ADVERTISEMENT

ಗುಂಡ್ಲುಪೇಟೆ: ಪ್ರಥಮ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 15:27 IST
Last Updated 18 ಮಾರ್ಚ್ 2025, 15:27 IST
ಗುಂಡ್ಲುಪೇಟೆ ಪಟ್ಟಣದ ನಿರ್ಮಾಲ ಕಾನ್ವೆಂಟ್ ನಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು.
ಗುಂಡ್ಲುಪೇಟೆ ಪಟ್ಟಣದ ನಿರ್ಮಾಲ ಕಾನ್ವೆಂಟ್ ನಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು.   

ಗುಂಡ್ಲುಪೇಟೆ: ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಗುಂಡ್ಲುಪೇಟೆ ತಾಲ್ಲೂಕು ಈ ವರ್ಷವೂ ಮೊದಲನೇ ಸ್ಥಾನ ಪಡೆಯಲು ಶಿಕ್ಷಣ ಇಲಾಖೆಯಲ್ಲಿ ತೀವ್ರ ಪ್ರಯತ್ನ ನಡೆಯುತ್ತಿದೆ. 

 2023-2024ರಲ್ಲಿ ತಾಲ್ಲೂಕಿನ ಸ್ಥಿತಿ ಹೇಳುವಂತಿರಲಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಅವರ ಪರಿಶ್ರಮ ಮತ್ತು ಕಾಳಜಿಯಿಂದ ಮೊದನೇ ಸ್ಥಾನ ಪಡೆದಿತ್ತು.

‘ಕಳೆದ ಸಾಲಿನಲ್ಲಿ ಎಸ್‌‌‌‌ಎಸ್‌‌‌ಎಲ್‌‌‌ಸಿ ಫಲಿತಾಂಶಕ್ಕಾಗಿ ಕೈಗೊಂಡ ನಿರಂತರ ಚಟುವಟಿಕೆಗಳು, ಶಿಕ್ಷಕರ ತರಬೇತಿ, ಅಭ್ಯಾಸ ಸ್ಪೂರ್ತಿ ಕಾರ್ಯಕ್ರಮ, ಫಲಿತಾಂಶ ವಿಶ್ಲೇಷಣೆ, ಸರಿಪಡಿಸುವಿಕೆ, ಮನೆ ಭೇಟಿ ಕಾಲಕಾಲಕ್ಕೆ ವಿಷಯ ಬೋಧಕರಿಗೆ ತರಬೇತಿ ಸೇರಿ ಹತ್ತು ಹಲವು ವಿಭಿನ್ನ ಪ್ರಯತ್ನಗಳ ಫಲವಾಗಿ ಕಳೆದ ಬಾರಿ ಎಸ್‌‌‌‌ಎಸ್‌‌‌ಎಲ್‌‌‌ಸಿ ಫಲಿತಾಂಶ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಲು ಸಾಧ್ಯವಾಯಿತು’ ಎಂದು ಶಿಕ್ಷಕರೊಬ್ಬರು ಅಭಿಪ್ರಾಯ ಪಟ್ಟರು.

ADVERTISEMENT

ಪ್ರಸಕ್ತ ಸಾಲಿನಲ್ಲಿಯೂ ಅದೇ ಸ್ಥಾನ ಉಳಿಸಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅವರ ತಂಡ ವರ್ಷದ ಪ್ರಾರಂಭದಿಂದಲೇ ಸಮಾಲೋಚನಾ ಸಭೆಗಳು, ಪ್ರತಿ ಹಂತದಲ್ಲೂ ವಿದ್ಯಾರ್ಥಿಯ ಕಲಿಕೆಯ ವಿಶ್ಲೇಷಣೆ, ಪರಿಹಾರಾತ್ಮಕ ಬೋಧನೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರಿಂದ ಪ್ರತಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಮನೆಗಳಿಗೆ ರಾತ್ರಿ ಭೇಟಿ, ಹಾಸ್ಟೆಲ್‌‌‌ಗಳಿಗೆ ಭೇಟಿ ನೀಡಿ ಅವರ ಕಲಿಕಾ ಪ್ರಕ್ರಿಯೆಯ ಮಾಹಿತಿ ಸಲಹೆ ಸೂಚನೆ ನೀಡಲಾಗುತ್ತಿದೆ.

‘ಪ್ರತಿ ಪರೀಕ್ಷೆಯ, ಪ್ರತಿ ವಿಷಯದ ಫಲಿತಾಂಶ ವಿಶ್ಲೇಷಣೆ ಮಾಡಿ ಫಲಿತಾಂಶ ಗಟ್ಟಿಗೊಳಿಸಿ ಈ ಬಾರಿಯ ಫಲಿತಾಂಶದಲ್ಲಿ ಮೊದಲ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಸ್ವಾಮಿ ತಿಳಿಸಿದರು.

ಎಲ್ಲಾ ಶಾಲೆಗಳಲ್ಲಿ ರಾತ್ರಿ ತರಗತಿ: ಪ್ರಿಪರೇಟರಿ ಮತ್ತು ಜಿಲ್ಲಾ ಮಟ್ಟದ ಪರೀಕ್ಷೆಗಳಲ್ಲಿ ಹಿಂದುಳಿದ ಮತ್ತು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅಬ್ಯಾಸ ಮಾಡಿಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ವಿಶೇಷ ತರಗತಿ ಮಾಡಲಾಗಿದೆ.

499 ವಿದ್ಯಾರ್ಥಿಗಳು ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿಸಲಾಗುತ್ತಿದೆ.

‘ಶಾಲೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ಕಡಿಮೆ ಅಂಕ ತೆಗೆಯುತ್ತಿರುವ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸಾಧನೆ ಇರುವ ವಿಷಯಗಳನ್ನು ಕಲಿಸಲಾಗುತ್ತಿದೆ’ ಎಂದರು.

ತಾಲ್ಲೂಕಿನಲ್ಲಿ ಒಟ್ಟು 50 ಶಾಲೆಗಳಿದ್ದು, 19 ಸರ್ಕಾರಿ, 14 ಅನುದಾನಿತ, 09 ಖಾಸಗಿ ಶಾಲೆಗಳಿವೆ. 6 ಮೊರಾರ್ಜಿ ದೇಸಾಯಿ, 1 ಆದರ್ಶ ವಿದ್ಯಾಲಯಗಳಲ್ಲಿ ಒಟ್ಟು 2380 ವಿದ್ಯಾರ್ಥಿಗಳು ಮತ್ತು 219 ವಿದ್ಯಾರ್ಥಿಗಳು ಮರು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಒಟ್ಟು 2559 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು ಹತ್ತು ಪರೀಕ್ಷಾ ಕೇಂದ್ರಗಳು ಇದೆ.

‘ಕೆಲವು ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಪರೀಕ್ಷಾ ದೃಷ್ಟಿಯಿಂದ, ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಪ್ರಥಮ ಸ್ಥಾನ ಕಾಯ್ದುಕೊಳ್ಳಲು ತಾಲ್ಲೂಕಿನ ಪ್ರತಿಯೊಬ್ಬ ಶಿಕ್ಷಕರು ಶ್ರಮವಹಿಸಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಸ್ವಾಮಿ ಹೇಳುತ್ತಾರೆ.

ಖಾಸಗಿ, ಅನುದಾನಿತ ಎಲ್ಲಾ ಸೇರಿ ತಾಲ್ಲೂಕಿನಲ್ಲಿ ಒಟ್ಟು 50 ಶಾಲೆಗಳು ಒಟ್ಟು 2559 ಎಸ್‌‌‌‌ಎಸ್‌‌‌ಎಲ್‌‌‌ಸಿ ವಿದ್ಯಾರ್ಥಿಗಳು ಇವರಲ್ಲಿ ಮರು ಪರೀಕ್ಷೆ ಬರೆಯುವವರು 219 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.