
ಯಳಂದೂರು: ಕನ್ನಡ ಭಾಷಾ ಪರೀಕ್ಷಗೆ ಹೆಚ್ಚು ಸಮಯ ನಿಗದಿಪಡಿಸಿ. ಇತಿಹಾಸದಲ್ಲಿ ಯುದ್ದ, ಒಪ್ಪಂದ ಹಾಗೂ ಬಜೆಟ್ ಪಾಠಗಳನ್ನು ನೆನಪಿಟ್ಟುಕೊಳ್ಳುವ ಕೌಶಲ ತಿಳಿಸಿ, ಗಣಿತ ವಿಷಯದಲ್ಲಿ ಸೂತ್ರಗಳನ್ನು ಬರೆಯಬೇಕೆ? ಹಿಂದಿ, ಇಂಗ್ಲಿಷ್ ಪಠ್ಯವನ್ನು ಇನ್ನೂ ಸರಳಗೊಳಿಸಿ…’
ಹೀಗೆ 10ನೇ ತರಗತಿ ಮಕ್ಕಳು ಹತ್ತಾರು ಪ್ರಶ್ನೆಗಳನ್ನು ಕೇಳಿ ಸಂಪನ್ಮೂಲ ಶಿಕ್ಷಕರಿಗೆ ಶಾಕ್ ನೀಡಿದರು.
ಹೌದು. ಇದು ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಞಾ ಭಯ ನಿವಾರಣೆ ಮತ್ತು ಸುಲಭ ಅಂಕಗಳಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೋರ್ ಮತ್ತು ಭಾಷಾ ವಿಷಯ ಸಂಪನ್ಮೂಲ ಬೋಧಕರಿಗೆ ಪೋನ್ ಮಾಡಿ ಪರೀಕ್ಷಾ ಭಯ ನಿವಾರಿಸಿಕೊಂಡರು.
‘ಮಾ.18ರಿಂದ ಪರೀಕ್ಷೆ ಆರಂಭವಾಗುತ್ತಿದ್ದು, 42 ದಿನಗಳು ಬಾಕಿ ಇದೆ. ಈ ಸಮಯದಲ್ಲಿ ಪ್ರತಿ ವಿಷಯದಲ್ಲೂ ಪ್ರತಿ ದಿನ 2 ಅಂಕಗಳಿಕೆಗೆ ಒತ್ತು ನೀಡಿದರೆ, ಹೆಚ್ಚು ಅಂಕಗಳಿಸಬಹುದು. ಶಿಕ್ಷಣ ತಜ್ಞರು ಮಕ್ಕಳ ಬರವಣಿಗೆಗೆ ಸಮಯ ನಿಗದಿಪಡಿಸಿದ್ದು, ಇದಕ್ಕೆ ಅನುಗುಣವಾಗಿ ಕಠಿಣ, ಸಾಧಾರಣ ಹಾಗೂ ಸುಲಭ ಪ್ರಶ್ನೆಗಳಿಗೆ ಉತ್ತರಿಸಬೇಕು. ಆತಂಕವನ್ನು ಬಿಟ್ಟು ಬರವಣಿಗೆ, ಸ್ಮರಣೆ ಹಾಗೂ ಚರ್ಚಾ ಪದ್ಧತಿ ಮೂಲಕ ಮಕ್ಕಳು ವಿಷಯ ಅರ್ಥೈಸಿಕೊಂಡರೆ ಹೆಚ್ಚು ಪ್ರಯೋಜನಕಾರಿ’ ಎಂದು ಬಿಆರ್‌ಸಿ ಕುಮಾರಿ ಉತ್ತರಿಸಿದರು.
ಕನ್ನಡ ಭಾಷಾ ಪ್ರಶ್ನ ಪತ್ರಿಕೆ 100 ಅಂಕ, ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಗಣಿತ ಪತ್ರಿಕೆಗಳಿಗೆ 80 ಅಂಕಗಳನ್ನು ನಿಗದಿಪಡಿಸಿದ್ದು, ಇವುಗಳ ಸಮಯದ ಮಿತಿ 4 ಪತ್ರಿಕೆಗಳಿಗೂ ಒಂದೇ ಆಗಿದೆ ಎಂದು ಮಕ್ಕಳು ಪ್ರಶ್ನಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದರು.
‘ಸಮಾಜ ವಿಜ್ಞಾನ ವಿಷಯದ 6 ಭಾಗಗಳಿಂದ 33 ಪಾಠಗಳಿವೆ. ಇತಿಹಾಸ ಮತ್ತು ಭೂಗೋಳ ಶಾಸ್ತ್ರ ಪಾಠಗಳಲ್ಲಿ ಹೆಚ್ಚು ಅಂಕಗಳನ್ನು ನಿಗದಿಪಡಿಸಿದ್ದು, ಉಳಿದ ಭಾಗಗಳನ್ನು ನೀಲ ನಕ್ಷೆಯನ್ನು ಬಳಸಿಕೊಂಡು ಅಧ್ಯಯನ ಮಾಡಿದರೆ ಕಲಿಕೆ ಸುಲಭವಾಗುತ್ತದೆ. 3 ಮತ್ತು 4 ಅಂಕದ ಪ್ರಶ್ನೆಗಳನ್ನು ಗುರುತಿಸಿಕೊಂಡು ಅಧ್ಯಯನ ಮಾಡಿದ್ದಲ್ಲಿ ಶೇ 100 ಫಲಿತಾಂಶ ದಾಖಲಿಸಬಹುದು’ ಎಂದು ಶಿಕ್ಷಕರು ಹೇಳಿದರು.
ಸಂಪನ್ಮೂಲ ಶಿಕ್ಷಕರಾದ ಶಿವಕುಮಾರಸ್ವಾಮಿ, ನಾಗರತ್ನ, ಲಕ್ಷ್ಮಿ, ನಂದೀಶ್, ಆಶಾ, ರತ್ನಮ್ಮ ನಂಜುಂಡಸ್ವಾಮಿ ಹಾಗೂ ವೆಂಕಟಾಚಲ ಇದ್ದರು.
ಕಲಿಕೆಯಲ್ಲಿ ಹಿಂದುಳಿದವರಿಗೆ ಗುರಿ
40+ 2025-26ನೇ ಸಾಲಿನ ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ ರೂಪಿಸಿದ್ದು ನಿಧಾನಗತಿ ಕಲಿಕಾರ್ಥಿಗಾಗಿ‘ಗುರಿ 40+’ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಸಂಪನ್ಮೂಲ ಶಿಕ್ಷಕರ ತರಬೇತಿ ಸಾಹಿತ್ಯದ ಜೊತೆಗೆ ಮಕ್ಕಳ ಕಲಿಕೆ ಮತ್ತು ಉತ್ತೀರ್ಣ ಸುಲಭಗೊಳಿಸಲು ನೀಲನಕ್ಷೆ ಅನುಸಾರ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪ್ರತಿ ವಿಷಯದಲ್ಲೂ ಸಂಭಾವ್ಯ 4 ಪ್ರಶ್ನೆ ಪತ್ರಿಕೆ ನೀಡಿದ್ದು 3 ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿ ಹೆಚ್ಚು ಅಂಕಗಳಿಸಬಹುದು’ ಎಂದು ಇಸಿಒ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.