ADVERTISEMENT

ವಸತಿಗೃಹ ಹಸ್ತಾಂತರ ಬೇಡ: ಒತ್ತಾಯ

ಬಂಡೀಪುರ: ನಿರ್ವಹಣೆ ಹೊಣೆ ಜೆಎಲ್‌ಆರ್‌ಗೆ ಪ್ರಸ್ತಾವ ಇಲ್ಲ– ಹುಲಿ ಯೋಜನೆ ನಿರ್ದೇಶಕರ ಸ್ಪಷ್ಟನೆ

ಮಲ್ಲೇಶ ಎಂ.
Published 26 ಆಗಸ್ಟ್ 2019, 20:00 IST
Last Updated 26 ಆಗಸ್ಟ್ 2019, 20:00 IST
ಬಾಲಚಂದ್ರ
ಬಾಲಚಂದ್ರ   

ಗುಂಡ್ಲುಪೇಟೆ: ಬಂಡೀಪುರದಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹಗಳನ್ನು ಯಾವುದೇ ಕಾರಣಕ್ಕೂ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ಗೆ (ಜೆಎಲ್‌ಆರ್‌) ಹಸ್ತಾಂತರಿಸಬಾರದು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ವಸತಿಗೃಹಗಳ ನಿರ್ವಹಣೆಯನ್ನು ಹಸ್ತಾಂತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ನಿರಾಕರಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿರುವ ಅವರು, ‘ಅಂತಹ ಯಾವುದೇ ಯೋಚನೆ ಇಲ್ಲ. ಪ್ರಕ್ರಿಯೆಯೂ ನಡೆಯುತ್ತಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಪರಿಸರವಾದಿಗಳ ವಿರೋಧ:ಬಂಡೀಪುರದಲ್ಲಿ ಪ್ರವಾಸಿಗರ ಚಟುವಟಿಕೆ ಹೆಚ್ಚಾಗಿ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂಬ ಉದ್ದೇಶದಿಂದ ಅಲ್ಲಿದ್ದ ಸಫಾರಿ ಕೌಂಟರ್‌ ಅನ್ನು ಕಾಡಿನಿಂದ ಹೊರಗಡೆ ಇರುವ ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಲಾಗಿತ್ತು. ಸದ್ಯಕ್ಕೆ ವಸತಿಗೃಹಗಳಿಗೆ ಬರುವ‌ಪ್ರವಾಸಿಗರಿಗೆ ಮಾತ್ರ ಅಲ್ಲಿ ಅವಕಾಶ ಇದೆ.

ಒಂದು ವೇಳೆ,ವಸತಿಗೃಹಗಳನ್ನು ಜೆಎಲ್‌ಆರ್‌ಗೆ ವಹಿಸಿದರೆ, ಬಂಡೀಪುರದಲ್ಲಿ ಚಟುವಟಿಕೆಗಳು ಇನ್ನಷ್ಟು ಹೆಚ್ಚಾಗುತ್ತದೆ. ರೆಸಾರ್ಟ್‌ ಬರುವವರಿಗೆ ಆಹಾರ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಆಗ ಕಾಡಿನೊಳಗೇ ರೆಸಾರ್ಟ್‌ ಮಾಡಿದಂತೆ ಆಗುತ್ತದೆ. ರೆಸಾರ್ಟ್‌ಗೆ ಹೆಚ್ಚು ಜನರು ಬಂದಂತೆಲ್ಲ,ಪ್ರಾಣಿಗಳ ಸ್ವಚ್ಛಂದ ಜೀವನಕ್ಕೆ ಅಡ್ಡಿಯಾಗುತ್ತದೆ ಎಂಬುದು ಪರಿಸರವಾದಿಗಳ ವಾದ.

ಜನರ ಕೈಗೆಟುಕದು: ಬಂಡೀಪುರದಲ್ಲಿ 11 ವಸತಿಗೃಹಗಳಿವೆ. 9, 10 ಮತ್ತು 20 ಹಾಸಿಗೆ ಸಾಮರ್ಥ್ಯಗಳ ಡಾರ್ಮೆಟರಿಗಳೂ ಇವೆ. ವಸತಿಗೃಹಗಳಿಗೆ ಇಬ್ಬರಿಗೆ ದಿನಕ್ಕೆ ₹2,300 ಶುಲ್ಕ ಇದೆ. ಡಾರ್ಮೆಟರಿಗೆ ₹4,000, ₹4,500 ಮತ್ತು ₹9,000 ಶುಲ್ಕ ಇದೆ.

‘ಈಗಿನ ದರಗಳು ಮಧ್ಯಮ ವರ್ಗದವರ ಕೈಗೆಟುಕುವಂತೆ ಇದೆ. ಜೆಎಲ್‌ಆರ್‌ಗೆ ವಹಿಸಿದ ತಕ್ಷಣ ಶುಲ್ಕ ಹೆಚ್ಚಳ ಆಗಿಯೇ ಆಗುತ್ತದೆ. ಜೆಎಲ್‌ಆರ್‌ ನಿರ್ವಹಿಸುತ್ತಿರುವ ರೆಸಾರ್ಟ್‌ಗಳಲ್ಲಿ ಈಗ ಒಬ್ಬರಿಗೆ ದಿನಕ್ಕೆ ₹9,000 ದರ ಇದೆ. ಈ ಶುಲ್ಕವನ್ನು ಮಧ್ಯಮ ವರ್ಗದವರಿಗೆ ಭರಿಸಲು ಸಾಧ್ಯವೇ ಇಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

‘ವಸತಿ ಗೃಹಗಳ ಜವಾಬ್ದಾರಿಯನ್ನು ಜಂಗಲ್‌ ಲಾಡ್ಜಸ್‌ ಹಾಗೂ ರೆಸಾರ್ಟ್ಸ್‌ಗೆ ವಹಿಸುವುದಾದರೆ ಸಫಾರಿ ಕೌಂಟರ್ ಸ್ಥಳಾಂತರ ಮಾಡಬೇಕಾದ ಅವಶ್ಯಕತೆ ಇರಲಿಲ್ಲ. ಬಂಡೀಪುರದಲ್ಲಿ ಯಾವುದೇ ಚಟುವಟಿಕೆಗಳು ನಡೆಯಬಾರದು ಎಂದು ಸ್ಥಳಾಂತರ ಮಾಡಲಾಗಿತ್ತು’ ಎಂದು ರೈತ ಮುಖಂಡ ಹಂಗಳ ಮಹದೇವಪ್ಪ ಹೇಳಿದರು.

‘ವಸತಿ ಗೃಹಗಳನ್ನು ಜೆಎಲ್‌ಆರ್‌ಗೆ ವಹಿಸುವುದರಿಂದ ಜನಸಾಮಾನ್ಯರಿಗೆ ಅವು ದೊರಕುವುದಿಲ್ಲ. ಸಿರಿವಂತರು ಮೋಜಿಗಾಗಿ ಬರುತ್ತಾರೆಯೇ ವಿನಾ ಕಾಡಿನ ಮೇಲಿರುವ ಪ್ರೀತಿಯಿಂದಲ್ಲ’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್‌.ಕೆ.ಮಧು ಹೇಳಿದರು.

‘ಅರಣ್ಯದೊಳಗೆ ರೆಸಾರ್ಟ್‌ ಸರಿಯಲ್ಲ’

‘ಬಿಳಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ (ಬಿಆರ್‌ಟಿ) ಜಿಎಲ್‌ಆರ್‌ ವಸತಿ ಗೃಹಗಳನ್ನು ಅರಣ್ಯದ ಹೊರಗಡೆ ತರಬೇಕು ಎಂಬ ಹೋರಾಟ ನಡೆಯುತ್ತಿರುವ ಸಮಯದಲ್ಲಿ ಮತ್ತೆ ಅರಣ್ಯದೊಳಗೆ ರೆಸಾರ್ಟ್‌ಗೆ ಅವಕಾಶ ಮಾಡಿಕೊಡಬಾರದು’ ಎಂದು ವನ್ಯಜೀವಿಛಾಯಾಗ್ರಾಹಕ ವಿಷ್ಣು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.