರ ದೇವಾಲಯ ಸಮಚ್ಛಯಕ್ಕೆ ಸುಣ್ಣ, ಬಣ್ಣ ಬಳಿದು ಶೃಂಗರಿಸಲಾಗಿತ್ತು. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯದಲ್ಲಿ ಮೇ10ರಿಂದಲೇ ಶೈವಾಗಮ ಶಾಸ್ತ್ರರೀತ್ಯಾ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ತೀರ್ಥ, ಮೃತ್ತಿಕಾ ಸಂಗ್ರಹ, ವಾಸ್ತುಯಜನ ವರಗ್ನಿಕರಣ, ಅಂಕುರಾರ್ಪಣೆ ಮಹಾಪೂಜೆ, ದೀಪಾರಾಧನೆ, ಗಣಪತಿಪೂಜೆ ಪುಣ್ಯಾಹ ಕಳಸ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ತಾಲ್ಲೂಕು ಮತ್ತು ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸೋಮವಾರ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಗಳ ನಂತರ ಪಾರ್ವತಾಂಬ ಸಮೇತ ಸೋಮೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ಮಂಗಳವಾದ್ಯ, ಸತ್ತಿಗೆ, ಸುರಪಾನಿ ಇತರೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಲಾಯಿತು.
ಮಧ್ಯಾಹ್ನ 12.20ಕ್ಕೆ ಅಭಿಜಿನ್ ಮುಹೂರ್ತದಲ್ಲಿ ಅರ್ಚಕರು ಮಹಾ ಮಂಗಳಾರತಿ ನೆರವೇರಿಸಿದರು. ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಮತ್ತು ತಹಶೀಲ್ದಾರ್ ಟಿ.ರಮೇಶ್‍ಬಾಬು ಪೂಜೆ ಸಲ್ಲಿಸಿದರು. ನಂತರ ಭಕ್ತರು ಜೈಕಾರದ ಘೋಷಣೆಗಳೊಂದಿಗೆ ರಥವನ್ನು ಮುಂದೆ ಎಳೆದು ಸಾಗಿದರು. ದೇವಾಲಯದ ರಸ್ತೆಯಲ್ಲಿ ರಥೋತ್ಸವ ಕೊನೆಗೊಂಡಿತು.
ಸೂಕ್ತ ಬಂದೋಬಸ್ತ್: ರಥೋತ್ಸವಕ್ಕೆ ತಾಲ್ಲೂಕಿನ ನಾನಾ ಕಡೆಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಪಟ್ಟಣದ ಸಾರಿಗೆ ಸಂಸ್ಥೆ ಬಸ್ ಘಟಕದ ವತಿಯಿಂದ ವಿಶೇಷ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.