ADVERTISEMENT

ಸೂಲಂಗಿ ಬಿಟ್ಟ ಕಬ್ಬು: ಇಳುವರಿ ಕುಸಿತ ಆತಂಕ

ಕಬ್ಬು ಬೆಳೆಗಾರರಿಗೆ ಮುಳ್ಳು ಹಂದಿ ಹಾಗೂ ವಿದ್ಯುತ್ ಶಾರ್ಟ್ ಸರ್ಕೀಟ್ ಭೀತಿ

ನಾ.ಮಂಜುನಾಥ ಸ್ವಾಮಿ
Published 21 ನವೆಂಬರ್ 2025, 5:06 IST
Last Updated 21 ನವೆಂಬರ್ 2025, 5:06 IST
<div class="paragraphs"><p>ಯಳಂದೂರು ತಾಲ್ಲೂಕಿನ ಕಂದಹಳ್ಳಿ ಹೊರವಲಯದ ಗದ್ದೆಯಲ್ಲಿ ಹೂಅರಳಿಸಿದ ಕಬ್ಬು ವಿದ್ಯುತ್ ತಂತಿ ಸ್ಪರ್ಶಿಸುತ್ತಿರುವುದು</p></div>

ಯಳಂದೂರು ತಾಲ್ಲೂಕಿನ ಕಂದಹಳ್ಳಿ ಹೊರವಲಯದ ಗದ್ದೆಯಲ್ಲಿ ಹೂಅರಳಿಸಿದ ಕಬ್ಬು ವಿದ್ಯುತ್ ತಂತಿ ಸ್ಪರ್ಶಿಸುತ್ತಿರುವುದು

   

ಯಳಂದೂರು: ತಾಲ್ಲೂಕಿನಲ್ಲಿ ಬೆಳೆಯಲಾದ ಕಬ್ಬು ಸೂಲಂಗಿ (ಹೂ) ಬಿಟ್ಟಿದ್ದು ತೂಕ ಕಳೆದುಕೊಳ್ಳುವುದರ ಜೊತೆಗೆ ಇಳುವರಿಯಲ್ಲಿ ಭಾರಿ ಕುಸಿತವಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಸಾಮಾನ್ಯವಾಗಿ ಡಿಸೆಂಬರ್ ಹೊತ್ತಿಗೆ ಕಬ್ಬಿನಲ್ಲಿ ಸೂಲಂಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ವರ್ಷ ಅವಧಿಗೂ ಮುನ್ನವೇ ನವೆಂಬರ್ ಮೊದಲ ವಾರ ಕಬ್ಬು ಸೂಲಂಗಿ ಬಿಟ್ಟಿರುವುದರಿಂದ ಮುಂದಿನ ಹಂತದ ಬೆಳವಣಿಗೆ ಕುಂಠಿತವಾಗಲಿದೆ. ಜೊತೆಗೆ ಕೀಟಬಾಧೆ ಮತ್ತು ಗೊಣ್ಣೆಹುಳುಗಳ ಹಾವಳಿಯೂ ಹೆಚ್ಚಾಗಿದೆ ಇಳುವರಿ ಕುಸಿತವಾಗಬಹುದು’ ಎಂದು ರೈತರು ಹೇಳುತ್ತಾರೆ.

ADVERTISEMENT

‘ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ 2,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಸ್ಥಳೀಯ ತಳಿಗಳ ಜೊತೆಗೆ ಹೊಸ ತಳಿಯ ಕಬ್ಬು ಬೆಳೆಗೂ ಆದ್ಯತೆ ನೀಡಲಾಗಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಬಿತ್ತನೆ ಮಾಡಲಾಗಿದ್ದ ಕಬ್ಬು ಹುಲುಸಾಗಿ ಬೆಳೆದಿದೆ. ಕೊಳವೆಬಾವಿ ನೀರು ಬಳಸಿಕೊಂಡು ಜನವರಿ ಹೊತ್ತಿಗೆ ನಾಟಿ ಮಾಡಿದ್ದ ಕಬ್ಬಿನಲ್ಲಿ ಸೂಲಂಗಿ ಮೂಡಿದೆ’ ಎನ್ನುತ್ತಾರೆ ಬೆಳೆಗಾರರು.

‘ಕಬ್ಬಿನಲ್ಲಿ ಸೂಲಂಗಿ ಬಂದರೆ ಬೆಳವಣಿಗೆ ನಿಲ್ಲುತ್ತದೆ. ಜೊತೆಗೆ ಕಬ್ಬಿನಲ್ಲಿ ಹಾಲಿನ ಇಳುವರಿಯೂ ಕುಸಿಯುತ್ತಾ ಹೋಗುತ್ತದೆ. ಹಾಗಾಗಿ, ಅವಧಿಗೂ ಮುನ್ನವೇ 9 ತಿಂಗಳ ಕಬ್ಬನ್ನು ಕಡಿದು ಆಲೆಮನೆಗೆ ಸಾಗಿಸುತ್ತಿದ್ದೇವೆ. ಶ್ರಮಿಕರ ಕೊರತೆಯಿಂದ ಕಬ್ಬು ಕಟಾವಿಗೆ ಸಮಸ್ಯೆಯಾಗಿದೆ’ ಎನ್ನುತ್ತಾರೆ ಅಂಬಳೆ ಕೃಷಿಕ ನಾಗೇಶ್ ಹೇಳಿದರು.

‘ಕಬ್ಬು ಕಟಾವು ನಿಧಾನ ಮಾಡಿದರೆ ಜಮೀನಿಗೆ ನವಿಲು, ಹಂದಿ, ಜಿಂಕೆ ಸಹಿತ ಜಾನುವಾರುಗಳು ದಾಂಗುಡಿ ಇಟ್ವು ಬೆಳೆ ನಾಶ ಮಾಡುತ್ತವೆ. ಕೈಗೆ ಬಂದ ತುತ್ತು ಪ್ರಾಣಿಗಳ ಪಾಲಾಗುತ್ತದೆ. ಎತ್ತರವಾಗಿ ಬೆಳೆದ ಕಬ್ಬಿನ ಮೇಲೆ ಸೂಲಂಗಿ ಅರಳಿರುವುದರಿಂದ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬರುತ್ತಿದ್ದು ಶಾರ್ಟ್ ಸರ್ಕೀಟ್ ಭೀತಿಯೂ ಎದುರಾಗಿದೆ. ತಂತಿಗಳಿಗೆ ತಾಗಿ ಕಿಡಿ ಹೊತ್ತಿಕೊಂಡರೆ ಕಷ್ಟಪಟ್ಟು ಬೆಳೆದ ಕಬ್ಬು ಸಂಪೂರ್ಣ ಸುಟ್ಟುಹೋಗಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತರು.

‘ಹೊಸ ತಳಿಯ ಕಬ್ಬಿನಲ್ಲಿ ಸೂಲಂಗಿ ಸಮಸ್ಯೆ ಹೆಚ್ಚಾಗಿ ಬಾಧಿಸುವುದಿಲ್ಲ. ಅಕ್ಟೋಬರ್-ನವೆಂಬರ್ ಋತುಮಾನದಲ್ಲಿ ಬೆಳೆದ ಕಬ್ಬಿನಲ್ಲಿ ಸೂಲಂಗಿ ಕಾಣಿಸಿಕೊಳ್ಳುತ್ತದೆ. ಸೂಲಂಗಿ ರಹಿತ ಕಬ್ಬಿನ ತಳಿಗಳನ್ನು ಸಕ್ಕರೆ ಕಾರ್ಖಾನೆಗಳು ವಿತರಿಸುತ್ತಿದ್ದು ಇವು ಎತ್ತರ ಹಾಗೂ ದಪ್ಪ ಬೆಳೆಯುವುದಿಂದ ಸಕ್ಕರೆ ಅಂಶವೂ ಹೆಚ್ಚಾಗಿರುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ವೆಂಕಟರಂಗಶೆಟ್ಟಿ.

ಬೆಂಕಿ ಹಾಕಬೇಡಿ:

‘ಹಿಡುವಳಿದಾರರು ಕಬ್ಬು ಕಟಾವು ಮಾಡಿದ ನಂತರ ಸೋಗಿಗೆ ಬೆಂಕಿ ಹಾಕಬಾರದು. ಬದಲಾಗಿ ಸೋಗೆಗೆ ಸೂಪರ್ ಫಾಸ್ಪೇಟ್ ಮತ್ತು ಜಿಪ‍್ಸಂ ಸೇರಿಸಿ ಕೊಳೆಸಬೇಕು. ಇದರಿಂದ ಸಾವಯವ ಗೊಬ್ಬರ ದೊರೆಯಲಿದ್ದು ಮಣ್ಣಿನಲ್ಲಿ ಸೇರುತ್ತದೆ, ಕೀಟಬಾಧೆಯೂ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಕೃಷಿ ತಜ್ಞರು.

ಸೂಲಂಗಿ ರಹಿತ ತಳಿ

ಸೂಲಂಗಿ ಬಿಡದ ಸಿಒವಿಸಿ 517, ಭೀಮಾ ಹಾಗೂ 62175 ತಳಿಯ ಕಬ್ಬು ಬೆಳೆಯುವತ್ತ ರೈತರು ಒಲವು ತೋರಿದ್ದಾರೆ. ಮಳೆಯ ಪ್ರಮಾಣ ಕಡಿಮೆ ಇದ್ದರೂ ಉತ್ತಮ ಇಳುವರಿ ಪಡೆಯಬಹುದು. ಈ ಬಾರಿ ತಾಲ್ಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕೂಳೆ ಕಬ್ಬಿನಲ್ಲಿ ಸೂಲಂಗಿ ಕಾಣಿಸಿಕೊಂಡಿದೆ. ಉಳಿದ ಕಬ್ಬಿನಲ್ಲಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.