ADVERTISEMENT

ಚಾಮರಾಜನಗರ: ಸಚಿವ ಶಿವಾನಂದ ಪಾಟೀಲ ಹೇಳಿಕೆ ಖಂಡಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 18:03 IST
Last Updated 25 ಡಿಸೆಂಬರ್ 2023, 18:03 IST
   

ಚಾಮರಾಜನಗರ: ರೈತರು ಬರ ಬರಲಿ ಎಂದು ಬಯಸುತ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆಯನ್ನು ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಬೆಳೆಗಾರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟ್‌ ಬಳಿ ಸೇರಿದ ಪ‍್ರತಿಭಟನಕಾರರು, ಶಿವಾನಂದ ಪಾಟೀಲ ವಿರುದ್ಧ ಘೋಷಣೆ ಕೂಗಿದರು. ಶಿವಾನಂದ ಪಾಟೀಲರ ಭಾವಚಿತ್ರವನ್ನು ಹರಿದು  ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ‘ರಾಜ್ಯ, ರಾಷ್ಟ್ರಮಟ್ಟದಲ್ಲಿ ರೈತ ದಿನಾಚರಣೆ ಆಚರಿಸಿ, ರೈತ ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ಅನ್ನದಾತ ಎಂದು ಹೊಗಳುತ್ತಿರುವ ಸಂದರ್ಭದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು, ‘ರೈತರು ಬರಗಾಲ ಬರಬೇಕು ಎಂದು ಬಯಸುತ್ತಾರೆ, ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸುತ್ತಾರೆ. ವಿದ್ಯುತ್‌ ಉಚಿತವಾಗಿ ನೀಡಲಾಗುತ್ತಿದೆ. ಗೊಬ್ಬರಕ್ಕೆ ಸಬ್ಸಿಡಿಯನ್ನೂ ಕೊಡಲಾಗುತ್ತಿದೆ. ಹಾಗಾಗಿ, ಸಾಲ ಮನ್ನಾ ಮಾಡುವುದನ್ನು ಅವರು ನಿರೀಕ್ಷಿಸಬಾರದು’ ಎಂದು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯ. ಶಿವಾನಂದ ಪಾಟೀಲ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡಿದ್ದಾರೆ. ಅವರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಬೇಕು’ ಎಂದರು.

ADVERTISEMENT

'ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿವೇಶನದಲ್ಲಿ ಮಾತನಾಡುವಾಗ, ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲದ ಮೇಲಿನ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು. ಆಗ ಈ ಶಿವಾನಂದ ಪಾಟೀಲ ಎಲ್ಲಿದ್ದರು. ಆಗ ಇವರು ಪ್ರತಿಭಟನೆ ಮಾಡಬೇಕಿತ್ತು. ಕೇಂದ್ರ ಸರ್ಕಾರ ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಿದಾಗ ಇವರು ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದರು. 

‘ಶಿವನಾಂದ ಪಾಟೀಲ ಅವರು ಕಳೆದ ವರ್ಷ ರೈತರ ಆತ್ಮಹತ್ಯೆ ವಿಚಾರದ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ಆಗ ಅವರಿಗೆ ತಕ್ಕ ಪಾಠ ಕಲಿಸಿದ್ದೆವು. ಪ್ರತಿ ಬಾರಿಯೂ ಅವರು ಇಂತಹದೇ ಹೇಳಿಕೆಯನ್ನು ನೀಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿಗೆ ತರಲು ಇವರಿಗೆ ಆಗುವುದಿಲ್ಲ. ಹೆಚ್ಚುವರಿ ಕಬ್ಬು ಬಾಕಿಯನ್ನು ರೈತರಿಗೆ ಕೊಡಿಸಲು ಕ್ರಮ ಕಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ, ಹಗುರವಾಗಿ ಮಾತನಾಡುತ್ತಾರೆ’ ಎಂದು ದೂರಿದರು.

‘ಸಚಿವರು ತಕ್ಷಣ ರೈತರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅವರು ರಾಜ್ಯದಲ್ಲಿ ಎಲ್ಲಿಯೂ ಓಡಾಡುವುದಕ್ಕೆ ನಾವು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎಂದು ಭಾಗ್ಯರಾಜ್‌ ಎಚ್ಚರಿಸಿದರು.  

ಸಂಘದ ತಾಲ್ಲೂಕು ಅಧ್ಯಕ್ಷ ಹಾಲಿನ ನಾಗರಾಜು, ಮಲೆಯೂರು ಹರ್ಷ, ಎಳನೀರು ಮಹೇಂದ್ರ, ಸತೀಶ್, ಅರಳಿಕಟ್ಟೆ ಕುಮಾರ್, ಪ್ರಭುಸ್ವಾಮಿ, ಊಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಮಹದೇವಸ್ವಾಮಿ, ಚೇರ್ಮನ್ ಗುರು, ನಾಗೇಂದ್ರ, ಕಿಳ್ಳಲಿಪುರ ನಂದೀಶ್, ಶ್ರೀಕಂಠ, ನಾಗರಾಜು, ಮಹದೇವಪ್ಪ, ಸಿದ್ದಪ್ಪ ಇತರರು ಇದ್ದರು

ಅವಹೇಳನ ಸರಿಯಲ್ಲ

ಚಿಕ್ಕಮಗಳೂರು: ‘ಬರಗಾಲ ಬರಲಿ ಎಂದು ರೈತರು ಕಾಯುತ್ತಾರೆ ಎಂದು ಶಿವಾನಂದ ಪಾಟೀಲ ಅವರು ಹೇಳಿದ್ದಾರೆ. ಹಿಂದೆ ಕೂಡ ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿದ್ದರು. ರೈತರ ಬಗ್ಗೆ ಅವಹೇಳನ ಸರಿಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದೊಂದು ಕೆಟ್ಟ ಸರ್ಕಾರ, ರೈತ ವಿರೋಧ ಸರ್ಕಾರ ಎಂಬುದಕ್ಕೆ ಇದು ಉದಾಹರಣೆ. ಸರ್ಕಾರಕ್ಕೆ ನಾಚಿಕೆಯಾಗಬೇಕು, ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗಲಿದೆ’ ಎಂದರು.

ವಜಾಗೆ ಆಗ್ರಹ

‘ಸಚಿವರ ಹೇಳಿಕೆ ಸಹನೀಯವಲ್ಲ. ಅಧಿಕಾರದ ಅಹಂಕಾರ ಮದವೇರಿ ದಾಗ ಇಂತಹ ಮಾತುಗಳು ಬರುತ್ತವೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

‘ಕೂಡಲೇ ಸಚಿವ ಸಂಪುಟದಿಂದ ಶಿವಾನಂದ ಪಾಟೀಲ ಅವರನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ
ಅವರ ಪಾಪ ಕಾಂಗ್ರೆಸ್‌ಗೆ ಅಂಟಿಕೊಳ್ಳಲಿದೆ. ರಾಜ್ಯದ ಜನ ಅಧಿಕಾರದ ಮದ ಇಳಿಸಲಿದ್ದಾರೆ’ ಎಂದರು.

ಸಚಿವರು ರೈತರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವಿವೇಕದ ಪರಮಾವಧಿ ಇದು. ತಕ್ಷಣ ಕ್ಷಮೆ ಯಾಚಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ
ಕುರುಬೂರು ಶಾಂತಕುಮಾರ್‌, ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ
ಇದು ಬೇಜವಾಬ್ದಾರಿತನದ ಹೇಳಿಕೆ. ದೊಡ್ಡ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಬೆಳೆ ಸಮೃದ್ಧವಾಗಿ ಬಂದರೆ ರೈತ ಕೈಯೊಡ್ಡುವ ಪರಿಸ್ಥಿತಿ ಬರುವುದಿಲ್ಲ. ಶಿವಾನಂದ ಪಾಟೀಲ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು
‍‍ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

‘ಏನೋ ಹೇಳಲು ಯತ್ನಿಸಿ ಎಡವಟ್ಟು’

ಬೆಳಗಾವಿ: ‘ಒಮ್ಮೊಮ್ಮೆ ಗಾಡಿಗಳು ಹೆಚ್ಚು ವೇಗ ಓಡಿದಾಗ, ಅಪಘಾತವಾಗುತ್ತದೆ. ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಶಿವಾನಂದ ಪಾಟೀಲ ಅವರು ಏನೋ ಹೇಳಲು ಯತ್ನಿಸಿ ಎಡವಟ್ಟು ಮಾಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಬರಗಾಲ ಬರಲಿ ಎಂದು ಯಾರೂ ಬಯಸಲ್ಲ. ಬರಗಾಲದಿಂದ ರೈತರು ಅಷ್ಟೇ ಅಲ್ಲ, ಗ್ರಾಹಕರು, ವ್ಯಾಪಾರಿಗಳಿಗೂ ತೊಂದರೆ ಆಗುತ್ತದೆ. ದೇಶದ ಜಿಡಿಪಿ‌ ಮೇಲೂ ಪರಿಣಾಮ ಬೀರುತ್ತದೆ. ಶಿವಾನಂದ ಪಾಟೀಲ ಹಿರಿಯರು. ಅವರಿಗೆ ನಾನೇನೂ ಹೇಳಲ್ಲ’ ಎಂದರು.

ಗೇಲಿ ಮಾಡಿದ್ದು ಖಂಡನಾರ್ಹ: ಆಕ್ಷೇಪ

ಬೆಳಗಾವಿ: ‘ಶಿವಾನಂದ ಪಾಟೀಲ ಕೂಡ ರೈತನ ಮಗ. ಬರಗಾಲ ಬೀಳಲಿ ಎಂದು ಅವರ ತಂದೆ ಪ್ರಾರ್ಥಿಸಿದ್ದರೇ ಎಂದು ಕೇಳಿಕೊಳ್ಳಲಿ’ ಎಂದು ರೈತ ಸಂಘದ ಚಿಕ್ಕೋಡಿಯ ಮುಖಂಡ ಮಹಾದೇವ ಮಡಿವಾಳ ಆಕ್ಷೇಪಿಸಿದ್ದಾರೆ.

‘ಬರದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂಥದರಲ್ಲಿ ಅವರಿಗೆ ಧೈರ್ಯ ಹೇಳುವುದನ್ನು ಬಿಟ್ಟು ಗೇಲಿ ಮಾಡಿದ್ದು ಖಂಡನಾರ್ಹ. ರೈತರೆಲ್ಲರೂ ಸೇರಿ ದುಡ್ಡು ಕೊಡುತ್ತೇವೆಯೆಂದರೆ ಶಿವಾನಂದ ಪಾಟೀಲರು ಆತ್ಮಹತ್ಯೆ ಮಾಡಿಕೊಳ್ಳುವರೇ’ ಎಂದೂ ರೈತ ಮುಖಂಡ ಮಂಜುನಾಥ ಪರಗೌಡ ಪ್ರಶ್ನಿಸಿದ್ದಾರೆ.

‘ಸಚಿವರು ಅಧಿಕಾರ ದರ್ಪದಲ್ಲಿ ಉದ್ಧಟತನದ ಹೇಳಿಕೆ ನೀಡಬಾರದು. ರೈತರು ನಿಮಗೆ ಪುಕ್ಕಟೆ ಅನ್ನ ಹಾಕುವಂಥವರು. ಬರ ಬಯಸಲ್ಲ. ನೀವು ರೈತರಿಗೆ ಏನು ಪುಕ್ಕಟೆ ಕೊಟ್ಟಿದ್ದೀರಿ? ಸ್ಪಷ್ಟಪಡಿಸಿ’ ಎಂದು ಭಾರತೀಯ ಕೃಷಿಕ ಸಮಾಜ (ಸಂ)ದ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.