ADVERTISEMENT

ಬಿಆರ್‌ಟಿ: ಸಫಾರಿಯಲ್ಲಿ ಅಪರೂಪಕ್ಕೆ ಮೂರು ಹುಲಿಗಳ ದರ್ಶನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 2:11 IST
Last Updated 11 ಫೆಬ್ರುವರಿ 2021, 2:11 IST
ಸಫಾರಿಗೆ ಹೋಗಿದ್ದವರಿಗೆ ಕಂಡ ಹುಲಿಗಳು (ವಿಡಿಯೊ ಚಿತ್ರ)
ಸಫಾರಿಗೆ ಹೋಗಿದ್ದವರಿಗೆ ಕಂಡ ಹುಲಿಗಳು (ವಿಡಿಯೊ ಚಿತ್ರ)   

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ವಲಯದಲ್ಲಿ ಮಂಗಳವಾರ ಸಂಜೆ ಪ್ರವಾಸಿಗರಿಗೆ ಮೂರು ಹುಲಿಗಳು ದರ್ಶನ ನೀಡಿವೆ.

ಕೆ.ಗುಡಿ ವನ್ಯಜೀವಿ ವಲಯದ ಅನೆಕೆರೆ ಸಮೀಪದಲ್ಲಿ ಮೂರು ಹುಲಿಗಳು ಕಂಡು ಬಂದಿವೆ. ಸಫಾರಿಗೆ ತೆರಳಿದ್ದ ಪ್ರವಾಸಿಗರು ಮೊಬೈಲ್‌ನಲ್ಲಿ ಹುಲಿಗಳ ವಿಡಿಯೊ ಚಿತ್ರೀಕರಿಸಿದ್ದಾರೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಸಂತೋಷ್‌ ಕುಮಾರ್‌ ಅವರು ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಕಚ್ಚಾ ರಸ್ತೆಯಲ್ಲಿ ಜೀಪಿನಲ್ಲಿ ಸಫಾರಿ ತೆರಳುತ್ತಿದ್ದ ಪ್ರವಾಸಿಗರಿಗೆ ಮೊದಲಿಗೆ ಎರಡು ಹುಲಿಗಳು ದರ್ಶನ ನೀಡಿದವು. ಇವುಗಳು ನಿಧಾನವಾಗಿ ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಂತೆಯೇ ಪೊದೆಗಳಿಂದ ರಸ್ತೆಯತ್ತ ಬಂದ ಮತ್ತೊಂದು ಹುಲಿ ಎರಡು ಹುಲಿಗಳೊಂದಿಗೆ ಸೇರಿಕೊಂಡು, ರಸ್ತೆಯಲ್ಲಿ ಹೆಜ್ಜೆ ಹಾಕುವ ದೃಶ್ಯ ವಿಡಿಯೊದಲ್ಲಿದೆ.

ADVERTISEMENT

ಬಿಆರ್‌ಟಿ ಅರಣ್ಯದಲ್ಲಿ 45ರಿಂದ 55ರಷ್ಟು ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಸಫಾರಿಗೆ ತೆರಳಿದವರಿಗೆ ಹುಲಿ ಕಾಣಸಿಗುವುದು ಅಪರೂಪ. ಅದರಲ್ಲೂ ಎರಡು ಮೂರು ಹುಲಿಗಳು ಒಟ್ಟಾಗಿ ಕಾಣಸಿಗುವುದಿಲ್ಲ.

ಬಂಡೀಪುರ ಸಫಾರಿಗೆ ಹೋಲಿಸಿದರೆ, ಬಿಆರ್‌ಟಿಯ ಕೆ.ಗುಡಿಗೆ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ. ಇಲ್ಲಿನ ಸಫಾರಿ ಬಗ್ಗೆ ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿಯೂ ಇಲ್ಲ. ಬಿಆರ್‌ಟಿಯ ‌ಸಫಾರಿ ವಲಯ ದಟ್ಟಾರಣ್ಯದಿಂದ ಕೂಡಿದ್ದು, ದೊಡ್ಡ ದೊಡ್ಡ ಮರಗಳು ಹೆಚ್ಚಿವೆ. ಜಿಂಕೆ, ಸಾರಂಗ, ಕಾಟಿಯಂತಹ ಸಸ್ಯಾಹಾರಿ ಪ್ರಾಣಿಗಳೇ ಹೆಚ್ಚಾಗಿ ಕಾಣಸಿಗುತ್ತವೆ.

ಇತ್ತೀಚೆಗೆ ಅರಣ್ಯದಲ್ಲಿರುವ ರಸ್ತೆಯ ಮೂಲಕ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ಪ್ರಯಾಣಿಕರಿಗೂ ಹುಲಿಗಳು ಕಾಣಸಿಗುತ್ತಿವೆ. ಕೆಲವು ವಾರಗಳ ಹಿಂದೆ ರಸ್ತೆಯತ್ತ ಬರುತ್ತಿದ್ದ ವ್ಯಾಘ್ರವೊಂದು ವಾಹನವನ್ನು ಕಂಡು ವಾಪಸ್‌ ಕಾಡಿನೊಳಕ್ಕೆ ಹೋದ ವಿಡಿಯೊ ವೈರಲ್‌ ಆಗಿತ್ತು.

ಹುಲಿಗಳು ಕಾಣಸಿಗುತ್ತಿರುವುದರಿಂದ ಕೆ.ಗುಡಿ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿ ಅರಣ್ಯ ಅಧಿಕಾರಿಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.