ADVERTISEMENT

ಚಾಮರಾಜನಗರ | ಹುಲಿ ಕಾರ್ಯಾಚರಣೆ ಚುರುಕು: ಸಾಕಾನೆಗಳ ಬಳಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:27 IST
Last Updated 23 ಡಿಸೆಂಬರ್ 2025, 5:27 IST
ಚಾಮರಾಜನಗರ ತಾಲ್ಲೂಕಿನ ನಂಜೇದೇವಪುರದಲ್ಲಿ ಐದು ಹುಲಿಗಳು ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ದುಬಾರೆ ಆನೆ ಶಿಬಿರದ ಈಶ್ವರ ಹಾಗೂ ಲಕ್ಷಣ ಆನೆಗಳು (ಎಡಚಿತ್ರ) ನಂಜೇದೇವಪುರ ಗ್ರಾಮದ ಸಮೀಪದ ಕಲ್ಲುಕ್ವಾರಿ ಬಳಿ ಡ್ರೋನ್ ಕ್ಯಾಮೆರಾದಲ್ಲಿ ಪತ್ತೆಯಾಗಿರುವ ಐದು ಹುಲಿಗಳು
ಚಾಮರಾಜನಗರ ತಾಲ್ಲೂಕಿನ ನಂಜೇದೇವಪುರದಲ್ಲಿ ಐದು ಹುಲಿಗಳು ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ದುಬಾರೆ ಆನೆ ಶಿಬಿರದ ಈಶ್ವರ ಹಾಗೂ ಲಕ್ಷಣ ಆನೆಗಳು (ಎಡಚಿತ್ರ) ನಂಜೇದೇವಪುರ ಗ್ರಾಮದ ಸಮೀಪದ ಕಲ್ಲುಕ್ವಾರಿ ಬಳಿ ಡ್ರೋನ್ ಕ್ಯಾಮೆರಾದಲ್ಲಿ ಪತ್ತೆಯಾಗಿರುವ ಐದು ಹುಲಿಗಳು   

ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ತಾಲ್ಲೂಕಿನ ನಂಜೇದೇವನಪುರದಲ್ಲಿ ಐದು ಹುಲಿಗಳು ಪತ್ತೆಯಾದ ಬೆನ್ನಲ್ಲೇ ಸೋಮವಾರ ಹುಲಿ ಸೆರೆ ಕಾರ್ಯಾಚರಣೆ ಆರಂಭವಾಯಿತು.

ದುಬಾರೆ ಆನೆ ಶಿಬಿರದಿಂದ ಕರೆಸಲಾಗಿರುವ 42 ವರ್ಷದ ಈಶ್ವರ ಹಾಗೂ 45 ವರ್ಷದ ಲಕ್ಷಣ ಸೆರೆ ಕಾರ್ಯಾಚರಣೆಗೆ ಇಳಿದಿವೆ. ಕೂಂಬಿಂಗ್ ಆರಂಭಕ್ಕೂ ಮುನ್ನ ‌ಆನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆ ಶುರು ಮಾಡಲಾಯಿತು.

ಈಶ್ವರ ಆನೆಗೆ ವಿಶ್ವನಾಥ್ ಹಾಗೂ ಮಂಜುನಾಥ್ ಮಾವುತರಾಗಿದ್ದು, ಲಕ್ಷ್ಮಣ ಆನೆಗೆ ಸಂಜು ಹಾಗೂ ಸುರೇಶ ಮಾವುತರಾಗಿದ್ದಾರೆ. ಎನ್‌ಟಿಸಿಎ ನಾಮ ನಿರ್ದೇಶಿತ ಸದಸ್ಯ, ವನ್ಯಜೀವಿ ತಜ್ಞ, ಆರ್‌ಎಫ್‌ಒ, ಪಶು ವೈದ್ಯಾಧಿಕಾರಿ, ಚಾಮರಾಜನಗರ ಬಫರ್ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ADVERTISEMENT

ಸೆರೆಯಾದ ಹುಲಿ ಚಿತ್ರ: ಕಾರ್ಯಾಚರಣೆ ವೇಳೆ ಗ್ರಾಮದ ಕಲ್ಲುಕ್ವಾರಿ ಸಮೀಪ ತಾಯಿ ಹುಲಿಯು ನಾಲ್ಕು ಮರಿಗಳೊಂದಿಗೆ ಚಿನ್ನಾಟವಾಡುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೂಂಬಿಂಗ್ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಹುಲಿ ದಾಳಿ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಂಜೇದೇವನಪುರ, ಉಡಿಗಾಲ, ವೀನರಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಹಾಗೂ ಮಂಗಳವಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಜನ ಜಾನುವಾರಗಳ ಮೇಲೆ ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಗ್ರಾಮಸ್ಥರು ಮನೆ ಬಿಟ್ಟು ಹೊರಗೆ ಬರಬಾರದು ಎಂದು ತಹಶೀಲ್ದಾರ್ ಗಿರಿಜಾ ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರೆಂದು ಕಟ್ಟೆಚ್ಚರ ವಹಿಸಲಾಗಿದ್ದು ಯಾರೂ ಗುಂಪು ಸೇರದಂತೆ ಹಾಗೂ‌ ಒಬ್ಬರೇ ಓಡಾಡದಂತೆ, ಕಾರ್ಯಾಚರಣೆ ವೇಳೆ ಜನರು ಮನೆಯಲ್ಲೇ ಸುರಕ್ಷಿತವಾಗಿರುವಂತೆ ತಿಳಿಸಿದ್ದಾರೆ.

ಶಾಸಕರ ಭೇಟಿ: ಹುಲಿ ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ನಂಜೇದೇವನಪುರಕ್ಕೆ ಭೇಟಿನೀಡಿದ ಅರಣ್ಯ ಇಲಾಕೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹುಲಿ ಸೆರೆ ಕಾರ್ಯಾಚರಣೆಯ ಮಾಹಿತಿ ಪಡೆದ ಸಚಿವರು ‘ಹುಲಿಗಳನ್ನು ಕಾಡಿಗೆ ಅಟ್ಟವ  ಬದಲು ಸೆರೆ ಹಿಡಿದು ಬೇರೆಡೆಗೆ ಸಾಗಿಸಬೇಕು. ಕಾಡಿನೊಳಗೆ ಓಡಿಸಿದರೆ ಮತ್ತೆ ಗ್ರಾಮಗಳತ್ತ ಬಂದು ಜನ ಜಾನುವಾರು ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಸೆರೆ ಹಿಡಿಯಬೇಕು ಎಂದು ಸೂಚಿಸಿದರು.

ಬಳಿಕ ಸ್ಥಳೀಯ ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಕರೆ ಮಾಡಿ ‘ಹುಲಿ ಸೆರೆ ಕಾರ್ಯಾಚರಣೆಗೆ ಹೆಚ್ಚುವರಿ ಸಿಬ್ಬಂದಿ, ವೈದ್ಯರು ಹಾಗೂ ತಜ್ಞರನ್ನು ನಿಯೋಜಿಸಬೇಕು. ಸುತ್ತಮುತ್ತಲಿನ ಗ್ರಾಮಸ್ಥರು ಹುಲಿ ದಾಳಿ ಭೀತಿಯಲ್ಲಿದ್ದು ತಕ್ಷಣ ನೆರವಿವೆ ಧಾವಿಸಬೇಕು ಎಂದು ಮನವಿ ಮಾಡಿದರು.

ಸೆರೆ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಅರಣ್ಯ ಸಚಿವರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಚಾಮರಾಜನಗರ ತಾಲೂಕಿನ ನಂಜೇದೇವಪುರ ಗ್ರಾಮದ ಸಮೀಪದ ಕಲ್ಲುಕ್ವಾರಿ ಬಳಿ ಡ್ರೋನ್ ಕ್ಯಾಮೆರಾದಲ್ಲಿ ಪತ್ತೆಯಾಗಿರುವ ಐದು ಹುಲಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.