ADVERTISEMENT

ಚಾಮರಾಜನಗರ: ಬಿಸಿಲ ಝಳ; ಎಳನೀರಿಗೆ ಮೊರೆ

ತರಕಾರಿ, ಹಣ್ಣುಗಳ ಧಾರಣೆ ಯಥಾಸ್ಥಿತಿ, ಹೂವಿನ ಬೆಲೆ ಏರಿಳಿತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 16:28 IST
Last Updated 5 ಏಪ್ರಿಲ್ 2021, 16:28 IST
ಚಾಮರಾಜನಗರ ಡಿವೈಎಸ್‌ಪಿ ಕಚೇರಿ ಸಮೀಪ ವ್ಯಾಪಾರ ಮಾಡುತ್ತಿರುವ ಮಹೇಶ್‌ ಅವರ ಬಳಿ ಎಳನೀರಿಗಾಗಿ ಬಂದಿರುವ ಗ್ರಾಹಕರು
ಚಾಮರಾಜನಗರ ಡಿವೈಎಸ್‌ಪಿ ಕಚೇರಿ ಸಮೀಪ ವ್ಯಾಪಾರ ಮಾಡುತ್ತಿರುವ ಮಹೇಶ್‌ ಅವರ ಬಳಿ ಎಳನೀರಿಗಾಗಿ ಬಂದಿರುವ ಗ್ರಾಹಕರು   

ಚಾಮರಾಜನಗರ: ಜಿಲ್ಲೆಯಲ್ಲಿ ಬಿಸಿಲಿನ ಝಳ ದಿನೇದಿನೇ ಹೆಚ್ಚುತ್ತಿದ್ದು, ತಾಪಮಾನ ಏರಿಕೆಯಿಂದ ಉಂಟಾಗುವ ಆಯಾಸವನ್ನು ದೂರ‌ ಮಾಡಲು ಎಳನೀರಿಗೆ ಮೊರೆ‌ ಹೋಗುತ್ತಿದ್ದಾರೆ.

ಎರಡು ಮೂರು ವಾರಗಳಿಂದ ವಾತಾವರಣದ ಗರಿಷ್ಠ ಉಷ್ಣಾಂಶ 37–38 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಕನಿಷ್ಠ ಉಷ್ಣಾಂಶ 18–20 ಡಿಗ್ರಿ ಸೆಲ್ಸಿಯಸ್‌ಗಳಿಷ್ಟಿದೆ. ಹೀಗಾಗಿಜಿಲ್ಲೆಯಾದ್ಯಂತ ಎಳನೀರಿಗೆ ಹೆಚ್ಚು ಬೇಡಿಕೆ ಬಂದಿದೆ. ಬೆಳಿಗ್ಗೆ 10 ಗಂಟೆ ದಾಟುತ್ತಲೇ, ಎಳನೀರು ಮಾರಾಟಗಾರರ ಬಳಿ ಗ್ರಾಹಕರು ಕಾಣಿಸಿಕೊಳ್ಳುತ್ತಿದ್ದಾರೆ.

ಒಂದು ಎಳನೀರಿಗೆ ₹ 25ರಿಂದ ₹ 35ರವರೆಗೆ ಬೆಲೆ ಇದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಎಲ್ಲ ವ್ಯಾಪಾರಿಗಳು ₹ 30ರಿಂದ‌ ₹ 35ಕ್ಕೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ₹ 25 ಇದೆ. ಗಾತ್ರದಲ್ಲಿ ಚಿಕ್ಕದಾದ ಎಳನೀರನ್ನು ₹ 20ಕ್ಕೆ ಮಾರಾಟ ಮಾಡುವ ವ್ಯಾಪಾರಿಗಳೂ ಇದ್ದಾರೆ.

ADVERTISEMENT

ಎರಡು ಮೂರು ವಾರಗಳಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ವ್ಯಾಪಾರಿಗಳು ದಿನಕ್ಕೆ 350ರಿಂದ 500ರವೆಗೂ ಮಾರಾಟ ಮಾಡುತ್ತಿದ್ದಾರೆ.

ಸಣ್ಣ ವ್ಯಾಪಾರಿಗಳು ರೈತರ ತೋಟದಿಂದ ನೇರವಾಗಿ ಎಳನೀರು ಖರೀದಿಸಿ ಸೈಕಲ್, ದ್ವಿಚಕ್ರ ವಾಹನಗಳಲ್ಲಿ ತುಂಬಿ ತಂದು ನಗರ, ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸ್ಥಳೀಯ ತೋಟಗಳಿಂದ ಪೂರೈಕೆ: ಜಿಲ್ಲೆಯ ವ್ಯಾಪಾರಿಗಳು ಸ್ಥಳೀಯವಾಗಿಯೇ ರೈತರಿಂದ ಎಳನೀರು ಖರೀದಿ ಮಾಡುತ್ತಾರೆ. ಒಂದು ಎಳನೀರಿಗೆ ₹ 18ರಿಂದ ₹ 20ರವರೆಗೆ ರೈತರಿಗೆ ನೀಡುತ್ತಿದ್ದಾರೆ.

ಜಿಲ್ಲೆಯ ಎಳನೀರಿಗೆ‌ ಹೊರ‌ ಜಿಲ್ಲೆ, ಹೊರ ರಾಜ್ಯಗಳಲ್ಲೂ ಬೇಡಿಕೆ ಇದ್ದು, ಇಲ್ಲಿ ಎಳನೀರು ಖರೀದಿಸಿ ಹೊರಗಡೆ ಪೂರೈಕೆ ಮಾಡುವವರು ಇದ್ದಾರೆ.

'ತಮ್ಮಡಹಳ್ಳಿ, ಬೇಡರಪುರ ಸೇರಿದಂತೆ ಸುತ್ತಮುತ್ತಲಿನ ರೈತರಿಂದ ಎಳನೀರು ಖರೀದಿಸುತ್ತೇನೆ. ಎರಡು ವಾರಗಳಿಂದ ಹೆಚ್ಚು ಗ್ರಾಹಕರು ಬರುತ್ತಿದ್ದಾರೆ. ಬಿಸಿಲಿನ ವಾತಾವರಣ ಇರುವವರೆಗೆ ಬೇಡಿಕೆ‌ ಇರಲಿದೆ' ಎಂದು ನಗರದ ಎಳನೀರು ವ್ಯಾಪಾರಿ ಮಹದೇವ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

'ಬಿಸಿಲು ಈಗ ಹೆಚ್ಚಿದ್ದು, ಜನರು ಬಾಯಾರಿಕೆ ನೀಗಿಸಲು ಎಳನೀರು ಕುಡಿಯುತ್ತಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಬೇಗ ಖಾಲಿಯಾಗುತ್ತಿದೆ. ಎರಡು ಮೂರು ದಿನಗಳೊಮ್ಮೆ ತರಿಸುತ್ತಿದ್ದೇನೆ. ಸ್ಥಳೀಯವಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಲಭ್ಯವಾಗುತ್ತಿದೆ' ಎಂದು ವ್ಯಾಪಾರಿ ಮಹೇಶ್ ಅವರು ತಿಳಿಸಿದರು.

ಮಾರುಕಟ್ಟೆ ಧಾರಣೆ ಯಥಾಸ್ಥಿತಿ
ಈ ಮಧ್ಯೆ, ನಗರದ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಗಳು, ಮಾಂಸದ ಧಾರಣೆ ಯಥಾಸ್ಥಿತಿ ಮುಂದುವರಿದಿದೆ. ಹೂವಿನ ಬೆಲೆಯಲ್ಲಿ ಮಾತ್ರ ಕೊಂಚ ಏರಿಳಿತ ಕಂಡು ಬಂದಿದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಹಾಗೂ‌ ಕಾಕಡ ಹೂವಿನ ಬೆಲೆ ಕೆಜಿಗೆ ₹ 40ನಷ್ಟು ಜಾಸ್ತಿಯಾಗಿದೆ. ಕಳೆದ ವಾರ ಕೆಜಿಗೆ‌ ₹ 200 ಇತ್ತು. ಅದೀಗ ₹ 240ಕ್ಕೆ‌ ಏರಿದೆ.‌ ಕನಕಾಂಬರ ಕೆಜಿಗೆ ₹ 400, ಸೇವಂತಿಗೆ ₹ 80ರಿಂದ ₹ 100, ಬಟನ್ ಗುಲಾಬಿ ₹ 100ರಿಂದ ₹ 120 ರವರೆಗೆ ಬೆಲೆ‌ ಇದೆ. ಬೇಡಿಕೆ ಕುಸಿದಿರುವ ಚೆಂಡು ಹೂವಿಗೆ ₹ 10 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.