
ಯಳಂದೂರು: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಇದರಿಂದ ಬೆಳೆಗಳ ವಿಸ್ತೀರ್ಣದಲ್ಲಿ ಹೆಚ್ಚಳವಾಗಿದ್ದು, ದ್ವಿದಳ ಧಾನ್ಯ ಹಾಗೂ ತೋಟಗಾರಿಕಾ ಬೆಳಗಳಲ್ಲಿ ಅಧಿಕ ಇಳುವರಿ ನಿರೀಕ್ಷಿಸಲಾಗಿದೆ. ಅಕ್ಟೋಬರ್ ಅಂತ್ಯದಲ್ಲಿ ಹಸಿ ಕಡಲೆ ಮತ್ತು ಮುಸುಕಿನ ಜೋಳ ಬೆಳೆಯುವತ್ತ ರೈತರು ಚಿತ್ತ ಹರಿಸಿದ್ದಾರೆ.
ತಾಲ್ಲೂಕಿನಲ್ಲಿ 28 ಗ್ರಾಮಗಳ ಕೆರೆ-ಕಟ್ಟೆಗಳಲ್ಲಿ ಕಳೆ ಗಿಡಗಳ ಅಬ್ಬರ ಹೆಚ್ಚಾಗಿದೆ. ನೀರು ನಿಲ್ಲುವ ಸಾಮರ್ಥ್ಯವೂ ಕುಗ್ಗಿದೆ. ಆದರೆ, ಹೊಳೆ, ನಾಲೆ ಮತ್ತು ಕೆಲವು ದೊಡ್ಡ ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ಹಿಂಗಾರಿ ಕೃಷಿಗೆ ನೆರವಾಗಿದೆ. ಕಾಡಂಚಿನ ಪ್ರದೇಶದಲ್ಲಿ ಆಣೆಕಟ್ಟೆಗಳಲ್ಲೂ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಗೊಂಡಿದ್ದು, ಸುವರ್ಣವತಿ ನದಿಯ ನೀರಿನ ಹರಿವು ಜನ ಮತ್ತು ಜಾನುವಾರು ಬಳಕೆಗೆ ಪೂರಕವಾಗಿದೆ.
ಈಚಿನ ದಿನಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದಿದೆ. ಪೋಡುಗಳಲ್ಲಿ ಎರಚು ಬಿತ್ತನೆಯಲ್ಲಿ ರಾಗಿ ಉತ್ತಮವಾಗಿ ಬೆಳೆದಿದೆ. ಸೊಪ್ಪು, ತರಕಾರಿ ಗಿಡಗಳೂ ಸಮೃದ್ಧವಾಗಿ ಫಲ ಕಚ್ಚಿದ್ದು, ಪೋಡಿನ ಜನರ ಆಹಾರ ವೈವಿಧ್ಯತೆಯನ್ನು ಹೆಚ್ಚಿಸಿದೆ. ಬೆಟ್ಟದ ಸುತ್ತಮುತ್ತ ಮರ ಗಿಡಗಳಲ್ಲಿ ಹೆಚ್ಚು ಹೂ ಕಾಣಿಸಿಕೊಂಡಿದ್ದು, ಬೇಸಿಗೆ ಅವಧಿಯಲ್ಲಿ ಜೇನಿನ ಉತ್ಪಾದನೆಯನ್ನು ಹೆಚ್ಚಿಸಲಿದೆ ಎಂದು ಸೋಲಿಗ ಕೃಷಿಕ ಬೊಮ್ಮಯ್ಯ ಹೇಳಿದರು.
ಕಬಿನಿ ಕಾಲುವೆಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಹರಿದಿದೆ. ಚಿಕ್ಕ ಮತ್ತು ದೊಡ್ಡ ನಾಲೆಗಳಲ್ಲಿ ಸಮೃದ್ಧ ನೀರು ತುಂಬಿದೆ. ಇದರಿಂದ ಭತ್ತ, ರಾಗಿ ಮತ್ತು ಕಬ್ಬು ಬೆಳೆಗಳ ತಾಕು ವಿಸ್ತರಿಸಿದೆ. ತೆಂಗು, ಅಡಿಕೆ, ಕಾಫಿ ಸಸಿಗಳ ನಾಟಿಗೂ ಕೃಷಿಕರು ಮುಂದಾಗಿದ್ದು, ಕೃಷಿ ಚಟುವಟಿಕೆ ಹೆಚ್ಚಾಗಿಸಿದೆ ಎಂದು ಕೃಷಿಕ ಮಾಂಬಳ್ಳಿ ಮಹದೇವ್ ಹೇಳಿದರು.
ಮಳೆ ನಿಂತಿದೆ. ಆಗಾಗ ತುಂತುರು ಕಾಡಿದರೆ, ಬಿಸಿಲಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ನಿಧಾನಕ್ಕೆ ಚಳಿಯೂ ಆವರಿಸುತ್ತಿದ್ದು, ಹಿಂಗಾರಿ ಬೆಳೆಗಳಿಗೆ ವರದಾನವಾಗಿದೆ ಎಂದು ಪಟ್ಟಣದ ಸಾಗುವಳಿದಾರ ಸೂರಿ ಹೇಳಿದರು.
‘ಬೆಳೆಗೆ ಉತ್ತಮ ಹವಾಮಾನ’
‘ತಾಲ್ಲೂಕಿನಲ್ಲಿ ಉತ್ತಮ ಹವಾಮಾನ ಮುಂದುವರಿದಿದೆ. ಬೆಳೆಗಳಿಗೆ ಹಿತಕರ ಹವೆ ಕಾಣಿಸಿಕೊಂಡಿದ್ದು ವಾಡಿಕೆಗಿಂತ 100 ಮಿ.ಮೀ ಮಳೆ ಹೆಚ್ಚು ಸುರಿದಿದೆ. ಅಕ್ಟೋಬರ್ ಅಂತ್ಯದಲ್ಲಿ ಹಸಿ ಕಡಲೆ 100 ಹೆಕ್ಟೇರ್ ಮೆಕ್ಕೆಜೋಳ 50 ಕಬ್ಬು 50 ಹಾಗೂ ಕೋಳೆ ಕಬ್ಬು 150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಂಗಾರಿನಲ್ಲಿ ನಾಟಿಯಾದ ಭತ್ತ ಹಾಗೂ ರಾಗಿ ಹಾಲು ತುಂಬಿದ್ದು ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದೆ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.