ADVERTISEMENT

ಚಾಮರಾಜನಗರ ಜಿಲ್ಲೆಗೆ ಪುನೀತ್ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 14:38 IST
Last Updated 7 ಮಾರ್ಚ್ 2020, 14:38 IST
   

ಬೆಂಗಳೂರು: ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಗುರಿಯಾಗಿರುವ ಚಾಮರಾಜನಗರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಹಾಗೂ ಅಭಿವೃದ್ಧಿಪರ ನಡಿಗೆಯನ್ನು ಹೊರ ಜಗತ್ತಿಗೆ ಪರಿಚಯಿಸಿ, ಜಿಲ್ಲೆಯ ಗರಿಮೆಯನ್ನು ಪ್ರಚುರ ಪಡಿಸಲು ಚಿತ್ರನಟ ಪುನೀತ್‌ ರಾಜಕುಮಾರ್‌ ಅವರು ರಾಯಭಾರಿಯಾಗಿ ಕೆಲಸ ಮಾಡಲಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರ ಆಸಕ್ತಿ ಫಲವಾಗಿ ಇದೇ ಮೊದಲ ಬಾರಿಗೆ ಜಿಲ್ಲೆಗೆ ಒಬ್ಬರು ರಾಯಭಾರಿ ಸಿಕ್ಕಂತಾಗಿದೆ.

ಪುನೀತ್ ನಿವಾಸಕ್ಕೆ ಭೇಟಿ ಮಾಡಿದ ಸುರೇಶ್‌ಕುಮಾರ್ ಹಾಗೂ ರವಿ ಅವರು, ‘ಚೆಲುವ ಚಾಮರಾಜನಗರ ಅಭಿಯಾನಕ್ಕೆ ನೆರವಾಗಲು ಜಿಲ್ಲೆಯ ರಾಯಭಾರಿಯಾಗಬೇಕು’ ಎಂಬ ಜಿಲ್ಲಾಡಳಿತ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸುವಂತೆ ಮನವಿ ಮಾಡಿದರು. ಅದಕ್ಕೆ ಪುನೀತ್ ಒಪ್ಪಿಕೊಂಡರು ಎಂದು ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ADVERTISEMENT

‘ಚಾಮರಾಜನಗರ ಜಿಲ್ಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳಂತಹ ಪ್ರವಾಸಿಗಳನ್ನು ಸೆಳೆಯುವ ಕ್ಷೇತ್ರಗಳಿವೆ. ಭರಚುಕ್ಕಿಯೂ ಇದೆ. ಆದರೆ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನುತ ತೆಗೆದುಹಾಕುವ ದೃಷ್ಟಿಯಿಂದ ಜಿಲ್ಲಾಧಿಕಾರಿ ತಮ್ಮೊಡನೆ ಚರ್ಚಿಸಿದ್ದರು. ಅಭಿವೃದ್ಧಿ ಪೂರಕ ಕಾರ್ಯಕ್ರಮಗಳ ಜತೆಗೆ ಜಾಗೃತಿ ಆಂದೋಲನ ನಡೆಸುವ ಅಗತ್ಯತೆಯ ಬಗ್ಗೆಯೂ ಪ್ರಸ್ತಾಪಿಸಿದ್ದರು’ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

‘ಡಾ. ರಾಜ್‌ಕುಮಾರ್ ಅವರು ಚಾಮರಾಜನಗರ ಜಿಲ್ಲೆಯವರಾಗಿರುವುದು ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ಪುನೀತ್ ಅವರು ರಾಯಭಾರಿಯಾದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯೊಂದಿಗೆ ಇಲ್ಲಿನ ಜನರು ಘನತೆ ಮತ್ತು ನೆಮ್ಮದಿಯ ಬದುಕು ನಡೆಸಲು ನೆರವಾಗುತ್ತದೆ.

ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಹಾಗೂ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ. ಇದು ಆರಂಭಿಕ ಹೆಜ್ಜೆ. ಚಾಮರಾಜನಗರ ಜಿಲ್ಲೆ ನಮ್ಮದು ಎಂಬ ಭಾವನೆಯನ್ನು ಪ್ರತಿಯೊಬ್ಬರಲ್ಲಿ ಮೂಡಿಸಿ, ಜಿಲ್ಲೆಯ ಚಂದಗಾಣಿಸುವ ಜತೆಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಒಂದಂಶದ ಆಕಾಂಕ್ಷೆ’ ಎಂದು ಪುನೀತ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.