ADVERTISEMENT

ಗೋಕಾಕ್‌ ಚಳವಳಿಯಿಂದ ಉಳಿದ ಕನ್ನಡ: ಸುದರ್ಶನ

ಸಾಹಿತ್ಯ ಸಮ್ಮೇಳನದಲ್ಲಿ ಜನಾಂದೋಲನಗಳು ವಿಚಾರಗೋಷ್ಠಿಯಲ್ಲಿ ಪ್ರತಿಪಾದನೆ

ಬಿ.ಬಸವರಾಜು
Published 10 ಫೆಬ್ರುವರಿ 2023, 6:24 IST
Last Updated 10 ಫೆಬ್ರುವರಿ 2023, 6:24 IST
ಜನಾಂದೋಲನಗಳು ಎಂಬ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ಚಿಂತಕ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿದರು
ಜನಾಂದೋಲನಗಳು ಎಂಬ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ಚಿಂತಕ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿದರು   

ಕೊಳ್ಳೇಗಾಲ: ಪ್ರೌಢಶಾಲೆಗಳಲ್ಲಿ ಕನ್ನಡಕ್ಕೆ ಬದಲಾಗಿ ಸಂಸ್ಕೃತವನ್ನು ಕಲಿಯಬಹುದು ಎಂಬದನ್ನು ವಿರೋಧಿಸಿ ಹುಟ್ಟಿಕೊಂಡ ಗೋಕಾಕ್ ಚಳುವಳಿ ಪರಿಣಾಮವಾಗಿ ಇಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ನಾವು ಕನ್ನಡ ಭಾಷೆ ಓದಲು ಸಾಧ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಪ್ರಸರಾಂಗದ ನಿವೃತ್ತ ಉಪನಿರ್ದೇಶಕ ಸ.ರ.ಸುದರ್ಶನ ಗುರುವಾರ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಜನಾಂದೋಲನಗಳು’ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಓದುತ್ತಿರುವ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು ಎಂಬ ಉದ್ದೇಶದಿಂದ ನಡೆದ ಗೋಕಾಕ್ ಚಳುವಳಿ ಇಂದು ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಹುಟ್ಟಿಕೊಂಡ ಈ ಚಳವಳಿಗೆ ಚಿತ್ರನಟ ಡಾ.ರಾಜ್‌ಕುಮಾರ್ ಧುಮುಕಿದ್ದು, ಇದಕ್ಕೆ ಮತ್ತಷ್ಟು ಹುರುಪು ನೀಡಿತು’ ಎಂದರು.

‘ದಮನಿತರ ಚಳವಳಿ’ ಕುರಿತು ಮಾತನಾಡಿದ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಗುರುರಾಜು ಯರಗನಹಳ್ಳಿ, ‘ದಲಿತರು ಹಿಂದೂಗಳಲ್ಲ ಎಂದು 1930ರಲ್ಲಿ ಡಾ.ಬಿ.ಅಂಬೇಡ್ಕರ್ ಪ್ರತಪಾದಿಸಿದ ದಿನದಿಂದಲೇ ದೇಶದಲ್ಲಿ ದಮನಿತರ ಚಳವಳಿ ಆರಂಭವಾಯಿತು. 1920ರಿಂದ 1932ರವರೆಗೆ ಸ್ವತಂತ್ರರಾಗಿದ್ದ ದೇಶದ ದಲಿತರು ಪೂನಾ ಒಪ್ಪಂದ ಬಳಿಕ ಸ್ವತಂತ್ರ ಹೀನರಾದರು. ಪ್ರತ್ಯೇಕ ಚುನಾಯಣೆಗೆ ಹೋದ ಬಳಿಕ ಅರೆಜೀವವಾದರು. ಡಾ.ಬಿ.ಆರ್ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು ಇಂದಿನ‌ ದಲಿತರಿಗೆ ದಾರಿದೀಪವಾಗಬೇಕಿದೆ. ಅವರ ಬರಹಗಳೇ ಇಂದು ದಲಿತರ ಚಳುವಳಿಗೆ ಮುನ್ನಡಿಯಾಗಿವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ದಲಿತರ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿಯ ಕೊಡುಗೆ ಅಪಾರವಾದುದ್ದಾಗಿದೆ. ಅದರ ಪ್ರಭಾವ ಇಡೀ ರಾಜ್ಯಕ್ಕೆ ಆವರಿಸಿ ಪ್ರತಿ ಜಿಲ್ಲೆಗಳಲ್ಲೂ ತನ್ನ ಕಬಂದಬಾಹು ಚಾಚಿದೆ. 1994ರಲ್ಲಿ ಕೊಳ್ಳೇಗಾಲದ ಮುಳ್ಳೂರು ಗ್ರಾಮದಲ್ಲಿ ಡಿಎಸ್ಎಸ್ ವತಿಯಿಂದ ನಡೆದ ತರಬೇತಿ ಕಾರ್ಯಕ್ರಮ ಈ ಭಾಗದಲ್ಲಿ ದಲಿತ ಸಂಘರ್ಷ ಸಮಿತಿ ವಿಸ್ತಾರವಾಗಲು ಸಹಕಾರಿಯಾಯಿತು. ಹೋರಾಟ, ಚಳವಳಿಗಳು ನಡೆದರೂ ಇಂದಿಗೂ ಸಾಕಷ್ಟು ಕಡೆ ಅಸ್ಪೃಶ್ಯತೆ ಜೀವಂತವಾಗಿದೆ. ಅಸ್ಪೃಶ್ಯತೆ ಜೀವಂತವಿರುವವರೆಗೂ ಚಳವಳಿ, ಹೋರಾಟಗಳು ಜೀವಂತವಾಗಿರುತ್ತವೆ’ ಎಂದರು.

ದಲಿತ ಸಂಘರ್ಷ ಸಮಿತಿಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸ ಗೌಡ, ಕೊಳ್ಳೇಗಾಲದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಂಜುಂಡಸ್ವಾಮಿ, ದಸಂಸ ಸಂಚಾಲಕ ಯರಿಯೂರು, ಪ್ರಾಂಶುಪಾಲ ಎಸ್‌.ಪ್ರಮೋದ್‌, ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಎಂ.ಮಾದಪ್ಪ ಇದ್ದರು.

‘ಜಿಲ್ಲೆಯ ಅಸ್ಮಿತೆ ಉಳಿಸಿದ ಚಳವಳಿ’

ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಚಿಂತಕ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ‘ಈ ಭಾಗದ ಅಸ್ಮಿತೆಯನ್ನು ಉಳಿಸುವಲ್ಲಿ ಚಳವಳಿಗಳು ಮುಖ್ಯ ಪಾತ್ರ ವಹಿಸಿವೆ. ದಲಿತ ಸಂಘರ್ಷ ಸಮಿತಿ ಪ್ರೇರಣೆಯಿಂದ ಹುಟ್ಟಿಕೊಂಡ ದಲಿತ ಚಳವಳಿಗಳು ದಮನಿತರ ದನಿಯಾಗಿ ಕಾರ್ಯನಿರ್ವಹಿಸಿವೆ. ಜಿಲ್ಲೆಯಲ್ಲಿ ನಡೆದ ಹಲವು ಚಳವಳಿಗಳ ಪರಿಣಾಮ ಸಾಕಷ್ಟು ಸಮಸ್ಯೆಗಳು ಪರಿಹಾರದ ಹಾದಿಯನ್ನು ಕಂಡಿವೆ. ಚಳವಳಿಗಳು ಮರುಹುಟ್ಟು ಪಡೆಯುವುದರ ಜತೆಗೆ ಈ ಭಾಗದ ದೀನ ದಲಿತರ ವಿಮೋಚನೆಗೆ ಶ್ರಮಿಸುವಂತ ನಿಟ್ಟಿನಲ್ಲಿ ಸಾಗುವುದರ ಮೂಲಕ ಮತ್ತಷ್ಟು ವಿಚಾರಗಳನ್ನು ಜನತೆಗೆ ಅರಿವು ಮೂಡಿಸಬೇಕು’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.