ತಮಿಳುನಾಡು–ಕರ್ನಾಟಕ ರಾಜ್ಯಗಳ ಗಡಿಯಲ್ಲಿರುವ ಪಾಲಾರ್ ನದಿ ದಾಟಿ ಹನೂರು ಕಡೆಗೆ ಬರುತ್ತಿರುವ ದನಗಳು
ಚಾಮರಾಜನಗರ: ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳ ಸಾವಿಗೆ ತಮಿಳುನಾಡು ಜಾನುವಾರು ಮಾಲೀಕರ ‘ಸಗಣಿ ಮಾಫಿಯಾ’ ಪರೋಕ್ಷ ಕಾರಣವಾಯಿತೇ’ ಎಂಬ ಅನುಮಾನ ದಟ್ಟವಾಗಿದೆ.
ವಿಷ ಹಾಕಿದ್ದ ಜಾನುವಾರು ಕಳೇಬರ ತಿಂದು ಹುಲಿಗಳು ಮೃತಪಟ್ಟಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿರುವ ಬೆನ್ನಲ್ಲೇ, ರಾಜ್ಯದಲ್ಲಿ ತಮಿಳುನಾಡು ಜಾನುವಾರು ಹಾವಳಿಯ ವಿಚಾರ ಮುನ್ನೆಲೆಗೆ ಬಂದಿದೆ.
ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವವರಿಗೆ ದಶಕಗಳಿಂದಲೂ ಜಾನುವಾರು ಸಾಕಣೆಯೇ ಪ್ರಮುಖ ವೃತ್ತಿ. ಸ್ವಂತ ಜಾನುವಾರು ಹೊಂದಿರುವವರೂ ವಿರಳ. ಬಹುತೇಕರು ತಮಿಳುನಾಡಿನ ಜಾನುವಾರುಗಳನ್ನು ಮೇಯಿಸುತ್ತಿದ್ದಾರೆ.
‘ತಮಿಳುನಾಡಿನ ಸಾವಿರಾರು ಹಸುಗಳನ್ನು ನಿಯಮಬಾಹಿರವಾಗಿ ಕಾಡಿನೊಳಗೆ ಮೇಯಿಸಲು ನುಗ್ಗಿಸುತ್ತಿರುವುದಿಂದ ಮಾನವ–ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಜಾನುವಾರುಗಳ ಮೇಲೆ ದಾಳಿ ಮಾಡುವ ಕಾಡು ಪ್ರಾಣಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಳೇಬರಕ್ಕೆ ವಿಷ ಹಾಕಲಾಗುತ್ತಿದೆ’ ಎಂದು ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಗುರುತಿಸುವುದು ಕಷ್ಟ: ‘ಸ್ಥಳೀಯರೇ ಹಸುಗಳನ್ನು ಮೇಯಿಸುವುದರಿಂದ ಜಾನುವಾರುಗಳ ನಿಜವಾದ ‘ಮಾಲೀಕರು’ ಯಾರೆಂದು ಗುರುತಿಸುವುದು ಸವಾಲು. ಅರಣ್ಯ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಹಿಂದೆ ಸಮೀಕ್ಷೆ ಮಾಡಿದಾಗ 6,500ಕ್ಕೂ ಹೆಚ್ಚು ಜಾನುವಾರುಗಳಿದ್ದವು. 5ಸಾವಿರಕ್ಕೂ ಹೆಚ್ಚು ಹಸುಗಳ ಮಾಲೀಕರು ತಮಿಳುನಾಡಿನವರು ಎಂದು ಖಚಿತವಾದರೂ, ಕ್ರಮ ಕೈಗೊಳ್ಳಲು ಸ್ಥಳೀಯರು, ಜನಪ್ರತಿನಿಧಿಗಳು ವಿರೋಧಿಸಿದರು’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಸಮಸ್ಯೆ ಏನು: ‘ತಮಿಳುನಾಡಿನ ಸತ್ಯಮಂಗಲ ಹಾಗೂ ಬರಗೂರು ಮೀಸಲು ಅರಣ್ಯದಲ್ಲಿ ಜಾನುವಾರು ಮೇಯಿಸಲು ಅವಕಾಶ ಇಲ್ಲದಿರುವುದರಿಂದ ಹಂದಿಯೂರು, ಬರಗೂರು ಸೇರಿದಂತೆ ಹಲವು ಗ್ರಾಮಗಳಿಂದ ಜಾನುವಾರುಗಳನ್ನು ಪಾಲಾರ್ ನದಿಯ ಮೂಲಕ ಅಕ್ರಮವಾಗಿ ರಾಜ್ಯದ ಗಡಿಯೊಳಗೆ ನುಗ್ಗಿಸಲಾಗುತ್ತಿದೆ. ಗೋಪಿನಾಥಮ್ ಹಾಗೂ ಪಾಲಾರ್ ಕೂಡುವ ಪ್ರದೇಶದಲ್ಲಿ ಚೆಕ್‌ಪೋಸ್ಟ್ ಇಲ್ಲವಾಗಿದ್ದು, ಸುಲಭವಾಗಿ ಹಸುಗಳು ಹನೂರು ಪ್ರವೇಶಿಸುತ್ತವೆ’ ಎನ್ನುತ್ತಾರೆ ಅಧಿಕಾರಿಗಳು.
ಕಾಡಂಚಿನ ಗ್ರಾಮಸ್ಥರಿಗೆ ಜಾನುವಾರು ಸಾಕಾಣಿಕೆ ಹೊಣೆಗಾರಿಕೆ ವಹಿಸುವ ತಮಿಳುನಾಡಿನವರು, ಮಾಸಿಕ ಹಣ ನೀಡಿ, ಲೋಡ್‌ಗಟ್ಟಲೆ ಸಗಣಿ ಗೊಬ್ಬರವನ್ನು ಮಾರಿ ಲಾಭ ಗಳಿಸುತ್ತಾರೆ. ಸ್ಥಳೀಯರಿಗೆ ಹಣದ ಜೊತೆಗೆ ಹಾಲಷ್ಟೇ ಸಿಗುತ್ತದೆ.
‘ಕಾಡಂಚಿನ ಪ್ರದೇಶಗಳಲ್ಲಿ ಸ್ಥಳೀಯರ ಜಾನುವಾರು ಮೇಯಿಸಲು ಅಡ್ಡಿಪಡಿಸುವುದಿಲ್ಲ. ಆದರೆ, ತಮಿಳುನಾಡಿನ ಜಾನುವಾರುಗಳು ಬಂದರೆ ಪ್ರಾಣಿಗಳ ಆವಾಸ ಸ್ಥಾನಕ್ಕೆ ತೊಂದರೆಯಾಗುತ್ತದೆ. ಮಾನವ–ವನ್ಯಪ್ರಾಣಿ ಸಂಘರ್ಷವೂ ಹೆಚ್ಚಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.
‘ನಿಯಂತ್ರಣಕ್ಕೆ ಅಡ್ಡಿ’
‘ತಮಿಳುನಾಡಿನ ಜಾನುವಾರುಗಳನ್ನು ಇಲ್ಲಿಗೆ ತಂದು ಮೇಯಿಸಿ ಸಗಣಿ ಸಂಗ್ರಹಿಸಿ ಮಾರುವುದು 10–15 ವರ್ಷಗಳಿಂದ ನಡೆಯುತ್ತಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದರೂ ನಿಯಂತ್ರಣಕ್ಕೆ ಬಂದಿಲ್ಲ. ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಕೆಲವರು ಜನಪ್ರತಿನಿಧಿಗಳಿಗೆ ದೂರು ನೀಡಿ ಒತ್ತಡ ಹಾಕಿಸಿದ್ದಾರೆ. ಕ್ರಮ ಜರುಗಿಸಿದ ಅಧಿಕಾರಿಗಳ ವಿರುದ್ಧ ಸದನದೊಳಗೆ ಜನಪ್ರತಿನಿಧಿಗಳು ಹಕ್ಕುಚ್ಯುತಿ ಮಂಡಿಸಿದ ಉದಾಹರಣೆಗಳೂ ಇವೆ’ ಎಂದು ಸಿಸಿಎಫ್ ಟಿ.ಹೀರಾಲಾಲ್ ಹೇಳಿದರು.
‘ಹುಲಿಗಳ ಸಾವು ಗಂಭೀರ ವಿಷಯ’
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಐದು ಹುಲಿಗಳ ಸಾವಿನ ಪ್ರಕರಣದ ಮಧ್ಯಂತರ ವರದಿ ಲಭ್ಯವಾಗಿದ್ದು, ಗಡಿ ರಾಜ್ಯಗಳ ಜತೆ ಚರ್ಚೆ ನಡೆಸಿದ ನಂತರ ವನ್ಯಜೀವಿಗಳ ಸಂರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದರ್ ಯಾದವ್ ಹೇಳಿದರು.
ಮೂವರು ಆರೋಪಿಗಳ ಬಂಧನ
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದ ಆರೋಪದ ಮೇಲೆ ತಾಲ್ಲೂಕಿನ ಕೊಪ್ಪ ಗ್ರಾಮದ ಮಾದುರಾಜು, ನಾಗರಾಜು ಹಾಗೂ ಹಳೆಗೌಡನದೊಡ್ಡಿಯ ಕೋನಪ್ಪ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ನೆರವು ನೀಡಿರುವ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ
ಲಾಗುತ್ತಿದೆ. ಆರೋಪಿಗಳಿಗೆ 2 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆಗೆ ಕಾರಣ: ಕೋನಪ್ಪ ಅವರಿಗೆ ಸೇರಿದ ಹಸು ಈಚೆಗೆ ಅರಣ್ಯದೊಳಗೆ ಮೇಯುವಾಗ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದ ಸಿಟ್ಟಿಗೆದ್ದು ಪ್ರತೀಕಾರ ತೀರಿಸಿಕೊಳ್ಳಲು ನಾಗರಾಜು, ಮಾದುರಾಜು ಜೊತೆಗೂಡಿ ಹುಲಿ ತಿಂದು ಬಿಟ್ಟಿದ್ದ ಜಾನುವಾರು ಕಳೇಬರಕ್ಕೆ ವಿಷ ಹಾಕಿದ್ದಾನೆ. ಬಾಕಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ವಾಚರ್‌ಗಳು ಕೊಳ್ಳೇಗಾಲದ ಡಿಸಿಎಫ್ ಕಚೇರಿ ಮುಂದೆ ಪ್ರತಿಭಟನೆಗೆ ತೆರಳಿದ್ದಾಗ, ಅರಣ್ಯದೊಳಗೆ ಯಾರೂ ಬೀಟ್‌ನಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು ಈ ಕೃತ್ಯ ಎಸಗಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಬದಲಾವಣೆ: ಹುಲಿಗಳ ಅಸಹಜ ಸಾವಿನ ಕುರಿತು ತನಿಖೆಗೆ ರಚಿಸಲಾಗಿದ್ದ 6 ಮಂದಿಯ ಉನ್ನತ ಮಟ್ಟದ ತನಿಖಾ ಸಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ. ಎಪಿಸಿಸಿಎಫ್ ಕುಮಾರ್ ಪುಷ್ಕರ್ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ. ಎಪಿಸಿಸಿಎಫ್ ಶ್ರೀನಿವಾಸುಲು, ಸಿಸಿಎಫ್ ಟಿ.ಹೀರಾಲಾಲ್, ಎಸ್‌ಟಿಸಿಎ ಪ್ರತಿನಿಧಿ, ಮೈಸೂರು ಮೃಗಾಲಯದ ಪಶುಪಾಲನಾ ಅಧಿಕಾರಿ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತನಿಖಾ ತಂಡದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.