ADVERTISEMENT

ಹನೂರು | ಹಳ್ಳಕ್ಕಿಲ್ಲ ಸೇತುವೆ: ಮಕ್ಕಳು, ಗ್ರಾಮಸ್ಥರ ಪರದಾಟ

ಕೆವಿಎನ್ ದೊಡ್ಡಿ: ಶಾಲೆಯಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ದಾಖಲಾತಿ, ಸಾರಿಗೆ ವ್ಯವಸ್ಥೆಯೂ ಇಲ್ಲ

ಬಿ.ಬಸವರಾಜು
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಳ್ಳ ದಾಟಿಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಳ್ಳ ದಾಟಿಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ   

ಹನೂರು: ತಾಲ್ಲೂಕಿನಎಲ್ಲೆಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಸೇತುವೆಗಳಲ್ಲಿ ನೀರು ಹರಿಯುತ್ತಿರುವುದರಿಂದ ರೈತರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಉಡುತೊರೆ ಹಳ್ಳದಿಂದ ಆವೃತವಾಗಿದೆ. ಈ ಗ್ರಾಮಕ್ಕೆ ಯಾವ ಕಡೆಯಿಂದ ಬಂದರೂ ಹಳ್ಳ ದಾಟಿ ಕೊಂಡೇ ಬರಬೇಕು. ಮಳೆ ಬಂದರೆ ಅಥವಾ ಉಡುತೊರೆ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟಾಗ ಗ್ರಾಮದ ಸುತ್ತಲೂ ಇರುವ ಹಳ್ಳಗಳು ತುಂಬಿ ಹರಿಯುತ್ತವೆ. ಹಳ್ಳಕ್ಕೆ ಸೇತುವೆ ಗಳಿಲ್ಲ. ಹೀಗಾಗಿ ಗ್ರಾಮದ ಜನರು ಯಾವ ಕಡೆಯೂ ಹೋಗಲು ಸಾಧ್ಯವಾಗದಂತಾಗುತ್ತದೆ.

ಸಾರಿಗೆ ವ್ಯವಸ್ಥೆಯಿಲ್ಲ: ಗ್ರಾಮಕ್ಕೆ ಸಾರಿಗೆ ಬಸ್‌ ಆಗಲಿ, ಖಾಸಗಿ ಬಸ್‌ ಆಗಲಿ ಬರುವುದಿಲ್ಲ. ಇಲ್ಲಿನ ಜನರು ದುಪ್ಪಟ್ಟು ಹಣ ನೀಡಿ ಆಟೊಗಳಲ್ಲಿ ತಮ್ಮ ಗ್ರಾಮಗಳಿಗೆ ಬರಬೇಕಿದೆ. ತುರ್ತು ಸಂದರ್ಭ ಹಾಗೂ ರಾತ್ರಿ ವೇಳೆಯಲ್ಲಂತೂ ಖಾಸಗಿ ವಾಹನಗಳ ಮಾಲೀಕರನ್ನು ಕಾಡಿ ಬೇಡಿ ಕರೆದುಕೊಂಡು ಹೋಗಬೇಕಾಗುತ್ತದೆ.

ADVERTISEMENT

‘ನಮ್ಮ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾಗಿದೆ. ಅವರ ಮನಕರಗಲು ನಾವು ಇನ್ನೂ ಎಷ್ಟು ದಿನ ಇದೇ ಸ್ಥಿತಿಯಲ್ಲಿ ಬದುಕಬೇಕೋ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಶಾಲೆಯಲ್ಲಿ ಕುಸಿದ ದಾಖಲಾತಿ: ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ತೋಟದ ಮನೆಗಳಲ್ಲಿ ವಾಸವಾಗಿವೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿಗಳಿದ್ದು, ಪ್ರಸ್ತುತ 62 ಮಕ್ಕಳು ಕಲಿಯುತ್ತಿದ್ದಾರೆ. ಈ ಪೈಕಿ 40ಕ್ಕೂ ಹೆಚ್ಚು ಮಕ್ಕಳು ತೋಟದ ಮನೆಗಳಿಂದ ಬರುತ್ತಿದ್ದಾರೆ.

ಮಕ್ಕಳು ಹಳ್ಳ ದಾಟಿಕೊಂಡು ಬರಬೇಕು. ನೀರಿನ ಪ್ರಮಾಣ ಕಡಿಮೆಯಾದಾಗ ಸಮಸ್ಯೆಯಿಲ್ಲ. ಆದರೆ, ಮಳೆ ಅಥವಾ ಜಲಾಶಯದಿಂದ ಹೆಚ್ಚು ನೀರು ಬಿಟ್ಟರೆ ಹಳ್ಳ ತುಂಬಿ ಹರಿಯುತ್ತದೆ. ನಾವು ಹೇಗೆ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಎಂಬುದು ಪೋಷಕರ ಪ್ರಶ್ನೆ.

‘ಮೂರು ವರ್ಷಗಳ ಹಿಂದೆ ಶಾಲೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳಿದ್ದರು. ಆದರೆ, ಹಳ್ಳದ ಸಮಸ್ಯೆಯಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಾರಿ 15 ಮಕ್ಕಳು ವರ್ಗಾವಣೆ ಪತ್ರ ಪಡೆದು ಬೇರೆ ಕಡೆ ದಾಖಲಾಗಿದ್ದಾರೆ. ಹೀಗಾದರೆ ನಮ್ಮೂರಲ್ಲಿ ಸರ್ಕಾರಿ ಶಾಲೆ ಉಳಿಯುವುದಾದರೂ ಹೇಗೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರುಗೇಶ್ ಪ್ರಶ್ನಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಆನಂದಯ್ಯ, ‘ಕೆವಿಎನ್ ದೊಡ್ಡಿ ಗ್ರಾಮದಲ್ಲಿ ರಸ್ತೆ, ಸಾರಿಗೆ ಹಾಗೂ ಸೇತುವೆ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದರೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮವಹಿಸುವಂತೆ ಸೂಚಿಸಲಾಗುವುದು’ ಎಂದರು.

ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ವಾಹನಗಳೂ ಬರುತ್ತಿಲ್ಲ. ಗ್ರಾಮದ ಸುತ್ತಲಿರುವ ಹಳ್ಳ ತುಂಬಿ ಹರಿಯುವುದರಿಂದ ಗ್ರಾಮ ಜಲ ದಿಗ್ಬಂಧನಕ್ಕೆ ಒಳಗಾದಂತೆ ಆಗುತ್ತದೆ.

‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಸಾಕಷ್ಟು ವರ್ಷಗಳಿಂದಲೂ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಸರ್ಕಾರ ನಮಗೆ ಸೌಲಭ್ಯ ಕೊಡದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಗ್ರಾಮದ ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.